ಆಡಳಿತದಲ್ಲಿ ಪಾರದರ್ಶತೆಗೆ ಆದ್ಯತೆ: ಆರ್‌.ವಿ. ದೇಶಪಾಂಡೆ

| Published : Jun 27 2024, 01:03 AM IST

ಸಾರಾಂಶ

ಜನವರಿ ಅಂತ್ಯಕ್ಕೆ 39 ಇಲಾಖೆಗಳಿಗೆ ಸಂಬಂಧಿಸಿದ 7 ವರದಿಗಳನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ಈ ವರದಿಗಳಲ್ಲಿ ಒಟ್ಟೂ 5039 ಶಿಫಾರಸ್ಸುಗಳನ್ನು ಮಾಡಲಾಗಿದೆ.

ಕಾರವಾರ: ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಆಡಳಿತದಲ್ಲಿ ಪಾರದರ್ಶಕತೆ, ಸರಳತೆ ಹಾಗೂ ಸಕಾಲದಲ್ಲಿ ನಾಗರಿಕ ಸೇವೆಗಳನ್ನು ಕಡಿಮೆ ಖರ್ಚಿನಲ್ಲಿ ಒದಗಿಸಲು ಮಾಡಬೇಕಾದ ಸುಧಾರಣೆಗಳನ್ನು ಹಾಗೂ ಇಲಾಖೆಗಳ ಒಟ್ಟಾರೆ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಆದ್ಯತೆಯನ್ನು ನೀಡಿದೆ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ, ಆಡಳಿತ ಸುಧಾರಣೆಯ ಬಗ್ಗೆ ಸಲಹೆಗಳನ್ನು ಸ್ವೀಕರಿಸಿ ಮಾತನಾಡಿ, ಜನವರಿ ಅಂತ್ಯಕ್ಕೆ 39 ಇಲಾಖೆಗಳಿಗೆ ಸಂಬಂಧಿಸಿದ 7 ವರದಿಗಳನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ಈ ವರದಿಗಳಲ್ಲಿ ಒಟ್ಟೂ 5039 ಶಿಫಾರಸ್ಸುಗಳನ್ನು ಮಾಡಲಾಗಿದೆ. ಮೇ ತಿಂಗಳಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸರ್ಕಾರದ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಆ.ಸು.) ಅವರೊಂದಿಗೆ ಸಭೆ ನಡೆಸಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಅನುಷ್ಠಾನದ ಬಗ್ಗೆ ಮಾಸಿಕ ಸಭೆಗಳಲ್ಲಿಯೂ ಪರಿಶೀಲಿಸಲು ತಿಳಿಸಲಾಗಿತ್ತು. ಇದರ ಪರಿಣಾಮವಾಗಿ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವಲ್ಲಿ ಗಣನೀಯ ಪ್ರಗತಿಯಾಗಿದೆ ಎಂದರು.ಆಯೋಗವು 2021ರ ಜೂನ್‌ನಲ್ಲಿ ಕಂದಾಯ ಇಲಾಖೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ ಹಾಗೂ ಸಾರಿಗೆ ಇಲಾಖೆಗಳಿಗೆ ಸಂಬಂಧಿಸಿದಂತೆ ಮೊದಲನೆಯ ವರದಿಯಲ್ಲಿ ಕ್ರಮವಾಗಿ 528, 111 ಮತ್ತು 217 ಸೇರಿದಂತೆ ಒಟ್ಟೂ 856 ಶಿಫಾರಸುಗಳನ್ನು ಮಾಡಿದೆ. ಕಳೆದ 3 ವರ್ಷಗಳಲ್ಲಿ ಇಲಾಖೆಗಳ ಶಿಫಾರಸುಗಳ ಅನುಷ್ಠಾನ ಕುರಿತಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಲು