ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲೂ ಬೀಡಿ, ಸಿಗರೆಟ್‌ಗಾಗಿ ಕೈದಿಗಳ ಪ್ರತಿಭಟನೆ! ದರ್ಶನ್‌ ಎಫೆಕ್ಟ್

| Published : Sep 03 2024, 01:42 AM IST / Updated: Sep 03 2024, 05:51 AM IST

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲೂ ಬೀಡಿ, ಸಿಗರೆಟ್‌ಗಾಗಿ ಕೈದಿಗಳ ಪ್ರತಿಭಟನೆ! ದರ್ಶನ್‌ ಎಫೆಕ್ಟ್
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಬೆನ್ನಲ್ಲೇ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲೂ ಬೀಡಿ, ಸಿಗರೆಟ್‌ಗಾಗಿ ಕೈದಿಗಳು ಪ್ರತಿಭಟನೆ ನಡೆಸಿದ್ದಾರೆ. ನಟ ದರ್ಶನ್‌ ಜೈಲಿನಲ್ಲಿ ಸಿಗರೆಟ್ ಸೇದುತ್ತಿರುವ ಫೋಟೋ ವೈರಲ್ ಆದ ಬೆನ್ನಲ್ಲೇ ಈ ಬೇಡಿಕೆ ಹೆಚ್ಚಾಗಿದೆ.

 ಶಿವಮೊಗ್ಗ  : ಬೆಳಗಾವಿ ಆಯ್ತು, ಇದೀಗ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲೂ ಬೀಡಿ, ಸಿಗರೆಟ್‌ಗಾಗಿ ಕೈದಿಗಳು ಜೈಲಿನಲ್ಲಿ ಪ್ರತಿಭಟನೆ ನಡೆಸಿದ ಪ್ರಸಂಗ ಸೋಮವಾರ ನಡೆದಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ ಕೈಯಲ್ಲಿ ಸಿಗರೆಟ್‌ ಹಿಡಿದಿರುವ ಫೋಟೋ ವೈರಲ್‌ ಆದ ಬಳಿಕ ಕೈದಿಗಳಿಂದ ಇಂಥದ್ದೊಂದು ಬೇಡಿಕೆ ಹೆಚ್ಚಾಗುತ್ತಿದೆ. ಈ ಸಂಬಂಧ ಭಾನುವಾರವಷ್ಟೇ ಬೆಳಗಾವಿ ಜೈಲಿನ ಕೈದಿಗಳು ಪ್ರತಿಭಟನೆ ನಡೆಸಿದ್ದರು. 

ದರ್ಶನ್‌ ಅವರಿಗೆ ಹಾಗೂ ಪರಪ್ಪನ ಅಗ್ರಹಾರ ಜೈಲಿನ ಕೈದಿಗಳಿಗೆ ಸಿಗರೆಟ್‌ ನೀಡುವುದಾದರೆ ನಮಗೂ ತಂಬಾಕು ಕೊಡಿಸಿ ಎಂದು ಆಗ್ರಹಿಸಿದ್ದರು. ಇದೀಗ ಶಿವಮೊಗ್ಗದ ಸೋಗಾನೆ ಬಳಿ ಇರುವ ಕೇಂದ್ರ ಕಾರಾಗೃಹದಲ್ಲೂ ಬೀಡಿ, ಸಿಗರೆಟಿಗಾಗಿ ಆಗ್ರಹಿಸಿ 778 ಕೈದಿಗಳು ಬೆಳಗ್ಗಿನ ಉಪಾಹಾರ ತ್ಯಜಿಸಿ ಪ್ರತಿಭಟನೆ ನಡೆಸಿದ್ದಾರೆ. ಸಿಗರೆಟ್‌ ಸಿಗದಿದ್ದರೆ ಕನಿಷ್ಠ ಬೀಡಿಯಾದರೂ ಕೊಡಿಸಿ ಎಂದು ತಂಬಾಕಿನ ಚಟ ಅಂಟಿಸಿಕೊಂಡಿರುವ ಕೈದಿಗಳು ಪಟ್ಟುಹಿಡಿದಿದ್ದಾರೆ. ಬಳಿಕ ಅಧಿಕಾರಿಗಳು ಮಧ್ಯಪ್ರವೇಶಿಸಿ ಪ್ರತಿಭಟನೆ ಕೈಬಿಡುವಂತೆ ಅವರ ಮನವೊಲಿಸಿದ್ದಾರೆ.

ದರ್ಶನ್‌ಗೆ ಜೈಲಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಶಿವಮೊಗ್ಗದ ಕೇಂದ್ರ ಕಾರಾಗೃಹದ ಮೇಲೆ ಇತ್ತೀಚೆಗಷ್ಟೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದ 100ಕ್ಕೂ ಹೆಚ್ಚು ಪೊಲೀಸರ ತಂಡ ದಾಳಿ ನಡೆಸಿದಾಗ ಬೆಂಕಿ ಪೊಟ್ಟಣ ಹಾಗೂ ಬೀಡಿ ಬಂಡಲ್ ಮತ್ತು ಚಾರ್ಜರ್ ವಯರ್ ಸಿಕ್ಕಿತ್ತು. ಈ ಬಗ್ಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು.