ಪ್ರಿಯದರ್ಶಿನಿ ಕೋ-ಆಪರೇಟಿವ್‌ ಸೊಸೈಟಿ ಸಹಕಾರ ಸಪ್ತಾಹ ಉದ್ಘಾಟನೆ

| Published : Nov 15 2025, 02:45 AM IST

ಸಾರಾಂಶ

ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್‌ ಸೊಸೈಟಿ ವತಿಯಿಂದ ನಡೆಯಲಿರುವ ಸಹಕಾರ ಸಪ್ತಾಹ-2025 ಕಾರ್ಯಕ್ರಮಕ್ಕೆ ಸಂಸ್ಥೆಯ ಹಳೆಯಂಗಡಿಯ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಧ್ವಜಾರೋಹಣ ಮೂಲಕ ಚಾಲನೆ ದೊರಕಿತು.

ಮೂಲ್ಕಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಉತ್ತುಂಗಕ್ಕೆ ಏರಲು ಸಹಕಾರಿಗಳು ಸಹಕಾರಿ ಸಂಸ್ಥೆಗಳಿಗೆ ನೀಡುತ್ತಿರುವ ಸಹಕಾರವೇ ಕಾರಣ ಎಂದು ಮೂಲ್ಕಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ (ಕ್ಷೀರಾ ಸಾಗರ) ದ ಅಧ್ಯಕ್ಷ ಗೋಪಿನಾಥ್ ಪಡಂಗ ಹೇಳಿದ್ದಾರೆ.ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್‌ ಸೊಸೈಟಿ ವತಿಯಿಂದ ನಡೆಯಲಿರುವ ಸಹಕಾರ ಸಪ್ತಾಹ-2025 ಕಾರ್ಯಕ್ರಮಕ್ಕೆ ಸಂಸ್ಥೆಯ ಹಳೆಯಂಗಡಿಯ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ಧ್ವಜಾರೋಹಣಗೈದು ಚಾಲನೆ ನೀಡಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್. ವಸಂತ್ ಬೆರ್ನಾಡ್ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಯಲ್ಲಿ ಎಲ್ಲರ ಪಾತ್ರ ಮಹತ್ತರದಾಗಿದ್ದು ಒಗ್ಗೂಡಿ ಕಾರ್ಯ ನಿರ್ವಹಿಸಿದಲ್ಲಿ ಅಭಿವೃದ್ದಿ ಸಾಧ್ಯ ಎಂದರು.ಹಿರಿಯ ಸಹಕಾರಿ, ಪಿಸಿಎ ಬ್ಯಾಂಕಿನ ಮಾಜಿ ಅಧ್ಯಕ್ಷ ಮಾದವ ತಿಂಗಳಾಯ, ಹಳೆಯಂಗಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷೆ ಶೆರ್ಲಿ ಬಂಗೇರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪ್ರಿಯದರ್ಶಿನಿ ಸಹಕಾರ ಸಂಘ ನಿಯಮಿತ ಹಳೆಯಂಗಡಿಯ ನಿರ್ದೇಶಕ ಜೆ. ಕೃಷ್ಣ ಕೋಟ್ಯಾನ್ ಅವರನ್ನು ಗೌರವಿಸಲಾಯಿತು. ಮಾಧವ ತಿಂಗಳಾಯ ಮಾತನಾಡಿ, ಅತ್ಯಲ್ಪ ಅವಧಿಯಲ್ಲಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಉತ್ತಮ ಅಭಿವೃದ್ಧಿ ಪಡೆದಿದ್ದು ಹಿರಿಯ ಸಹಕಾರಿಗಳನ್ನು ಗೌರವಿಸಿರುವುದು ಮಾದರಿಯಾಗಿದೆ ಎಂದರು. ಸಂಸ್ಥೆಯ ಹಿರಿಯ ನಿರ್ದೇಶಕ ಉಮಾನಾಥ್ ಜೆ ಶೆಟ್ಟಿಗಾರ್ , ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಬ್ದುಲ್ ಅಝೀಝ್, ಅಬ್ದುಲ್ ಖಾದರ್, ಶಶಿಕಲಾ ಕರಿತೋಟ, ಪಿ ಸಿ ಎ ಬ್ಯಾಂಕ್ ನ ನಿರ್ದೇಶಕ ಧರ್ಮಾನಂದ ಶೆಟ್ಟಿಗಾರ್ ಇದ್ದರು.

ಸ್ವಸಹಾಯ ಗುಂಪಿನ ಪ್ರೇರಿಕಿ ನಿರಂಜಲ ಪ್ರಾರ್ಥಿಸಿದರು, ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸ್ವಾಗತಿಸಿದರು. ಸಾಲ ವಿಭಾಗದ ಪ್ರಬಂಧಕಿ ಅಕ್ಷತಾ ಶೆಟ್ಟಿ ನಿರೂಪಿಸಿದರು. ಲೆಕ್ಕಿಗ ಲೋಲಾಕ್ಷಿ ವಂದಿಸಿದರು.