ಸಂಬಂಧಿಸಿದ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರೊಂದಿಗೆ ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಅದರಂತೆ ಕಂದಾಯ ಇಲಾಖೆ ಕುರಿತಂತೆ ನೀಡಿರುವ 528 ಶಿಫಾರಸುಗಳಲ್ಲಿ 205 ಅನುಷ್ಠಾನಗೊಳಿಸಿದ್ದು, 76 ಅನುಷ್ಠಾನ ಹಂತದಲ್ಲಿ ಹಾಗೂ 76 ಶಿಫಾರಸುಗಳು ಪರಿಶೀಲನೆಯಲ್ಲಿವೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗೆ ಸಂಬಂಧಿಸಿದಂತೆ 111 ಶಿಫಾರಸುಗಳಲ್ಲಿ 37 ಅನುಷ್ಠಾನಗೊಳಿಸಿದ್ದು, 18 ಅನುಷ್ಠಾನ ಹಂತದಲ್ಲಿ ಹಾಗೂ 56 ಶಿಫಾರಸುಗಳು ಪರಿಶೀಲನೆಯಲ್ಲಿವೆ. ಸಾರಿಗೆ ಇಲಾಖೆಯಲ್ಲಿನ 217 ಶಿಫಾರಸುಗಳಲ್ಲಿ 132 ಅನುಷ್ಠಾನಗೊಳಿಸಿದ್ದು, 4 ಅನುಷ್ಠಾನ ಹಂತದಲ್ಲಿ ಹಾಗೂ 81 ಶಿಫಾರಸುಗಳು ಪರಿಶೀಲನೆಯಲ್ಲಿವೆ. ಈ ಇಲಾಖೆಗಳಲ್ಲಿ ಅನುಷ್ಠಾನದ ಹಂತದಲ್ಲಿರುವ 98 ಶಿಫಾರಸುಗಳನ್ನು ಒಂದು ತಿಂಗಳ ಒಳಗೆ ಅನುಷ್ಠಾನಗೊಳಿಸಲು ಹಾಗೂ ಪರಿಶೀಲನೆಯಲ್ಲಿರುವ 165 ಶಿಫಾರಸುಗಳನ್ನು ತಕ್ಷಣವೇ ಪರಿಶೀಲಿಸಿ ಅನುಷ್ಠಾನಗೊಳಿಸಲು ಕ್ರಮ ಕೈಗೊಂಡು ಆಯೋಗಕ್ಕೆ ವರದಿ ಮಾಡಲು ಸೂಚಿಸಲಾಗಿದೆ ಎಂದರು. ಜಿಲ್ಲಾ ಮತ್ತು ತಾಲೂಕು ಮಟ್ಟದ ಕಚೇರಿಗಳಿಗೆ ಹೆಚ್ಚಿನ ಆಡಳಿತಾತ್ಮಕ ಮತ್ತು ಆರ್ಥಿಕ ಅಧಿಕಾರಗಳ ಪ್ರತ್ಯಾಯೋಜನೆ, ಸೇವಾ ವಿತರಣೆಯನ್ನು ಸುಧಾರಿಸಲು ಖಾಲಿ ಇರುವ ಲಿಪಿಕ ಹುದ್ದೆಗಳನ್ನು ತಾಂತ್ರಿಕ ಹುದ್ದೆಗಳಾಗಿ ಪರಿವರ್ತನೆ, ಕೆಲಸದ ಹೊರೆಯನ್ನು ಪರಿಗಣಿಸಿ ಸಿಬ್ಬಂದಿಯ ಮರು ನಿಯೋಜನೆ ಮಾಡಲು ಹೆಚ್ಚಿನ ಅವಕಾಶಗಳಿವೆ. ಕೆಲಸದ ಹೊರೆಯ ಆಧಾರದ ಮೇಲೆ ಸಿಬ್ಬಂದಿಯ ಮರು ನಿಯೋಜನೆ ಮಾಡುವ ಕಾರ್ಯವನ್ನು ತ್ವರಿತಗೊಳಿಸುವುದು. ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳನ್ನು ವಿಲೀನಗೊಳಿಸುವ ಸಾಧ್ಯತೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು ಎಂದರು.ಶಾಸಕರಾದ ಭೀಮಣ್ಣ ನಾಯ್ಕ, ದಿನಕರ ಶೆಟ್ಟಿ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಆಡಳಿತ ಸುಧಾರಣಾ ಆಯೋಗದ ಸಲಹೆಗಾರ ಪ್ರಸನ್ನ ಕುಮಾರ್, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠ ಎನ್. ವಿಷ್ಣುವರ್ಧನ, ಡಿಎಫ್‌ಒ ರವಿಶಂಕರ್, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.