ಕನ್ನಡಪ್ರಭ ವಾರ್ತೆ ಬಾಗಲಕೋಟೆರಾಜ್ಯದಲ್ಲಿ ಒಂದೆಡೆ ನೀರಿನ ಸಮಸ್ಯೆ, ಮತ್ತೊಂದೆಡೆ ಬರದ ಸಮಸ್ಯೆ ಎದುರಾಗಿದೆ. ಒಂದೇ ತಾಲೂಕಿನಲ್ಲಿ ಒಂದು ಭಾಗದಲ್ಲಿ ನೀರಾವರಿ ಇದ್ದರೆ, ಮತ್ತೊಂದು ಭಾಗದಲ್ಲಿ ಒಣಭೂಮಿ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೊಂದು ಪ್ರಕೃತಿ ಸವಾಲಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಜ್ಯದಲ್ಲಿ ಒಂದೆಡೆ ನೀರಿನ ಸಮಸ್ಯೆ, ಮತ್ತೊಂದೆಡೆ ಬರದ ಸಮಸ್ಯೆ ಎದುರಾಗಿದೆ. ಒಂದೇ ತಾಲೂಕಿನಲ್ಲಿ ಒಂದು ಭಾಗದಲ್ಲಿ ನೀರಾವರಿ ಇದ್ದರೆ, ಮತ್ತೊಂದು ಭಾಗದಲ್ಲಿ ಒಣಭೂಮಿ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೊಂದು ಪ್ರಕೃತಿ ಸವಾಲಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ಎದುರಿಸಬೇಕಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.

ನಗರದ ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಶುಕ್ರವಾರ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಇನ್ನಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು. ಅಧಿಕಾರಿಗಳು ಕಚೇರಿಗಳಲ್ಲೇ ಕುಳಿತು ಕೆಲಸ ಮಾಡದೆ, ಕ್ಷೇತ್ರಕ್ಕೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಎಲ್ಲ ಅಧಿಕಾರಿಗಳು ಫೀಲ್ಡ್‌ ಗೆ ತೆರಳಿ ಪರಿಸ್ಥಿತಿ ಪರಿಶೀಲಿಸಬೇಕು ಎಂದು ಸೂಚಿಸಿದರು.ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ. ರೈತರು ತಮ್ಮ ಸಮಸ್ಯೆಗಳನ್ನು ಶಾಸಕರ ಮೂಲಕ ಸರ್ಕಾರಕ್ಕೆ ತಲುಪಿಸಬೇಕು ಎಂದು ಮನವಿ ಮಾಡಿದರು. ಯುಕೆಪಿ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ಕಾರ್ಯ ಮುಂದುವರಿಯಲಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆಯೂ ಮರುಪರಿಶೀಲನೆ ನಡೆಯುತ್ತಿದೆ ಎಂದರು.

ಈ ವೇಳೆ ಸಚಿವ ವಿಜಯಾನಂದ ಕಾಶಪ್ಪನವರ ಸೇರಿದಂತೆ ಜಿಲ್ಲೆಯ ಶಾಸಕರು ಬರಪರಿಹಾರಕ್ಕೆ ಒತ್ತಾಯಿಸಿದರು. ಜಿಲ್ಲೆಯ ಎಲ್ಲ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಿ, ರೈತರಿಗೆ ಸೂಕ್ತ ಪರಿಹಾರ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. ಕೆನಾಲ್‌ ಗಳ ಕೊನೆಯ ಹಂತಕ್ಕೆ ನೀರು ತಲುಪುತ್ತಿಲ್ಲ. ಬೆಳೆ ಹಸಿರಾಗಿದ್ದರೂ ಫಸಲು ಬರುವ ಪರಿಸ್ಥಿತಿ ಇಲ್ಲ ಎಂದು ತಿಮ್ಮಾಪುರ ಅವರು ಸಮಸ್ಯೆ ವಿವರಿಸಿದರು. ವರ್ಷಕ್ಕೆ 18 ಸಾವಿರ ಕೋಟಿ ನೀಡಬೇಕು ಎಂಬ ಬೇಡಿಕೆಯನ್ನೂ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಅವರು ಮುಂದಿಟ್ಟರು.ಪ್ರಜಾಸೇವಾ ಆಂದೋಲನ ಇಂದಿನಿಂದ ಆರಂಭವಾಗಲಿದ್ದು, ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಿ, ರೈತರನ್ನು ಗೌರವದಿಂದ ಕಾಣಬೇಕು ಎಂದು ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯ ಪೂರ್ವದಲ್ಲಿ ರೈತರ, ಸಾರ್ವಜನಿಕರು ಹಾಗೂ ಸರ್ಕಾರಿ ನೌಕರರ ಸಂಘ ಸೇರಿದಂತೆ ಒಟ್ಟು 18 ಅಹವಾಲುಗಳ ಅರ್ಜಿಗಳನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.

ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯರಾದ ನಾರಾಯಣಸಾ ಭಾಂಡಗೆ, ಜಿ.ಸಿ.ಚಂದ್ರಶೇಖರ, ವಿಧಾನಸಭೆಯ ಉಪ ಸಭಾಪತಿ ಮಂಕಾಳ ವೈದ್ಯ, ಶಾಸಕರಾದ ಜೆ.ಟಿ.ಪಾಟೀಲ, ಆರ್.ಬಿ.ತಿಮ್ಮಾಪೂರ, ಉಮೇಶ ಮೇಟಿ, ಬಿ.ಬಿ.ಚಿಮ್ಮನಕಟ್ಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ ಮೊಹಸೀನ್, ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮನೋಜ್ ಕುಮಾರ ಮೀನಾ, ಬೆಳಗಾವಿ ವಿಭಾಗದ ಆಯುಕ್ತೆ ಜಾನಕಿ ಕೆ.ಎಂ, ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಸಿಇಒ ಗಜಾನನ ಬಾಲೆ, ಜಿಲ್ಲಾ ಎಸ್ಪಿ ಸಿದ್ದಾರ್ಥ ಗೋಯಲ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು. ಅಗತ್ಯವಿರುವ ಕಡೆ ಮೇವಿನ ಕಿಟ್‌ ಗಳನ್ನು ವಿತರಿಸುವ ವ್ಯವಸ್ಥೆ ಮಾಡಬೇಕು. ಅಧಿಕಾರಿಗಳು ಕೇಂದ್ರಸ್ಥಳದಲ್ಲಿದ್ದು, ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದರು. ನೀವು ಪುಣ್ಯವಂತರು, ನಿಮ್ಮಲ್ಲಿ ಕೃಷ್ಣೆಯ ನೀರಿದೆ ಎಂದು ಬಾಗಲಕೋಟೆ ಜಿಲ್ಲೆಯ ನೀರಾವರಿ ಸೌಲಭ್ಯವನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಕೃಷ್ಣಾ ನದಿ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ರೈತರಿಗೆ ಅನುಕೂಲ ಕಲ್ಪಿಸುವ ಅಗತ್ಯವಿದೆ.

-ಡಿ.ಕೆ.ಶಿವಕುಮಾರ, ಮುಖ್ಯಮಂತ್ರಿ