ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿ:ಅನ್ನಪೂರ್ಣಾ ಪಾಟೀಲ

| Published : Feb 06 2025, 12:15 AM IST

ಸಾರಾಂಶ

ಕಡ್ಡಾಯವಾಗಿ ಹೆಣ್ಣು ಮಗುವಿಗೆ ಶಿಕ್ಷಣ ಒದಗಿಸಬೇಕು.

ಬೇಟಿ ಬಚಾವೋ ಬೇಟಿ ಪಢಾವೋ ಅಭಿಯಾನ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಸಮಾಜದಲ್ಲಿ ಹೆಣ್ಣಿನ ಪಾತ್ರ ಬಹಳ ಮುಖ್ಯವಾಗಿದ್ದು, ಮಹಿಳಾ ಸಬಲೀಕರಣಕ್ಕೆ ಉತ್ತೇಜಿಸುವುದು ನಮ್ಮೆಲ್ಲರ ಆದ್ಯತೆಯಾಗಲಿ ಎಂದು ದೋಟಿಹಾಳ ವಲಯದ ಅಂಗನವಾಡಿ ಸೂಪರ್‌ವೈಸರ್ ಅನ್ನಪೂರ್ಣಾ ಪಾಟೀಲ ಹೇಳಿದರು.

ತಾಲೂಕಿನ ದೋಟಿಹಾಳ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಡೆದ ಬೇಟಿ ಬಚಾವೋ-ಬೇಟಿ ಪಢಾವೋ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಡ್ಡಾಯವಾಗಿ ಹೆಣ್ಣು ಮಗುವಿಗೆ ಶಿಕ್ಷಣ ಒದಗಿಸಬೇಕು. ಸಮಾಜದಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಸರ್ಕಾರದ ಯೋಜನೆಗಳನ್ನು ಉಪಯೋಗ ಮಾಡಿಕೊಳ್ಳಬೇಕು ಎಂದರು.

ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಬೇಟಿ ಬಚಾವೋ-ಬೇಟಿ ಪಢಾವೊ'''' ಯೋಜನೆಯು 2015ರ ಜನವರಿ 22ರಂದು ಪ್ರಾರಂಭಿಸಲಾಯಿತು. ಹೆಣ್ಣು ಮಕ್ಕಳ ಮೇಲಿನ ತಾರತಮ್ಯ ತೊಡೆದು ಹಾಕುವುದು, ಜನರಲ್ಲಿರುವ ನಕಾರಾತ್ಮಕ ಮನೋಭಾವ ಬದಲಾಯಿಸುವುದು, ಹೆಚ್ಚಾಗಿ ನಡೆಯುತ್ತಿರುವ ಬಾಲ್ಯ ವಿವಾಹ ತಡೆಗಟ್ಟಿ ಹೆಣ್ಣು ಮಕ್ಕಳನ್ನು ರಕ್ಷಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕಾರ್ಯಾಲಯದ ಅಧಿಕಾರಿ ಫಾತಿಮಾ ಮಾತನಾಡಿ, ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಯಾವುದೇ ತಾರತಮ್ಯವಿಲ್ಲದೆ ಬದುಕುವ ಮತ್ತು ಶಿಕ್ಷಣ ಪಡೆಯುವ ಹಕ್ಕಿದೆ. ಪ್ರತಿಯೊಬ್ಬ ಹೆಣ್ಣು ಮಗುವೂ ಶಿಕ್ಷಣ ಪಡೆಯಬೇಕು. ಹೆಣ್ಣು ಮಕ್ಕಳ ಲಿಂಗಾನುಪಾತವನ್ನು ಸುಧಾರಿಸಲು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ದೇಶದಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹ ಮತ್ತು ಹೆಣ್ಣು ಭ್ರೂಣ ಹತ್ಯೆ ತಡೆಯಬೇಕು. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಲೈಂಗಿಕ ಕಿರುಕುಳ, ಇನ್ನಿತರ ಸಮಸ್ಯೆಗಳು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098ಗೆ ಕರೆಮಾಡಿ ತಿಳಿಸಬಹುದು ಎಂದು ಹೇಳಿದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಕಂಟ್ಲಿ ಮಾತನಾಡಿದರು. ಶ್ರೀದೇವಿ, ಸವಿತಾ ಗುಗ್ಗರಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಸಲಿಮಾಬೇಗಂ, ಪೂರ್ಣಿಮಾ ದೇವಾಂಗಮಠ, ತಾರಾಭಿ ಯಲಬುರ್ಗಿ, ಶಿವಮ್ಮ ಪುಷ್ಪಾವತಿ, ರಜಿಯಾಬೇಗಂ ಹಾಗೂ ಅಂಗನವಾಡಿ ಸಹಾಯಕಿಯರು ಇದ್ದರು. ಜಾಗೃತಿ ಜಾಥಾ ನಡೆಸಲಾಯಿತು.