ಜನತೆ ಮುಕ್ತವಾಗಿ ತಮ್ಮ ಸಮಸ್ಯೆಗಳ ಕುರಿತು ಅರ್ಜಿ ಬರೆದು ಆಯಾ ಇಲಾಖೆಯ ಕೌಂಟರ್‌ನಲ್ಲಿ ನೀಡಿದರೆ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು.
ಸಂಡೂರು: ತಾಲೂಕಿನ ಕುರೆಕುಪ್ಪ ಪುರಸಭೆ ವ್ಯಾಪ್ತಿಯ ತೋರಣಗಲ್ಲು (ರೈನಿ) ಪ್ರದೇಶದ ಬಸವೇಶ್ವರ ಗ್ರಾಮಾಂತರ ಪ್ರೌಢ ಶಾಲೆಯ ಆವರಣದಲ್ಲಿ ಶನಿವಾರ ಶಾಸಕಿ ಅನ್ನಪೂರ್ಣ ಈ ತುಕಾರಾಮ್ ಅಧ್ಯಕ್ಷತೆಯಲ್ಲಿ ಪ್ರಜಾಸೇವಾ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕರು, ಜನರ ಸಮಸ್ಯೆ ಶೀಘ್ರ ಪರಿಹಾರಕ್ಕಾಗಿ ಸರ್ಕಾರ ಮಹತ್ವದ ಆಂದೋಲನ ಆರಂಭಿಸಿದೆ. ಸಮಸ್ಯೆ ಹೇಳಿಕೊಳ್ಳಲು ಯಾವುದೇ ಹಿಂಜರಿಕೆ ಬೇಡ. ಎಲ್ಲ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಜನತೆ ಮುಕ್ತವಾಗಿ ತಮ್ಮ ಸಮಸ್ಯೆಗಳ ಕುರಿತು ಅರ್ಜಿ ಬರೆದು ಆಯಾ ಇಲಾಖೆಯ ಕೌಂಟರ್‌ನಲ್ಲಿ ನೀಡಿದರೆ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು. ಜನತೆ ಸರ್ಕಾರದ ವಿವಿಧ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು. ಜನರ ಸಮಸ್ಯೆ ಬಗೆಹರಿಸುವುದು ನನ್ನ ಮೊದಲ ಆದ್ಯತೆಯಾಗಿದೆಯಲ್ಲದೆ, ಅಧಿಕಾರಿಗಳು ಜನರ ಸಮಸ್ಯೆ ಬಗೆಹರಿಸಲು ಸಿದ್ಧರಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಶಾಸಕರು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪ್ರಮಾಣ ಪತ್ರ ಹಾಗೂ ಮಂಜೂರಾದ ಹಣದ ಚೆಕ್ ವಿತರಿಸಿದಲ್ಲದೆ ಶಾಲಾ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಶೂ, ಸಾಕ್ಸ್‌ಗಳನ್ನು ವಿತರಿಸಿದರು.
ತಹಸೀಲ್ದಾರ್ ಜಿ.ಅನಿಲ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುರೆಕುಪ್ಪ ಪುರಸಭೆ ಅಧ್ಯಕ್ಷ ಕೆ.ಸೂರ್ಯನಾರಾಯಣ, ಸದಸ್ಯರು, ವಾಡಾ ಅಧ್ಯಕ್ಷ ಅಕ್ಷಯ್ ಲಾಡ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ, ತಾಲೂಕು ಸಮಿತಿ ಅಧ್ಯಕ್ಷ ಎಸ್.ನೂರುದ್ದೀನ್, ಡಿವೈಎಸ್‌ಪಿ ಪ್ರಸಾದ್ ಗೋಖಲೆ, ತಾಪಂ ಕಾರ್ಯ ನಿರ್ವಾಹಕಾಧಿಕಾರಿ ಮಡಗಿನ ಬಸಪ್ಪ, ಸರ್ಕಲ್‌ಇನ್‌ಸ್ಪೆಕ್ಟರ್ ಬಿ.ಮಹೇಶ್‌ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್.ಅಕ್ಕಿ, ಕ್ಷೇತ್ರ ಸಮನ್ವಯಅಧಿಕಾರಿ ಶರಣಬಸಪ್ಪಕರಿಶೆಟ್ಟಿ, ಸಂಡೂರು ಪುರಸಭೆ ಮುಖ್ಯಾಧಿಕಾರಿ ಬಿ. ವಿನಯ್‌ಕುಮಾರ್‌ಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ವಿವಿಧ ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.