ಕುಡಿಯುವ ನೀರಿಗೆ ಆದ್ಯತೆ ನೀಡಿ: ಸಂಸದ ರಾಘವೇಂದ್ರ

| Published : Mar 02 2024, 01:46 AM IST

ಕುಡಿಯುವ ನೀರಿಗೆ ಆದ್ಯತೆ ನೀಡಿ: ಸಂಸದ ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಮೊದಲನೇ ಆದ್ಯತೆ ನೀಡಲಾಗಿದ್ದು, ಜಲಜೀವನ ಮಿಷನ್ ಅಡಿಯಲ್ಲಿ ಒಟ್ಟು 126 ಓವರ್‌ಹೆಡ್ ಟ್ಯಾಂಕ್‌ಗೆ ಮಂಜೂರಾತಿ ದೊರೆತಿದೆ. ಸೊರಬ, ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ಅರಣ್ಯ ಇಲಾಖೆಯಿಂದ ಒಪ್ಪಿಗೆ ಸಿಗುತ್ತಿಲ್ಲ ಎಂದು ಶಿವಮೊಗ್ಗದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಮೊದಲನೇ ಆದ್ಯತೆ ನೀಡಲಾಗಿದ್ದು, ಜಲಜೀವನ ಮಿಷನ್ ಅಡಿಯಲ್ಲಿ ಒಟ್ಟು 126 ಓವರ್‌ಹೆಡ್ ಟ್ಯಾಂಕ್‌ಗೆ ಮಂಜೂರಾತಿ ದೊರೆತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಸೊರಬ, ತೀರ್ಥಹಳ್ಳಿ, ಹೊಸನಗರ ಭಾಗದಲ್ಲಿ ಅರಣ್ಯ ಇಲಾಖೆಯಿಂದ ಒಪ್ಪಿಗೆ ಸಿಗುತ್ತಿಲ್ಲ. ಹೊಸನಗರದ ಬ್ರಹ್ಮೇಶ್ವರದಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆ ಅಕ್ಕಪಕ್ಕ ಇರುವ ಜಾಗದಲ್ಲಿ ಬೋರ್ ಕೊರೆಸಿ 5 ಇಂಚು ನೀರು ಬಿದ್ದಿದ್ದು, ಅರಣ್ಯ ಇಲಾಖೆಯವರು ಬೋರ್ ಮುಚ್ಚಿಹಾಕಿರುವುದು ಸರಿಯಲ್ಲ. ಕುಡಿಯುವ ನೀರಿಗೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪ್ರಗತಿಯಲ್ಲಿರುವ ಕಾಮಗಾರಿಗೆ ಚುನಾವಣೆ ಅಡಚಣೆ ಆಗುವುದಿಲ್ಲ. ಆದ್ದರಿಂದ ಇಲಾಖೆಗಳು ಸಮನ್ವಯ ಸಾಧಿಸಿಕೊಂಡು ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿ ಪ್ರಗತಿ ಸಾಧಿಸಬೇಕು. ರೈಲ್ವೆ ಇಲಾಖೆಯವರು ಭದ್ರಾವತಿ ಆರೋಬಿ ಕೆಲಸವನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಈ ತಿಂಗಳ ಕೊನೆಗೆ ಕೆಲಸ ಮುಗಿಸಿ ಹಸ್ತಾಂತರಿಸಬೇಕು. ವಿದ್ಯಾನಗರ ಬಳಿ ಅಂಡರ್‌ ಪಾಸ್ ಮಾಡುವ ಬಗ್ಗೆ ಶೀಘ್ರದಲ್ಲಿ ಪರಿಶೀಲಿಸಿ, ಕೆಲಸ ಪ್ರಾರಂಭಿಸಬೇಕು ಎಂದು ತಿಳಿಸಿದರು.

