ದಾಬಸ್‍ಪೇಟೆ: ಸೋಂಪುರ ಪಟ್ಟಣ ಕೈಗಾರಿಕಾ ಹಬ್ ಆಗಿ ವೇಗವಾಗಿ ಬೆಳೆಯುತ್ತಿದ್ದು, ಕೈಗಾರಿಕಾ ಪ್ರದೇಶಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಕೈಗಾರಿಕಾ ಮಾಲೀಕರು ಸಹಕಾರ ನೀಡಬೇಕು ಎಂದು ನೆಲಮಂಗಲ ಉಪವಿಭಾಗದ ಡಿವೈಎಸ್ಪಿಉಮಾರಾಣಿ ತಿಳಿಸಿದರು

ದಾಬಸ್‍ಪೇಟೆ: ಸೋಂಪುರ ಪಟ್ಟಣ ಕೈಗಾರಿಕಾ ಹಬ್ ಆಗಿ ವೇಗವಾಗಿ ಬೆಳೆಯುತ್ತಿದ್ದು, ಕೈಗಾರಿಕಾ ಪ್ರದೇಶಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಕೈಗಾರಿಕಾ ಮಾಲೀಕರು ಸಹಕಾರ ನೀಡಬೇಕು ಎಂದು ನೆಲಮಂಗಲ ಉಪವಿಭಾಗದ ಡಿವೈಎಸ್ಪಿಉಮಾರಾಣಿ ತಿಳಿಸಿದರು.

ಪಟ್ಟಣದಲ್ಲಿ ದಾಬಸ್‍ಪೇಟೆ ಪೊಲೀಸ್ ಠಾಣೆ ಹಮ್ಮಿಕೊಂಡಿದ್ದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೈಗಾರಿಕೆಗಳಲ್ಲಿ ಕಾರ್ಮಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ, ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ ಎಂಬ ಆರೋಪ, ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು ಅವರ ಅರ್ಹತೆಗೆ ತಕ್ಕಂತೆ ಉದ್ಯೋಗ ನೀಡಿದಾಗ ಅವರಿಗೂ ಅನುಕೂಲವಾಗುತ್ತದೆ. ಅದಲ್ಲದೆ ತಮ್ಮ ಕಂಪನಿಗಳಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳಬಾರದು. ಹಾಗೇನಾದರೂ ಕಂಡು ಬಂದರೆ ಶಿಸ್ತುಕ್ರಮ ವಹಿಸುತ್ತೇವೆ ಎಂದರು.

ಕಂಪನಿಯಲ್ಲಿ ಮಹಿಳೆಯರ ವಿಶ್ರಾಂತಿಗಾಗಿ ಪ್ರತ್ಯೇಕ ಕೊಠಡಿಗಳನ್ನು ಮೀಸಲಿಟ್ಟಿರಬೇಕು. ಹೆಣ್ಣು ಮಕ್ಕಳ ಮೇಲೆ ಯಾವುದೇ ದೌರ್ಜನ್ಯವಾಗದಂತೆ ಕ್ರಮ ವಹಿಸಬೇಕು. ಕಾರ್ಮಿಕರ ಬಳಿ ಅವಧಿಗಿಂತ ಹೆಚ್ಚು ಸಮಯ ಕೆಲಸ ಮಾಡುವಂತೆ ಒತ್ತಡ ಹಾಕಬೇಡಿ, ಕಾರ್ಮಿಕರನ್ನು ಕೂಲಿ ಆಳುಗಳಂತೆ ನೋಡದೆ ತಮ್ಮ ಮನೆಯ ಸದಸ್ಯರಂತೆ ನೋಡಿ ಕೆಲಸ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಇತ್ತೀಚಿಗೆ ಗಾಂಜಾ ಮಾರಾಟಗಾರರು, ಅಕ್ರಮ ಬಾಂಗ್ಲಾ ವಲಸಿಗರು ಕೈಗಾರಿಕಾ ಪ್ರದೇಶದಲ್ಲಿ ಪತ್ತೆಯಾಗುತ್ತಿರುವುದನ್ನು ಕಾಣುತ್ತಿರುವ ಹಿನ್ನೆಲೆಯಲ್ಲಿ ಕೈಗಾರಿಕೆಗಳಲ್ಲಿ ಅನ್ಯರಾಜ್ಯದವರು ಕೆಲಸಕ್ಕೆ ಬಂದಾಗ ಅವರ ಪೂರ್ವಪರ ವಿಚಾರಿಸಿ ದಾಖಲಾತಿ ಪಡೆದು ಕೆಲಸಕ್ಕೆ ಸೇರಿಸಿಕೊಳ್ಳಬೇಕು. ತಮ್ಮ ಕಂಪನಿಯ ಸಿಎಸ್‍ಆರ್ ಅನುದಾನದಲ್ಲಿ ದಾಬಸ್‍ಪೇಟೆ ಪ್ರಮುಖ ಸ್ಥಳಗಳಲ್ಲಿ ಪಾರ್ಕಿಂಗ್ ಫಲಕಗಳು, ಸಿಸಿಟಿವಿ, ಹೈಮಾಸ್ಕ್, ಶೌಚಾಲಯಗಳ ಇತರ ಸಾಮಾಜಿಕ ಸೇವೆಗಳನ್ನು ಮಾಡಿದರೆ ನಮ್ಮ ಪೊಲೀಸ್ ಇಲಾಖೆಯೂ ನಿಮ್ಮ ಕಾರ್ಯಕ್ಕೆ ಕೈ ಜೋಡಿಸುತ್ತದೆ ಎಂದರು.

