ಸಾರಾಂಶ
ಕೂಡ್ಲಿಗಿ: ಮಾನಸಿಕ ಅಸ್ವಸ್ಥೆಯ ಅತ್ಯಾಚಾರಗೈದು, ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ ಘಟನೆ ಶುಕ್ರವಾರ ತಡರಾತ್ರಿ ತಾಲೂಕಿನ ಕಾನಹೊಸಹಳ್ಳಿ ಸಮೀಪದ ಗಡಿಗ್ರಾಮ ತಿಪ್ಪೇಹಳ್ಳಿ ಹೊರವಲಯದಲ್ಲಿ ನಡೆದಿದೆ.
ಮಾನಸಿಕ ಅಸ್ವಸ್ಥೆ ನೇತ್ರಾವತಿ (30) ಕೊಲೆಯಾದ ಯುವತಿ ಎಂದು ಗುರುತಿಸಲಾಗಿದೆ.
ಈಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಅಬ್ಬೇನಹಳ್ಳಿ ಗ್ರಾಮದ ಅವಿವಾಹಿತ ಯುವತಿ. ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥಳಾಗಿ ಬಳಲುತ್ತಿದ್ದ ಈ ಯುವತಿ ಸ್ವಗ್ರಾಮ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಓಡಾಡುತ್ತಿದ್ದಳು ಎಂದು ತಿಳಿದು ಬಂದಿದೆ.
ಕೂಡ್ಲಿಗಿ ಹಾಗೂ ಚಳ್ಳಕೆರೆ ತಾಲೂಕಿನ ಗಡಿಭಾಗದ ತಿಪ್ಪೇಹಳ್ಳಿ ಗ್ರಾಮದ ಹೊರವಲಯದಲ್ಲಿ ಈ ಕೃತ್ಯ ನಡೆದಿದ್ದು, ಮಾನಸಿಕ ಅಸ್ವಸ್ಥತೆಯನ್ನು ದುರುಪಯೋಗ ಪಡೆದ ದುರಳರು ರಾತ್ರಿ ಸಮಯದಲ್ಲಿ ಗ್ರಾಮದ ಹೊರವಲಯಕ್ಕೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಂಡು, ಆನಂತರ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬೆಚ್ಚಿದ ಜನತೆ:
ಶುಕ್ರವಾರ ರಾತ್ರಿ ವೇಳೆ ಕೊಲೆಯಾಗಿದ್ದು, ತಿಪ್ಪೇಹಳ್ಳಿ ಗ್ರಾಮದ ಜನರಿಗೆ ಶನಿವಾರ ಬೆಳಗ್ಗೆ ಗೊತ್ತಾಗಿದೆ. ಕೊಲೆಯಾದ ಘಟನಾ ಸ್ಥಳಕ್ಕೆ ಗ್ರಾಮಸ್ಥರು ರಕ್ತಸಿಕ್ತ ಶವ ಕಂಡು ಮಮ್ಮಲ ಮರುಗಿದರು. ಕೊಲೆಯ ಭೀಕರತೆ ಕಂಡು ಇಡೀ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಎಸ್ಪಿ ಭೇಟಿ: ಯುವತಿ ಕೊಲೆಯಾದ ಮಾಹಿತಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಎಸ್ಪಿ ಶ್ರೀಹರಿಬಾಬು ಭೇಟಿ ನೀಡಿದ್ದಾರೆ. ಶ್ವಾನ ದಳ, ಬೆರಳಚ್ಚು ತಜ್ಞರ ತಂಡ ಆಗಮಿಸಿತ್ತು. ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಕೊಟ್ಟೂರು ಸಿಪಿಐ ವೆಂಕಟಸ್ವಾಮಿ, ಕಾನಹೊಸಹಳ್ಳಿ ಪಿಎಸೈ ಸಿದ್ದರಾಮಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ ಸಮೀಪದ ತಿಪ್ಪೇಹಳ್ಳಿ ಗ್ರಾಮದ ಹೊರವಲಯದಲ್ಲಿ ಮಾನಸಿಕ ಅಸ್ವಸ್ಥೆ ನೇತ್ರಾವತಿ ಕೊಲೆಯಾದ ಸ್ಥಳಕ್ಕೆ ಎಸ್ಪಿ ಶ್ರೀಹರಿಬಾಬು ಭೇಟಿ ನೀಡಿ ಪರಿಶೀಲಿಸಿದರು.