ಮುಖ್ಯಮಂತ್ರಿ ಆಗಿ ತಮ್ಮ ನೂರು ದಿನಗಳ ಆಡಳಿತದಲ್ಲೇ ಯುವಕರ ಭವಿಷ್ಯಕ್ಕಾಗಿ ಉದ್ಯೋಗ ಸೃಷ್ಟಿ, ಶಿಕ್ಷಣ, ತಂತ್ರಜ್ಞಾನ, ನೇಮಕಾತಿ ಸುಧಾರಣೆಯಂತಹ ಹತ್ತು ಹಲವು ಕಾರ್ಯಕ್ರಮ ಮೂಲಕ ಡಿ.ಕೆ. ಶಿವಕುಮಾರ್ ಅವರ ‘ಯೂತ್ ಫಸ್ಟ್’ ಸರ್ಕಾರ ಹೊಸ ಭರವಸೆ ಹುಟ್ಟಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು:
ಮುಖ್ಯಮಂತ್ರಿ ಆಗಿ ತಮ್ಮ ನೂರು ದಿನಗಳ ಆಡಳಿತದಲ್ಲೇ ಯುವಕರ ಭವಿಷ್ಯಕ್ಕಾಗಿ ಉದ್ಯೋಗ ಸೃಷ್ಟಿ, ಶಿಕ್ಷಣ, ತಂತ್ರಜ್ಞಾನ, ನೇಮಕಾತಿ ಸುಧಾರಣೆಯಂತಹ ಹತ್ತು ಹಲವು ಕಾರ್ಯಕ್ರಮ ಮೂಲಕ ಡಿ.ಕೆ. ಶಿವಕುಮಾರ್ ಅವರ ‘ಯೂತ್ ಫಸ್ಟ್’ ಸರ್ಕಾರ ಹೊಸ ಭರವಸೆ ಹುಟ್ಟಿಸಿದೆ.ಮೊದಲ 100 ದಿನಗಳಲ್ಲೇ 72 ಸಾವಿರ ಸರ್ಕಾರಿ ಹುದ್ದೆ ನೇಮಕ, 15 ಸಾವಿರ ಶಿಕ್ಷಕರ ನೇಮಕಾತಿ, ಖಾಸಗಿ ಉದ್ಯೋಗ ವಿನಿಮಯ ಕೇಂದ್ರ, ‘ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ’, 2 ವರ್ಷದಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿ ಗುರಿಯಂಥ ಸಾಲು-ಸಾಲು ಕಾರ್ಯಕ್ರಮಗಳ ಮೂಲಕ ಯುವಕರನ್ನು ಸೆಳೆಯಲು ಯಶಸ್ವಿಯಾಗಿದೆ.
ಉದ್ಯೋಗದಾತರಿಗೆ ಪ್ರತಿ ಹೊಸ ಉದ್ಯೋಗಕ್ಕೆ ₹2,500 ಪ್ರೋತ್ಸಾಹಧನ, 6ನೇ ತರಗತಿಯಿಂದ ಎಐ ಶಿಕ್ಷಣ, ಎಐ ಅಕ್ಷರ ಅಭಿಯಾನ, ಕೋಡಿಂಗ್ ಗುರುಕುಲ. ಹೀಗೆ ಉದ್ಯೋಗದಿಂದ ಎಐವರೆಗೆ ಯುವಕರ ಉಜ್ವಲ ಭವಿಷ್ಯ ಕಟ್ಟಲು ಮುಂದಾದ ಕಾರ್ಯಕ್ರಮಗಳು ಮೆಚ್ಚುಗೆ ಗಳಿಸಿವೆ.ಮೊದಲ ಸಂಪುಟದಲ್ಲೇ ಸೂಪರ್ ಸಿಕ್ಸ್:
ತಮ್ಮ ಮೊದಲ ಸಂಪುಟ ಸಭೆಯಲ್ಲೇ ಯುವಕರು ಹಾಗೂ ದೇಶಕ್ಕೆ ಹೊಸ ರಾಜಕೀಯ ದಿಕ್ಕು ತೋರುತ್ತಿರುವ ಜೆನ್-ಝೀ ವರ್ಗವನ್ನು ಆಕರ್ಷಿಸಿದ ಅವರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಬಸ್ಸಲ್ಲಿ ಉಚಿತ ಪ್ರಯಾಣ ಕಲ್ಪಿಸುವುದಾಗಿ ಘೋಷಿಸಿದರು.10,000 ಭಾರತ್ ಜೋಡೋ ಯುವ ಸಂಘಟನೆ ರಚನೆ, ಉದ್ಯೋಗಕ್ಕಾಗಿ ಬೀದಿಗಿಳಿದ ಯುವಕರ ಸಿಟ್ಟು ತಣಿಸಲು 56,432 ಹುದ್ದೆ ನೇಮಕಾತಿ ಪ್ರಕಟ, ಸರ್ಕಾರದಿಂದ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆಯಂತಹ ಹತ್ತು ಹಲವು ಘೋಷಣೆ ಮಾಡಿದರು.
