ಸಾರಾಂಶ
ಅಧಿಕಾರಿಗಳಿಗೆ ಸೂಚನೆ
ಬೆಂ.ಗ್ರಾ. ಜಿಲ್ಲಾಡಳಿತ ಭವನದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರಸರ್ಕಾರವು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅಭಿವೃದ್ಧಿ ಕಾರ್ಯಕ್ರಮಗಳು ಸಾರ್ವಜನಿಕರಿಗೆ ತಲುಪಿಸುವ ಮೂಲಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್.ಮುನಿಯಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ 2023- 24 ನೇ ಸಾಲಿನ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅಭಿವೃದ್ದಿಪರ ಕಾರ್ಯಕ್ರಮಗಳಿಗಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಪ್ರತಿ ಇಲಾಖೆಯಡಿ ಬರುವ ಯೋಜನೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಹಳ್ಳಿ ಹಳ್ಳಿಗೂ ಜಾಗೃತಿ ಮೂಡಿಸುವ ಮೂಲಕ ಮಾಹಿತಿ ನೀಡಬೇಕು. ಇದರಿಂದ ಸಾರ್ವಜನಿಕರು ಯೋಜನೆ ಬಗ್ಗೆ ತಿಳಿದು ಸೌಲಭ್ಯ ಪಡೆಯುವಂತೆ ಆಗುತ್ತದೆ. ಜನಸಾಮಾನ್ಯರಿಗೆ ಸೌಲಭ್ಯಗಳು ತಲುಪಿಸಲು ಪಾರದರ್ಶಕವಾಗಿ, ಜವಾಬ್ದಾರಿಯುತವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸುವ ಮೂಲಕ ಜಿಲ್ಲೆ, ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಕೆಲವು ಭಾಗಗಳಲ್ಲಿ ಸ್ಮಶಾನ ಭೂಮಿ ಸಮಸ್ಯೆ, ಸ್ಮಶಾನ ದುರಸ್ತಿ ಕಾರ್ಯ, ಸ್ಮಶಾನಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದು, ಸ್ಮಶಾನ ಜಾಗವನ್ನು ಸೂಕ್ತ ರೀತಿಯಲ್ಲಿ ಬೇಲಿ ನಿರ್ಮಿಸಿ ಹದ್ದುಬಸ್ತು ಮಾಡಬೇಕು. ಸ್ಮಶಾನದ ಅವಶ್ಯಕತೆ ಇರುವ ಭಾಗದಲ್ಲಿ ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರ್ ಹಾಗೂ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿ ಅವಶ್ಯವಿದ್ದಲ್ಲಿ ಖಾಸಗಿ ಜಮೀನಿಗೆ ಪ್ರಸ್ತಾವನೆ ಸಲ್ಲಿಸಿ ಎಂದರು.ಶಾಸಕ ಶರತ್ ಕುಮಾರ್ ಬಚ್ಚೇಗೌಡ ಅವರು ಪ್ರತಿ ತಾಲೂಕಿನಲ್ಲಿ ಒಂದು ವಿದ್ಯುತ್ ಚಿತಾಗಾರ ನಿರ್ಮಾಣ ಮಾಡಲು ಸಲಹೆ ನೀಡಿದರು.
ಆಶ್ರಯ ಯೋಜನೆಯಲ್ಲಿ ಪ್ರಗತಿ:ವಸತಿ ಯೋಜನೆಯಡಿ ನಿವೇಶನ ರಹಿತ ಕುಟುಂಬಗಳನ್ನು ಈಗಾಗಲೇ ಗುರುತಿಸಿದ್ದು, ಬಡವರಿಗೆ ನಿವೇಶನ ಹಂಚಲು ಕ್ರಮ ವಹಿಸಲಾಗಿದ್ದು ಈಗಾಗಲೇ ಜಿಲ್ಲೆಯ ಹಲವು ಭಾಗಗಳಲ್ಲಿ ಸುಮಾರು 400 ಎಕರೆ ಸರ್ಕಾರಿ ಭೂಮಿ ನಿವೇಶನಕ್ಕಾಗಿ ಗುರ್ತಿಸಲಾಗಿದೆ. ಶೀಘ್ರವಾಗಿ ರಾಜೀವ್ ಗಾಂಧಿ ಕಾರ್ಪೋರೇಶನ್ ಗೆ ಪ್ರಸ್ತಾವನೆ ಸಲ್ಲಿಸಲು ಕ್ರಮ ವಹಿಸಿ ಎಂದರು.