161 ಕಡೆ ಬಿಎಸ್‌ಎನ್‌ಎಲ್ ಟವರ್‌:

ಮೊಬೈಲ್ ನೆಟ್‌ವರ್ಕ್ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದ್ದು, ಕೇಂದ್ರ ಸರ್ಕಾರ ಗುಡ್ಡಗಾಡು, ನೆಟ್‌ವರ್ಕ್ ಇಲ್ಲದ ಸುಮಾರು 252 ಗ್ರಾಮಗಳಿಗೆ ನೆಟ್‌ವರ್ಕ್ ಟವರ್ ಸ್ಥಾಪಿಸಲು ಮಂಜೂರಾತಿ ನೀಡಿದೆ. ಇದುವರೆಗೆ 161 ಕಡೆ ಕೆಲಸ ಆರಂಭಿಸಲು ಯೋಜನೆ ಸಿದ್ದಪಡಿಸಿದ್ದು, ಇದರಲ್ಲಿ ಈಗಾಗಲೇ 14 ಕಾಮಗಾರಿ ಪೂರ್ಣಗೊಂಡಿದೆ. ಇನ್ನು 44 ಕಡೆ ಟವರ್‌ ಕಾಮಗಾರಿ ಪ್ರಗತಿಯಲ್ಲಿವೆ. ಉಳಿದಡೆ ಟವರ್‌ ನಿರ್ಮಿಸಲು ಅರಣ್ಯ ಮತ್ತು ಮೆಸ್ಕಾಂ ಇಲಾಖೆಯವರು ಸಹಕರಿಸಬೇಕು. ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದರೂ ಪ್ರಗತಿ ಕಾಣುತ್ತಿಲ್ಲ. ಆದ್ದರಿಂದ ಅರಣ್ಯ ಮತ್ತು ಮೆಸ್ಕಾಂ ಅಧಿಕಾರಿಗಳು ಸಮನ್ವಯದೊಂದಿಗೆ ಸಹಕರಿಸಬೇಕು. ಅಪರ ಜಿಲ್ಲಾಧಿಕಾರಿ ಈ ಕಡೆ ವಿಶೇಷ ಗಮನ ಹರಿಸಬೇಕು ಎಂದು ಸೂಚಿಸಿದರು.

ಪ್ಯಾಚ್‌ ವರ್ಕ್‌ಗಳಿಮದ ಅಪಘಾತ:

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಆಗುಂಬೆ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಪ್ಯಾಚ್‌ವರ್ಕ್ ಕಳಪೆಯಾಗಿದ್ದು ಅಪಘಾತಗಳು ಸಂಭವಿಸುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಶೀಘ್ರದಲ್ಲಿ ಇದನ್ನು ಗುಣಮಟ್ಟದೊಂದಿಗೆ ಸರಿಪಡಿಸಬೇಕು. ಸಭೆಗೆ ಹಾಜರಾಗದ ಕೆಆರೈಡಿಎಲ್ ಕಾರ್ಯಪಾಲಕ ಎಂಜಿನಿಯರ್‌ಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದರು.ಸಭೆಯಲ್ಲಿ ಸಮಿತಿ ನಾಮನಿರ್ದೇಶಿತ ಸದಸ್ಯ ಸುರೇಶ್, ನಾಗರತ್ನ, ಜಿ.ಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್, ಎಡಿಸಿ ಸಿದ್ದಲಿಂಗರೆಡ್ಡಿ ಮತ್ತಿತರರು ಇದ್ದರು.