ಪೊಲೀಸ್ ಇನ್ಸ್ ಪೆಕ್ಟರ್ ಧರ್ಮೇಂದ್ರ ಮಾತನಾಡಿ, ಸೋಂಪುರ ಕೈಗಾರಿಕಾ ಪ್ರದೇಶವೂ ಏಳು ಹಂತಗಳಲ್ಲಿ ಅಭಿವೃದ್ದಿಯಾಗುತ್ತಿದ್ದು, ಪೊಲೀಸ್ ಸಿಬ್ಬಂದಿಯ ಕೊರತೆಯಿರುವ ಕಾರಣ ಎಲ್ಲ ಕಡೆಗಳಲ್ಲೂ ನಿಗಾವಹಿಸಲು ಕಷ್ಟವಾಗುತ್ತಿದೆ. ಕೈಗಾರಿಕೋದ್ಯಮಿಗಳು ಯಾವುದೇ ಮಾಹಿತಿ ಹಾಗೂ ತೊಂದರೆಯಾದಲ್ಲಿ ತಕ್ಷಣ ನಮ್ಮ ಪೊಲೀಸ್ ಠಾಣಾ ನಂಬರ್ ಅಥವಾ ನಮ್ಮ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದರೆ ತಕ್ಷಣ ಸ್ಪಂದಿಸುತ್ತೇವೆ ಎಂದರು.

ಸೋಂಪುರ ಕೈಗಾರಿಕಾ ಸಂಘದ ಅಧ್ಯಕ್ಷ ಕಂಠಪ್ಪ ಮಾತನಾಡಿ ನಮ್ಮ ಕೈಗಾರಿಕಾ ಪ್ರದೇಶದಲ್ಲಿ ಇತ್ತೀಚಿಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ ಪೊಲೀಸ್ ಇಲಾಖೆ ರಾತ್ರಿ ಸಮಯದಲ್ಲಿ ಬೀಟ್ ವ್ಯವಸ್ಥೆ ಹೆಚ್ಚಿಸಬೇಕು. ಹಾಗೂ ಅವ್ವೇರಹಳ್ಳಿ, ಮಾಚನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿ ಭೂಸ್ವಾಧೀನಪಡಿಸಿಕೊಂಡಿರುವ ಜಮೀನುಗಳಲ್ಲಿ ಕೆಲವು ಭೂಮಾಪೀಯಾದವರು ರಾತ್ರಿ ವೇಳೆ ಮೂವತ್ತರಿಂದ ಐವತ್ತು ಅಡಿ ಅಳಕ್ಕೆ ಮಣ್ಣು ತೆಗೆದು ಮಾರಾಟ ಮಾಡುತ್ತಿದ್ದಾರೆ ಹೀಗಾದರೆ ನಮ್ಮ ಕೈಗಾರಿಕೋದ್ಯಮಿಗಳು ಕೈಗಾರಿಕೆ ಆರಂಭಿಸುವುದು ಹೇಗೆ ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ವಹಿಸಿ ಪತ್ತೆ ಹಚ್ಚಿ ಕಾನೂನು ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸೋಂಪುರ ಕೈಗಾರಿಕಾ ಪ್ರದೇಶದ ವಿವಿಧ ಕಂಪನಿಗಳ ಮಾಲೀಕರು, ಮಾನವ ಸಂಪನ್ಮೂಲ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಪೋಟೋ 6 * 7 :

ದಾಬಸ್‍ಪೇಟೆಯಲ್ಲಿ ದಾಬಸ್‍ಪೇಟೆ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ನೆಲಮಂಗಲ ಉಪವಿಭಾಗದ ಡಿವೈಎಸ್ಪಿ ಉಮಾರಾಣಿ ಮಾತನಾಡಿದರು.