2010-11 ಸಾಲಿನಿಂದ 2022-23 ನೇ ಸಾಲಿನ ವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವಿವಿಧ ವಸತಿ ಯೋಜನೆಗಳ ಅನುಷ್ಟಾನಕ್ಕಾಗಿ ಒಟ್ಟು 35770 ಮನೆಗಳು ಮಂಜೂರಾಗಿದ್ದು, ಇಲ್ಲಿಯವರೆಗೆ 29534 ಮನೆಗಳನ್ನು ಪೂರ್ಣಗೊಳಿಸಿ ಶೇ.82.27 ರಷ್ಟು ಸಾಧನೆ ಮಾಡಲಾಗಿದೆ.ಕುಡಿಯುವ ನೀರು ಒದಗಿಸಲು ಕ್ರಮ:
ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ ಹಾಗೂ ಪ್ರತಿ ತಾಲೂಕಿಗೂ 25.00 ಲಕ್ಷ ರು. ಗಳ ಕೊಳವೆ ಬಾವಿ ಕೊರೆಯಲು ಕ್ರಿಯಾ ಯೋಜನೆ ಅನುಮೋದನೆಯಾಗಿದ್ದು ಅಗತ್ಯ ಕ್ರಮ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ 1,87,000 ಜಾನುವಾರುಗಳಿದೆ. ಪಶುಪಾಲನೆ ಇಲಾಖೆಯಿಂದ ಅಂದಾಜು 60,000 ಮೇವಿನ ಕಿರು ಪೊಟ್ಟಣ ಹಾಗೂ ಕೆ.ಎಂ.ಎಫ್‌ನಿಂದ 40,000 ಮೇವಿನ ಕಿರು ಪೊಟ್ಟಣಗಳನ್ನು ನೀರಾವರಿ ಹೊಂದಿರುವ ರೈತರಿಗೆ ಉಚಿತವಾಗಿ ವಿತರಿಸಲಾಗಿದೆ ಎಂದು ವಿವರಿಸಿದರು.ಶಾಲೆಗಳಿಗೆ ಬಿಇಒಗಳ ಭೇಟಿ ಕಡ್ಡಾಯ:
ಜಿಲ್ಲೆಯಲ್ಲಿ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಾರದಲ್ಲಿ ಒಂದು ಶಾಲೆಗೆ ಕಡ್ಡಾಯವಾಗಿ ಭೇಟಿ ನೀಡಿ, ಅಲ್ಲಿನ ಶೈಕ್ಷಣಿಕ ಪ್ರಗತಿ ಪರಿಶೀಲಿಸುವ ಜತೆಗೆ ಕುಂದುಕೊರತೆಗಳನ್ನು ಆಲಿಸುವ ಕೆಲಸ ಮಾಡಬೇಕು. ಅಲ್ಲದೇ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಪ್ರತಿ ವಿದ್ಯಾರ್ಥಿ ಶೇ. 70 ರಿಂದ ಶೇ. 80 ಕ್ಕೂ ಹೆಚ್ಚು ಅಂಕದೊಂದಿಗೆ ತೇರ್ಗಡೆಯಾಗುವಂತೆ ಭೋಧನೆಗೆ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. ಕಳೆದ ವರ್ಷದ ಫಲಿತಾಂಶಕ್ಕಿಂತ ಪ್ರಸಕ್ತ ವರ್ಷ ಎಸ್.ಎಸ್.ಎಲ್.ಸಿ ಯಲ್ಲಿ ಹಾಗೂ ಪಿ.ಯು.ಸಿ ಯಲ್ಲಿ ಉತ್ತಮ ಫಲಿತಾಂಶ ಬರುವಂತೆ ಕ್ರಮ ವಹಿಸಿ ತಾಲೂಕು ಹೋಬಳಿವಾರು ಶಿಕ್ಷಕರ ಸಭೆ ನಡೆಸಿ ಎಂದರು.ಯೋನಿಕ್ಸ್ ಅಧ್ಯಕ್ಷರಾದ ಶರತ್ ಕುಮಾರ್ ಬಚ್ಚೇಗೌಡ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಾಂತಕುಮಾರ್, ಗ್ಯಾರಂಟಿ ಯೋಜನೆಗಳ ಜಾರಿ ಅಧ್ಯಕ್ಷ ರಾಜಣ್ಣ, ಶಾಸಕರಾದ ಧೀರಜ್ ಮುನಿರಾಜು, ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ. ಎನ್.ಶಿವಶಂಕರ್, ಜಿಪಂ ಸಿಇಒ ಡಾ.ಅನುರಾಧ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಕೆ ಬಾಬಾ, ಅಪರ ಜಿಲ್ಲಾಧಿಕಾರಿ ಅಮರೇಶ್, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಡಾ.ಎಚ್.ನಟರಾಜ್ ಸೇರಿದಂತೆ ಎಲ್ಲಾ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.