ಖಾಸಗಿಯವರಿಗೆ ಹಾಲು ಹಾಕಿದರೆ ಸೌಲಭ್ಯ ಸಿಗಲ್ಲ

| Published : May 03 2025, 12:22 AM IST

ಸಾರಾಂಶ

ರೈತರು ಖಾಸಗಿ ಡೈರಿಗಳಿಗೆ ಹಾಲು ಹಾಕಿದರೆ ತುಮಕೂರು ಹಾಲು ಒಕ್ಕೂಟದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗುತ್ತೀರಾ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ರೈತರು ಖಾಸಗಿ ಡೈರಿಗಳಿಗೆ ಹಾಲು ಹಾಕಿದರೆ ತುಮಕೂರು ಹಾಲು ಒಕ್ಕೂಟದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗುತ್ತೀರಾ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಸಿ.ಎಸ್.ಪುರ ಹೋಬಳಿ ಚನ್ನೇನಹಳ್ಳಿ ಗ್ರಾಮದಲ್ಲಿ ಚನ್ನೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವತಿಯಿಂದ ಹಾಲು ಶೇಖರಣೆ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ಅಭಿವೃದ್ದಿ ಹೊಂದಲು ಹೈನುಗಾರಿಕೆಯನ್ನು ಮಾಡಬೇಕಾಗುತ್ತದೆ. ಇದರಿಂದ ಜೀವನವನ್ನು ಉತ್ತಮ ರೀತಿಯಲ್ಲಿ ಸಾಗಿಸಬಹುದು. ಯುವಕರು ಸಮಯ ವ್ಯರ್ಥ ಮಾಡದೆ ನಿರಂತರ ಕೆಲಸ ಕಾರ್ಯಗಳಲ್ಲಿ ತೊಡಗಿದಾಗ ಮಾತ್ರ ಆರ್ಥಿಕವಾಗಿ ಸದೃಢರಾಗಬಹುದು. ಹಬ್ಬಹರಿದಿನ ಮಾಡಿ ಹಣ ವ್ಯಯ ಮಾಡಿಕೊಳ್ಳಬೇಡಿ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಪೋಷಕರು ಗಮನಹರಿಸಬೇಕು.ತುಮಕೂರು ಹಾಲು ಒಕ್ಕೂಟದ ನಿರ್ದೇಶಕಿ ಭಾರತಿ ಶ್ರೀನಿವಾಸ್ ಮಾತನಾಡಿ, ಪ್ರಾಣಿಗಳ ಆರೋಗ್ಯ ಆಯುಷ್ಯ ಕಾಪಾಡುವ ನಿಟ್ಟಿನಲ್ಲಿ ಇನ್ಸೂರೆನ್ಸ್ ಮಾಡಿಸಲಾಗುತ್ತದೆ. ಇದರಿಂದ ಬಂದ ಹಣದಿಂದ ಹೊಸ ಹಸು ಖರೀದಿಸಬೇಕು. ಕಾರ್ಯದರ್ಶಿಗಳು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ರೈತರಿಗೆ ಉತ್ತಮ ಸೌಲಭ್ಯ ದೊರೆಯುತ್ತದೆ. ಹಸುಗಳ ಚಲನವಲನ ಅರ್ಥ ಮಾಡಿಕೊಂಡು ಅವುಗಳ ಆರೋಗ್ಯವನ್ನು ಕಾಪಾಡಬೇಕು ಎಂದರು. ಇದೇ ಸಂದರ್ಭದಲ್ಲಿ ಹಸು ಸತ್ತಿರುವ ರೈತರಿಗೆ ಒಕ್ಕೂಟದ ವತಿಯಿಂದ 15 ಜನರಿಗೆ ಚೆಕ್ ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಚನ್ನೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷ ಎ.ಎಸ್.ಶೈಲಾಸೋಮಶೇಖರ್, ಉಪಾಧ್ಯಕ್ಷ ಪ್ರೇಮಾ, ಗೀತಾಮಣಿ ,ಜೆಡಿಎಸ್ ಮುಖಂಡ ಬೀರಮಾರನಹಳ್ಳಿ ನರಸೇಗೌಡ, ಗೋವಿಂದರಾಜು, ಸಿಎಸ್ ಪುರ ನಾಗರಾಜು, ಪ್ರಸನ್ನ, ಶೇಖರ್, ನರಸಿಂಹದೇವರಹಟ್ಟಿ ಮೂರ್ತಿ, ರಮೇಶ್, ರಾಮು, ಪದಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.