ಸಾರಾಂಶ
ಕನ್ನಡಪ್ರಭ ವಾರ್ತೆ ಬೀರೂರು.
ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸಂಖ್ಯೆ ಪರಿಶಿಷ್ಟ ಜಾತಿ ಮತ್ತು ಪಂಗಡದವರು ವಾಸಿಸುತ್ತಿರುವ ಈ ಬಡಾವಣೆಯಲ್ಲಿ ತಾವೆಲ್ಲ ಸುಂದರ ಬದುಕು ಕಟ್ಟಿಕೊಂಡು ಜೀವನ ಮಾಡುವುದನ್ನು ನೋಡಿದರೆ ಸಂತೋಷವಾಗುತ್ತದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಹೇಳಿದರು.ಸರಸ್ವತಿಪುರಂ ಬಡಾವಣೆ ಶ್ರೀಮೈಲಾರಲಿಂಗೇಶ್ವರ ದೇಗುಲ ಮುಂಭಾಗ ಮಾದಿಗ ಸಮುದಾಯದವರೊಂದಿಗೆ ಕುಂದುಕೊರತೆ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆ ಮತ್ತು ಸವಲತ್ತು ರೂಪಿಸಿದೆ. ಅಂತಹ ಯೋಜನೆ ಫಲಾನುಭವಿಯಾಗಲು ಸಮಸ್ಯೆ ಹೇಳಿದರೆ ಸಂಬಂಧಪಟ್ಟ ಇಲಾಖೆ ಜೊತೆ ಚರ್ಚಿಸಲಾಗುವುದು ಎಂದರು.
ಪುರಸಭೆ ಸಮುದಾಯ ಒಕ್ಕೂಟದ ಲಕ್ಷ್ಮಿದೇವಿ ನಮ್ಮ ಈ ಬಡಾವಣೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಮಹಿಳೆಯರು ಉದ್ಯೋಗವಿಲ್ಲದೆ, ಸ್ವ ಉದ್ಯೋಗ ನಡೆಸಲು ತಯಾರಿದ್ದು, ಸರ್ಕಾರ ಮತ್ತು ಜಿಲ್ಲಾಡಳಿತ ಸಹಕಾರ ನೀಡುವಂತೆ ಕೋರಿದರು.ತಕ್ಷಣ ಎಸ್ಪಿ ವಿಕ್ರಮ ಅಮಟೆ ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗೆ ದೂರವಾಣಿ ಕರೆ ಮಾಡಿ ಸುಮಾರು 200ಕ್ಕೂ ಅಧಿಕ ಶಿಕ್ಷಿತ ಮಹಿಳೆಯರಿದ್ದು, ಅವರಿಗೆ ಉದ್ಯೋಗ ಕಲ್ಪಿಸಲು ಸರ್ಕಾರದ ಯೋಜನೆಗಳಾದ ಹೊಲಿಗೆ, ಬ್ಯೂಟಿಷಿಯನ್ ಮತ್ತಿತರ ತರಬೇತಿ ನೀಡಿ ಉತ್ತೇಜಿಸುವಂತೆ ತಿಳಿಸಿದರು.
