ವಿದ್ಯಾರ್ಥಿನಿಲಯ ನಿರ್ವಹಣೆ, ಶುಚಿತ್ವಕ್ಕೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಡಾ.ವೆಂಕಟೇಶ್

| Published : Jan 31 2024, 02:16 AM IST

ವಿದ್ಯಾರ್ಥಿನಿಲಯ ನಿರ್ವಹಣೆ, ಶುಚಿತ್ವಕ್ಕೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಡಾ.ವೆಂಕಟೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಕೆಲವು ತಿಂಗಳ ಹಿಂದೆ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಓದುತ್ತಿರುವ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆಕಸ್ಮಿಕವಾಗಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಸಮಸ್ಯೆಯಾಗಿದ್ದು ಕಾಣಲಾಗಿದೆ. ಇದಕ್ಕೆ ಕಾರಣ ಕರ್ತವ್ಯಗಳ ಸರಿಯಾಗಿ ಮಾಡದಿರುವುದರಿಂದ ಘಟನೆಗಳಾಗಿವೆ. ಹಾಸ್ಟೆಲ್‌ನಲ್ಲಿ ಶಿಕ್ಷಣ, ಶಿಸ್ತುಬದ್ಧ ನಿರ್ವಹಣೆ, ಶುಚಿತ್ವ ಮತ್ತು ರುಚಿಯಾದ ಊಟ ವಿದ್ಯಾರ್ಥಿಗಳಿಗೆ ನಾವು ಹೇಗೆ ಕೊಡಬೇಕು ಎಂದು ತಿಳಿದು ಎಲ್ಲಾ ವಿದ್ಯಾರ್ಥಿಗಳ ಬಗ್ಗೆ ನಿಗಾವಹಿಸಿ ತಮ್ಮ ಕರ್ತವ್ಯ ನಿರ್ವಹಿಸಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಆರ್ಥಿಕವಾಗಿ ಬಡವರಾಗಿರುವ, ಹಿಂದುಳಿದ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಉದ್ದೇಶದಿಂದ ಹಾಸ್ಟೆಲ್‌ಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಜಿಲ್ಲಾಡಳಿತ ಕಚೇರಿಯ ತುಂಗಾಭದ್ರ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಲ್ಲಿನ ಎಲ್ಲಾ ಮೆಟ್ರಿಕ್ ಪೂರ್ವ, ನಂತರದ ಹಾಗೂ ವಸತಿ ಶಾಲೆಗಳ ಪ್ರಾಚಾರ್ಯರು, ವಾರ್ಡನ್‌ಗಳು, ಅಡುಗೆ ಸಿಬ್ಬಂದಿಗೆ ಏರ್ಪಡಿಸಲಾದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿನಿಲಯಗಳಿವೆ, ಈ ನಿಲಯದ ವಾರ್ಡನ್‌ಗಳಿಗೆ ಈ ಕಾರ್ಯಾಗಾರದ ಮೂಲಕ ಬಹಳ ಸ್ಪಷ್ಟತೆ ನೀಡಲು ತರಬೇತಿ ಹಮ್ಮಿಕೊಳ್ಳಲಾಗಿದೆ. ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುವ ಜೊತೆಗೆ ವಸತಿ ಮತ್ತು ಊಟದ ಸೌಲಭ್ಯಗಳ ಕೊಡುತ್ತಿರುವುದು ಬಹುಶಃ ಇದು ಬೇರೆ ದೇಶಗಳಿಗೂ ಮಾದರಿ ಎಂದರು.

ಕಳೆದ ಕೆಲವು ತಿಂಗಳ ಹಿಂದೆ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯಲ್ಲಿ ಓದುತ್ತಿರುವ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆಕಸ್ಮಿಕವಾಗಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಸಮಸ್ಯೆಯಾಗಿದ್ದು ಕಾಣಲಾಗಿದೆ. ಇದಕ್ಕೆ ಕಾರಣ ಕರ್ತವ್ಯಗಳ ಸರಿಯಾಗಿ ಮಾಡದಿರುವುದರಿಂದ ಘಟನೆಗಳಾಗಿವೆ. ಹಾಸ್ಟೆಲ್‌ನಲ್ಲಿ ಶಿಕ್ಷಣ, ಶಿಸ್ತುಬದ್ಧ ನಿರ್ವಹಣೆ, ಶುಚಿತ್ವ ಮತ್ತು ರುಚಿಯಾದ ಊಟ ವಿದ್ಯಾರ್ಥಿಗಳಿಗೆ ನಾವು ಹೇಗೆ ಕೊಡಬೇಕು ಎಂದು ತಿಳಿದು ಎಲ್ಲಾ ವಿದ್ಯಾರ್ಥಿಗಳ ಬಗ್ಗೆ ನಿಗಾವಹಿಸಿ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.

ಕುಂದು ಕೊರತೆಗಳ ನಿವಾರಣೆಗೆ ಕ್ರಮ ವಹಿಸಿ:

ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುರೇಶ್.ಬಿ.ಇಟ್ನಾಳ್ ಮಾತನಾಡಿ, ಕಳೆದ ಬಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಲ್ಲಿ ಸ್ಫೂರ್ತಿಯ ನಡೆ ಒಂದು ಕಾರ್ಯಕ್ರಮವಾಗಿ ಬಜೆಟ್‌ನಲ್ಲಿ ಘೋಷಣೆಯಾಗಿದೆ. ದೇಹದ ಆರೋಗ್ಯ ಮತ್ತು ಸ್ಪೋಕನ್ ಇಂಗ್ಲೀಷ್ ತರಗತಿಗಳ ಪ್ರತಿ ವಾರ ಪ್ರಾಧ್ಯಾಪಕರಿಂದ ಏರ್ಪಡಿಸಲಾಗುತ್ತಿತ್ತು, ಇದಕ್ಕೆ ಹೆಚ್ಚಿನ ಸ್ಪಂದನೆಯೂ ಸಿಕ್ಕಿತ್ತು, ಇಂತಹ ಕಾರ್ಯಕ್ರಮಗಳ ಜಿಲ್ಲೆಯಲ್ಲಿ ಮಾಡಬೇಕೆಂದರು. ಹಾಸ್ಟೆಲ್‌ಗಳಲ್ಲಿ ಊಟ, ವಸತಿ ನಿರ್ವಹಣೆ ಬಗ್ಗೆ ವಾರ್ಡನ್‌ಗಳ ವಾಟ್ಸ್ಯಾಪ್ ಗ್ರೂಪ್ ರಚಿಸಿ ಕುಂದು ಕೊರತೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಾಗಾರದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ಮಠದ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಬೇಬಿ ಸುನೀತಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಗಾಯತ್ರಿ ಹಾಗೂ ವಸತಿ ಶಾಲೆಗಳ ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರಿದ್ದರು.