ತಂತ್ರಜ್ಞಾನಕ್ಕೆ ಆದ್ಯತೆ, ಎಐಗೆ ಅಗ್ರಸ್ಥಾನ:ಬೆಂಗಳೂರಿನಲ್ಲಿ ಎಐ ವಿಶ್ವವಿದ್ಯಾಲಯ ಸ್ಥಾಪನೆ ಘೋಷಿಸುವ ಮೂಲಕ ತಂತ್ರಜ್ಞಾನ ಹಾಗೂ ಎಐಗೆ ವಿಶೇಷ ಆದ್ಯತೆ ನೀಡಿದ್ದಾರೆ. ಬೆಂಗಳೂರನ್ನು''''''''ಡೀಪ್-ಟೆಕ್ ಹಬ್’ ಹಾಗೂ ಜವಾಬ್ದಾರಿಯುತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೇಂದ್ರವನ್ನಾಗಿ ಮಾಡುವುದಾಗಿ ಘೋಷಿಸಿದ್ದಾರೆ. ಜತೆಗೆ 15 ಸಾವಿರ ಶಿಕ್ಷಕರ ನೇಮಕಾತಿಗೆ ಅನುಮೋದನೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ 7.5ರಷ್ಟು ಮೀಸಲಾತಿ ಸೇರಿದಂತೆ ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ.
ಯುವಕರಿಗೆ ಅವಕಾಶ ಸೃಷ್ಟಿಗೆ ಆದ್ಯತೆ:ಸರ್ಕಾರದ ನಿರ್ಧಾರಗಳು ಯುವಕರ ಭವಿಷ್ಯ, ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಗೆ ಒತ್ತು ನೀಡುತ್ತಿವೆ. ಕೇವಲ ಘೋಷಣೆಗಳಿಗೆ ಸೀಮಿತವಾಗದೆ, ಶಿಕ್ಷಣದಿಂದ ಉದ್ಯೋಗದವರೆಗೆ ಯುವಕರಿಗೆ ಹೊಸ ಅವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವ ನಿರ್ಧಾರವು ವಿದ್ಯಾರ್ಥಿಗಳ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವ ಮಹತ್ವದ ಹೆಜ್ಜೆಯಾಗಿದೆ.
ಭಾರತ ಜೋಡೋ ಯುವ ಸಂಘ:‘ಭಾರತ ಜೋಡೋ ಯುವಕರ ಸಂಘ’ವನ್ನು ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಸ್ಥಾಪಿಸಿ, ಪ್ರತಿ ಸಂಘಕ್ಕೆ ₹10 ಲಕ್ಷ ನೀಡುವ ನಿರ್ಧಾರವೂ ಯುವಕರನ್ನು ಸಾಮಾಜಿಕ ಅಭಿವೃದ್ಧಿಯ ಭಾಗವಾಗಿಸುವ ಪ್ರಯತ್ನವಾಗಿದೆ.
ಒಟ್ಟಿನಲ್ಲಿ, ಯುವಕರನ್ನು ಕೌಶಲ್ಯಾಭಿವೃದ್ಧಿಗೆ, ಕೌಶಲ್ಯದಿಂದ ಉದ್ಯೋಗಕ್ಕೆ, ಉದ್ಯೋಗದಿಂದ ಜಾಗತಿಕ ಅವಕಾಶಗಳೆಡೆಗೆ ಕೊಂಡೊಯ್ಯಲು ಹೊಸ ಯೋಜನೆಗಳನ್ನು ರೂಪಿಸಿದ್ದಾರೆ. ಯುವಕರನ್ನು ಕೇವಲ ಮತದಾರರಾಗಿ ನೋಡದೆ, ಕರ್ನಾಟಕದ ಭವಿಷ್ಯದ ಶಕ್ತಿಯಾಗಿ ಪರಿಗಣಿಸಿರುವುದು ಡಿ.ಕೆ ಶಿವಕುಮಾರ್ ಕಾರ್ಯವೈಖರಿಯ ವಿಶೇಷತೆ.ನೇಮಕಾತಿ ಸುಧಾರಣೆಗೆ ಯತ್ನ:
ನೇಮಕಾತಿ ಅಕ್ರಮಗಳಿಗೆ ಬ್ರೇಕ್ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ. ಅಲ್ಲದೆ ನೇಮಕಾತಿ ಸುಧಾರಣೆಗೆ ಆಗ್ರಹಿಸಿ ಹೋರಾಟ ನಿರತರಾಗಿದ್ದ ಯುವಕರಿಗೆ ಪೂರಕವಾಗಿ ಸ್ಪಂದಿಸಿದರು. ಆ ಮೂಲಕ ಕಾಂಗ್ರೆಸ್‌ನಿಂದ ದೂರ ಉಳಿದಿದ್ದ ಯುವಕರನ್ನು ಆಕರ್ಷಿಸಲು ಯಶಸ್ವಿಯಾಗಿದ್ದಾರೆ.