ಮಾದಿಗ ಮೀಸಲಾತಿ ಹೊರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಬಿ.ಟಿ.ಚಂದ್ರಶೇಖರ್ ಮಾತನಾಡಿ, ಬೀರೂರು-ಅಜ್ಜಂಪುರ- ದಾವಣಗೆರೆ ರಾಜ್ಯ ಹೆದ್ದಾರಿಯವರು ಪಟ್ಟಣ ವ್ಯಾಪ್ತಿಯಲ್ಲಿ ಫುಟ್‌ಪಾತ್ ನಿರ್ಮಾಣದ ಸಮಯದಲ್ಲಿ ಲಕ್ಷಾಂತರ ರು. ಪಡೆದು ಸರ್ಕಾರಕ್ಕೆ ಜಾಗ ಬಿಟ್ಟಿದ್ದಾರೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಫುಟ್‌ಪಾತ್ ನಿರ್ಮಾಣವಾಗಿಲ್ಲ. ಹಣ ಪಡೆದ ಮಾಲೀಕರು ಮತ್ತೆ ಅಂಗಡಿ ಸ್ಥಾಪಿಸಿದ ಪರಿಣಾಮ ಇಂದು ಸಾರ್ವಜನಿಕರು, ಪಾದಚಾರಿಗಳು ರಸ್ತೆಯಲ್ಲೇ ಸಂಚಾರ ಮಾಡುತ್ತಿದ್ದು, ಅಪಘಾತ ಸಂಭವಿಸಿದರೇ ಇದಕ್ಕೆ ನೇರ ಹೊಣೆಗಾರರು ಪಿಡಬ್ಲ್ಯೂಡಿ ಮತ್ತು ಪುರಸಭೆಯವರೇ ಆಗುತ್ತಾರೆ. ಅದನ್ನು ತಪ್ಪಿಸಲು ಶೀಘ್ರ ಒತ್ತುವರಿ ತೆರವು ಮಾಡಿ ಮಾಲೀಕರಿಗೆ ದಂಡ ವಿಧಿಸಿ ಎಂದು ಆಗ್ರಹಿಸಿದರು.ಇದಕ್ಕೆ ಎಸ್ಪಿ ಈ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಶೀಘ್ರ ಫುಟ್‌ಪಾತ್ ತೆರವು ಮಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ದೇವಸ್ಥಾನ ಕಮಿಟಿ ಜಯಣ್ಣ ಮಾತನಾಡಿ, ಖಾಸಗಿ ಉದ್ಯೋಗ ಮಾಡುತ್ತಿರುವ ಹಲವಾರು ಯುವಕರಿಗೆ ಆರ್‌ಟಿಒದಿಂದ ಚಾಲನಾ ಪರವಾನಗಿಯನ್ನು ಬಡಾವಣೆಯಲ್ಲಿಯೇ ಮಾಡಿಕೊಡುವಂತೆ ಎಸ್ಪಿಗೆ ಮನವಿ ಮಾಡಿದರು. ಎಸ್ಪಿ ತರೀಕೆರೆ ಆರ್‌ಟಿಒ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಬಡಾವಣೆಯಲ್ಲಿ ಚಾಲನಾ ಪರವಾನಗಿ ಕ್ಯಾಂಪ್ ಆಯೋಜಿಸಲಾಗುವುದು. ನಮ್ಮ ಪೊಲೀಸ್ ಇಲಾಖೆ ಸಹಕಾರದಲ್ಲಿ ಯುವಕರು ಇದರ ಸದುಪಯೋಗ ಪಡೆದುಕೊಳ್ಳಲಿ. ಸಾರ್ವಜನಿಕರು ಕಾನೂನು ಪ್ರಕರಣಗಳ ಬಗ್ಗೆ ಬೆಳಕು ಚೆಲ್ಲಿದ್ದೀರಿ, ಈ ಬಗ್ಗಯೂ ಚರ್ಚಿಸುವುದಾಗಿ ಹೇಳಿದರು.ಈ ವೇಳೆ ತರೀಕೆರೆ ಉಪವಿಭಾಗದ ಡಿವೈಎಸ್‌ಪಿ ವಿ.ಎಸ್. ಹಾಲಮೂರ್ತಿರಾವ್, ವೃತ್ತ ನಿರೀಕ್ಷಕ ಎಸ್.ಎನ್ ಶ್ರೀಕಾಂತ್, ಪಿಎಸೈ ಸಜಿತ್ ಕುಮಾರ್, ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಸದಸ್ಯರಾದ ಲೋಕೇಶಪ್ಪ, ಗೌಡರಾದ ತಿಪ್ಪೇಶ್, ಹಾಲಪ್ಪ, ಶಿವಣ್ಣ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್, ಪುಟ್ಟಸ್ವಾಮಿ, ಶಂಕರ್, ಶಾಂತಕುಮಾರ್ ಸೇರಿದಂತೆ ಮತ್ತಿತರರು ಇದ್ದರು.
------------ಬೀರೂರಿನ ಸರಸ್ವತಿಪುರಂ ಬಡಾವಣೆ ಶ್ರೀಮೈಲಾರಲಿಂಗೇಶ್ವರ ದೇಗುಲ ಮುಂಭಾಗ ಮಾದಿಗ ಸಮುದಾಯದ ಮುಖಂಡರು ಹಾಗೂ ಸಮಾಜ ಬಾಂಧವರೊಂದಿಗೆ ನಡೆದ ಕುಂದು ಕೊರತೆ ಸಭೆ ಅಧ್ಯಕ್ಷತೆಯನ್ನು ಜಿಲ್ಲಾ ಎಸ್ಪಿ ವಿಕ್ರಂ ಅಮಟೆ ವಹಿಸಿದ್ದರು.