ಗದಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ

| Published : Apr 21 2024, 02:18 AM IST

ಗದಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಉದ್ಯಮ, ಜವಳಿ ಪಾರ್ಕ್, ಮೆಣಸಿನಕಾಯಿ ಕೋಲ್ಡ್ ಸ್ಟೋರೇಜ್, ಜಿಲ್ಲೆಗೆ ಪ್ರತ್ಯೇಕ ಹಾಲು ಉತ್ಪಾದನಾ ಒಕ್ಕೂಟ ಸೇರಿದಂತೆ ಗದಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

ಗದಗ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಉದ್ಯಮ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಹೊಂದಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಶನಿವಾರ ಇಲ್ಲಿ ಆಯೋಜಿಸಿದ್ದ ಜನತಾ ಸಂವಾದ ಕಾರ್ಯಕ್ರಮದಲ್ಲಿ ಎರಡು ಗಂಟೆ ಕಾಲ ಸಾರ್ವಜನಿಕರ ಅಹವಾಲು ಮತ್ತು ಸಲಹೆ ಸ್ವೀಕರಿಸಿ ಮಾತನಾಡಿದರು.

ಗದಗ ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಉದ್ಯಮ, ಜವಳಿ ಪಾರ್ಕ್, ಮೆಣಸಿನಕಾಯಿ ಕೋಲ್ಡ್ ಸ್ಟೋರೇಜ್, ಜಿಲ್ಲೆಗೆ ಪ್ರತ್ಯೇಕ ಹಾಲು ಉತ್ಪಾದನಾ ಒಕ್ಕೂಟ ಸೇರಿದಂತೆ ಗದಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ಗದಗನಲ್ಲಿ ಪ್ರಮುಖವಾಗಿ ನೀರಿನ ಸಮಸ್ಯೆ ಇದೆ. ನೀರಿನ ಸಮಸ್ಯೆಗೆ ಎಂಡ್ ಟು ಎಂಡ್ ಪರಿಹಾರ ಸಿಕ್ಕಿಲ್ಲ. ಮಲಪ್ರಭಾ ಯೋಜನೆಯಿಂದ ನೀರು ತಂದರೂ ಸೋರಿಕೆಯಾಗುತ್ತಿದೆ. ಸಿಂಗಟಾಲೂರು ಯೋಜನೆ ಮಾಡಿದ ಮೇಲೆ ಬ್ಯಾರೇಜ್ ನಲ್ಲಿ ನೀರು ಸಂಗ್ರಹ ಮಾಡಲು ಅವಕಾಶವಾಗಿದೆ. ನಾನು ಮುಖ್ಯಮಂತ್ರಿ ಇದ್ದಾಗ ಅಮೃತ 2 ಯೊಜನೆ ಅಡಿ ₹140 ಕೋಟಿ ವೆಚ್ಚದಲ್ಲಿ ಕುಡಿವ ನೀರಿನ ಯೋಜನೆ ಜಾರಿ ಮಾಡಿದ್ದೇವೆ. ಈಗಿನ ಸರ್ಕಾರ ಅದನ್ನು ಸರಿಯಾಗಿ ಅನುಷ್ಠಾನ ಮಾಡಿದರೆ, ಗದಗ ನಗರದ ನೀರಿನ ಬಹುತೇಕ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

ಪ್ರತ್ಯೇಕ ಹಾಲು ಒಕ್ಕೂಟ: ನಾನು ಸಿಎಂ ಆಗಿದ್ದಾಗ ಹಾವೇರಿಯಲ್ಲಿ ಪ್ರತ್ಯೇಕ ಹಾಲು ಉತ್ಪಾದಕರ ಘಟಕ ಸ್ಥಾಪನೆ ಮಾಡಿದ್ದೇವೆ. ಇದರಿಂದ ಅಲ್ಲಿ ಹಾಲು ಉತ್ಪಾದನೆ ಹೆಚ್ಚಳವಾಗಿದೆ. ಗದಗನ ಸ್ಥಳಿಯ ಮುಖಂಡರ ಸಹಕಾರ ಸಿಕ್ಕರೆ ಈ ಜಿಲ್ಲೆಗೂ ಪ್ರತ್ಯೇಕ ಹಾಲು ಉತ್ಪಾದಕರ ಒಕ್ಕೂಟ ಮಾಡಲು ಕ್ರಮ ವಹಿಸಲಾಗುವುದು. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಇದಕ್ಕೆ ರಾಜ್ಯ ಸರ್ಕಾರದ ಸಹಕಾರ ಅಗತ್ಯವಿದೆ. ಇದೊಂದು ನನಗೆ ಕಣ್ಣು ತೆರೆಸುವ ಕಾರ್ಯಕ್ರಮ, ಸಕಾರಾತ್ಮಕ ಚರ್ಚೆಯಾಗಿದೆ. ನಾವು ನೀವು ಸೇರಿ ಮುಂದಿನ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಸಿ.ಪಾಟೀಲ್, ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಮತ್ತಿತರರು ಹಾಜರಿದ್ದರು.