ಮೂಡಲಗಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಆದ್ಯತೆ: ಸರ್ವೋತ್ತಮ ಜಾರಕಿಹೊಳಿ

| Published : Sep 30 2024, 01:23 AM IST

ಮೂಡಲಗಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಆದ್ಯತೆ: ಸರ್ವೋತ್ತಮ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿ ವಲಯದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರಿಂದಲೇ ಈ ಭಾಗದಲ್ಲಿ ದಾಖಲೆ ಮಟ್ಟದಲ್ಲಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಆಯ್ಕೆಯಾಗುವ ಮೂಲಕ ವಿದ್ಯಾರ್ಥಿಗಳು ಕ್ಷೇತ್ರದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿ ವಲಯದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರಿಂದಲೇ ಈ ಭಾಗದಲ್ಲಿ ದಾಖಲೆ ಮಟ್ಟದಲ್ಲಿ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಆಯ್ಕೆಯಾಗುವ ಮೂಲಕ ವಿದ್ಯಾರ್ಥಿಗಳು ಕ್ಷೇತ್ರದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಭಾನುವಾರ ನಗರದ ಎನ್‌ಎಸ್‌ಎಫ್ ಕಚೇರಿಯಲ್ಲಿ 2023-24ನೇ ಸಾಲಿನ ವ್ಯಾಸಂಗ ಮಾಡಿ ಉನ್ನತ ವೃತ್ತಿಪರ ಕೋರ್ಸ್‌ಗಳಿಗೆ ಆಯ್ಕೆಗೊಂಡ 55 ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಿ ಮಾತನಾಡಿದ ಅವರು, ಈ ಎಲ್ಲ ಸಾಧನೆಗೈದ ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶನ ನೀಡಿದ ಗುರುಗಳನ್ನು ಅಭಿನಂದಿಸಿದರು.

ಬಾಲಚಂದ್ರ ಜಾರಕಿಹೊಳಿ ಅವರು ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ದೂರದೃಷ್ಟಿ ಚಿಂತನೆಯೊಂದಿಗೆ ನೀಡುತ್ತಿರುವ ಸಹಾಯ, ಸಹಕಾರದ ಪ್ರತಿಫಲವೇ ಈ ಸಾಧನೆಯಾಗಿದೆ. ಸರ್ಕಾರಕ್ಕಿಂತ ಮೊದಲೇ ಮೂಡಲಗಿ ವಲಯದ ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನಿಯೋಜಿಸಿ ಅವರಿಗೆ ವೈಯಕ್ತಿಕವಾಗಿ ವೇತನ ಕಲ್ಪಿಸಿಕೊಟ್ಟ ಮಹಾನುಭಾವರು ಶಾಸಕರು ಎಂದ ಅವರು, ಶಿಕ್ಷಣಕ್ಕೆ ನೀಡುತ್ತಿರುವ ಪ್ರೋತ್ಸಾಹವನ್ನು ಯಾರೂ ಮರೆಯಲಾರರು ಎಂದು ಹೇಳಿದರು.

ಸಾಧಕರಾದವರು ವೃತ್ತಿ ಬದುಕಿನಲ್ಲಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ ಜನಮೆಚ್ಚುಗೆ ಗಳಿಸಬೇಕು. ಸಾಧ್ಯವಿದ್ದ ಮಟ್ಟಿಗೆ ಹುಟ್ಟೂರಿನ ಋಣ ತೀರಿಸಲು ಪ್ರಯತ್ನಿಸಬೇಕು. ತಂದೆ-ತಾಯಿ, ಕಲಿತ ಶಾಲೆಗೆ ಒಳ್ಳೆಯ ಹೆಸರು ತರುವ ಮೂಲಕ ಕ್ಷೇತ್ರದ ಕೀರ್ತಿಯನ್ನು ಎಲ್ಲೆಡೆ ಹರಡುವಂತೆ ತಿಳಿಸಿದರು.

ಇತ್ತೀಚೆಗೆ ವಿದೇಶ ಪ್ರವಾಸಕ್ಕೆ ತೆರೆಳಿದ್ದ ಸಂದರ್ಭದಲ್ಲಿ ನನ್ನ ಪಾಸ್ಫೋರ್ಟ್‌ ತಪಾಸಿಸುವಾಗ ಅಲ್ಲಿದ್ದ ಸಿಬ್ಬಂದಿಯೋರ್ವ ನಾನು ಕೂಡ ನಿಮ್ಮ ಸಂಸ್ಥೆಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದೀನಿ ಎಂದು ಪರಿಚಯ ಮಾಡಿಕೊಂಡರು. ನನಗೂ ಕೂಡ ಖುಷಿಯಾಯ್ತು. ಇದರರ್ಥ ನಾವು ಎಷ್ಟೇ ಸಾಧನೆ ಮಾಡಿದರೂ ಹಿಂದಿನದ್ದನ್ನು ಮರೆಯಬಾರದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸರ್ವೋತ್ತಮ ಜಾರಕಿಹೊಳಿ ಅವರು ವಿವಿಧ ವೈದ್ಯಕೀಯ ಮಹಾವಿದ್ಯಾಲಯಗಳಿಗೆ ಆಯ್ಕೆಯಾದ 43 ವಿದ್ಯಾರ್ಥಿಗಳು, 4 ಜನ ಚಿನ್ನದ ಪದಕ ವಿಜೇತರು, ಐಐಟಿ ಮತ್ತು ಎನ್‌ಐಟಿಗೆ ಆಯ್ಕೆಯಾದ ಮೂವರು ವಿದ್ಯಾರ್ಥಿಗಳು, ಇಬ್ಬರು ಲೆಕ್ಕ ಪರಿಶೋಧಕರು, ತಲಾ ಓರ್ವ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಹಾಯಕ ಕಮಾಂಡೆಂಟ್ ಮತ್ತು ಪಿಎಚ್‌ಡಿ ಪಡೆದ ಒಟ್ಟು 55 ಸಾಧಕರನ್ನು ಸತ್ಕರಿಸಿ ಸವಿನೆನಪಿನ ಕಾಣಿಕೆ ನೀಡಲಾಯಿತು. ಪಾಲಕರನ್ನು ಸಹ ಸತ್ಕರಿಸಲಾಯಿತು.

ಗೋಕಾಕ ತಹಸೀಲ್ದಾರ್ ಡಾ. ಮೋಹನ ಭಸ್ಮೆ, ತಾಪಂ ಇಒಗಳಾದ ಪರಶುರಾಮ ಘಸ್ತಿ, ಫಕೀರಪ್ಪ ಚಿನ್ನನವರ, ಗೋಕಾಕ ಬಿಇಒ ಜಿ.ಬಿ. ಬಳಗಾರ, ಸಮಾಜ ಕಲ್ಯಾಣ ಇಲಾಖೆಯ ಎ.ಡಿ. ಮಲಬನ್ನವರ, ಡಾ.ಬೆಂಚಿನಮರಡಿ, ಮೂಡಲಗಿ ಶರಸ್ತೇದಾರ ಪರಶುರಾಮ ನಾಯಿಕ ಹಾಗೂ ಮುಖಂಡರು ಇದ್ದರು.ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.