- - - ಕೋಟ್‌ ಸ್ಮಾರ್ಟ್ ಸಿಟಿ ಯೋಜನೆಯಡಿ 2 ಕಾಮಗಾರಿಗಳು ಬಾಕಿ ಇವೆ. 2024 ರ ಜೂನ್‌ವರೆಗೆ ಸ್ಮಾರ್ಟ್‌ಸಿಟಿ ಯೋಜನೆ ಮುಕ್ತಾಯಗೊಳ್ಳಲಿದ್ದು, 10 ವರ್ಷ ಎಎಂಸಿ ಇರಲಿದೆ. ತುಂಗಾ ನದಿಯಲ್ಲಿ ಬೇಸಿಗೆ ಕಾಲ ಸೇರಿದಂತೆ ಎಲ್ಲ ಕಾಲದಲ್ಲಿ ಬೋಟಿಂಗ್ ಮಾಡಲು ಯೋಜನೆ ರೂಪಿಸಲಾಗಿದೆ

-ಎಂ.ಡಿ. ಮಾಯಣ್ಣಗೌಡ, ವ್ಯವಸ್ಥಾಪ ನಿರ್ದೇಶಕ, ಸ್ಮಾರ್ಟ್‌ಸಿಟಿ ಯೋಜನೆ, ಶಿವಮೊಗ್ಗ

- - - ಕೋಟ್‌ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲೇಶಪ್ಪ ಮಾತನಾಡಿ, ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ 2018-19ನೇ ಸಾಲಿಗೆ ₹4 ಕೋಟಿ ಅನುದಾನ ಬಿಡುಗಡೆಯಾಗಿದೆ. 122 ಕಾಮಗಾರಿ ಅನುಮೋದನೆಗೊಂಡು ₹3.4 ಕೋಟಿ ವೆಚ್ಚವಾಗಿದೆ. 113 ಕಾಮಗಾರಿ ಪೂರ್ಣವಾಗಿದೆ. 2019-20ನೇ ಸಾಲಿನಲ್ಲಿ ₹5.4 ಕೋಟಿ ಬಿಡುಗಡೆಯಾಗಿದ್ದು, ₹3.8 ಕೋಟಿ ಖರ್ಚಾಗಿದೆ. 2020-21ರಲ್ಲಿ ₹6.6 ಕೋಟಿ ಬಿಡುಗಡೆಯಾಗಿದ್ದು, ₹4.2 ಕೋಟಿ ಖರ್ಚಾಗಿದೆ

- ಮಲ್ಲೇಶಪ್ಪ, ಉಪನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ

- - - ಬಾಕ್ಸ್‌ ಕೃಷಿ ಸಿಂಚಾಯಿ; ಸೊರಬ ಶೇ.70, ಶಿಕಾರಿಪುರ ಶೇ.87 ಪ್ರಗತಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೊರಬ ಶೇ.70 ಮತ್ತು ಶಿಕಾರಿಪುರ ಶೇ.87 ಪ್ರಗತಿ ಸಾಧಿಸಲಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ 41333, ಹಿಂಗಾರಿನಲ್ಲಿ 258 ರೈತರು ನೋಂದಣಿಯಾಗಿದ್ದು ಇದೀಗ ಮಧ್ಯಂತರ ಪರಿಹಾರವಾಗಿ 16956 ರೈತರು ಒಟ್ಟು ₹6.96 ಕೋಟಿ ಪಡೆದಿದ್ದಾರೆ. 2023-24ನೇ ಸಾಲಿಗೆ ಮಣ್ಣು ಮಾದರಿ ಸಂಗ್ರಹಣೆ ಗುರಿ 5 ಸಾವಿರ ಇದ್ದು, 7251 ಮಾದರಿ ಸಂಗ್ರಹಣೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಪೂರ್ಣಿಮಾ ತಿಳಿಸಿದರು. - - - -1ಎಸ್‌ಎಂಜಿಕೆಪಿ03:

ಶಿವಮೊಗ್ಗದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಸಂಸದ ಬಿ.ವೈ.ರಾಘವೇಂದ್ರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆ ನಡೆಯಿತು. ಸಮಿತಿ ನಾಮನಿರ್ದೇಶಿತ ಸದಸ್ಯ ಸುರೇಶ್, ನಾಗರತ್ನ, ಜಿ.ಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್, ಎಡಿಸಿ ಸಿದ್ದಲಿಂಗ ರೆಡ್ಡಿ ಮತ್ತಿತರರು ಇದ್ದರು.