20ರಂದು ಪ್ರಿಯದರ್ಶಿನಿ ಮಹಿಳಾ ಬ್ಯಾಂಕ್ ರಜತ ಮಹೋತ್ಸವ

| Published : Oct 17 2024, 12:05 AM IST

ಸಾರಾಂಶ

ಅ. ೨೦ರಂದು ಬೆಳಗ್ಗೆ ೧೧ಕ್ಕೆ ಹಾವೇರಿ ನಗರದ ರಜನಿ ಸಭಾಂಗಣದಲ್ಲಿ ಬ್ಯಾಂಕಿನ ರಜತ ಮಹೋತ್ಸವ ಸಮಾರಂಭ ಆಯೋಜಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷೆ ದಾಕ್ಷಾಯಿಣಿ ಗಾಣಿಗೇರ ಹೇಳಿದರು.

ಹಾವೇರಿ: ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಲು ಜಿಲ್ಲೆಯಲ್ಲಿ ಪ್ರಾರಂಭಿಸಲಾದ ಪ್ರಿಯದರ್ಶಿನಿ ಮಹಿಳಾ ಅರ್ಬನ್ ಸಹಕಾರಿ ಬ್ಯಾಂಕ್ ೨೫ ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅ. ೨೦ರಂದು ಬೆಳಗ್ಗೆ ೧೧ಕ್ಕೆ ನಗರದ ರಜನಿ ಸಭಾಂಗಣದಲ್ಲಿ ಬ್ಯಾಂಕಿನ ರಜತ ಮಹೋತ್ಸವ ಸಮಾರಂಭ ಆಯೋಜಿಸಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷೆ ದಾಕ್ಷಾಯಿಣಿ ಗಾಣಿಗೇರ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ₹೭ ಲಕ್ಷ ಬಂಡವಾಳದೊಂದಿಗೆ ಪ್ರಾರಂಭಗೊಂಡ ಬ್ಯಾಂಕು, ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ, ಪರಿಶ್ರಮ, ಕಾರ್ಯತತ್ಪರತೆಯಿಂದ ಪ್ರಸ್ತುತ ₹೨೬ ಕೋಟಿಗೂ ಅಧಿಕ ದುಡಿಯುವ ಬಂಡವಾಳ ಹಾಗೂ ₹೪೦ ಕೋಟಿ ವಹಿವಾಟು ಹೊಂದುವ ಮೂಲಕ ಭಾರತೀಯ ರಿಸರ್ವ್‌ ಬ್ಯಾಂಕಿನಿಂದ ಮಾನ್ಯತೆ ಪಡೆದ ಜಿಲ್ಲೆಯ ಏಕಮೇವ ಮಹಿಳಾ ಸಹಕಾರಿ ಬ್ಯಾಂಕ್ ಆಗಿದೆ. ಬ್ಯಾಂಕು ೨೬೦೦ ಮಹಿಳಾ ಸದಸ್ಯರು, ೧೮೦೦ ಅಸೋಸಿಯೇಟ್ ಪುರುಷ ಸದಸ್ಯರನ್ನು ಒಳಗೊಂಡಿದೆ. ಬ್ಯಾಂಕಿನ ಸದಸ್ಯರಿಗೆ, ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು, ಪ್ರಸ್ತುತ ಬೆಳ್ಳಿ ಮಹೋತ್ಸವ ಆಚರಿಸಲು ಸಿದ್ಧವಾಗಿವೆ. ಮುಂಬರುವ ದಿನಗಳಲ್ಲಿ ರಟ್ಟಿಹಳ್ಳಿ ಹೊರತುಪಡಿಸಿ ಜಿಲ್ಲೆಯ ಏಳು ತಾಲೂಕುಗಳಲ್ಲಿ ಶಾಖೆಗಳನ್ನು ಆರಂಭಿಸಲಾಗುವುದು. ಮೊಬೈಲ್ ಬ್ಯಾಂಕಿಂಗ್, ಎಟಿಎಂ ಸೌಲಭ್ಯ, ಡಿಜೀಟಲೀಕರಣ ಮಾಡಲಾಗುವುದು ಎಂದರು.

ಅ. ೨೦ರಂದು ಬೆಳಗ್ಗೆ ೧೧ಕ್ಕೆ ನಡೆಯುವ ಸಮಾರಂಭದಲ್ಲಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಸಚಿವ ಎಚ್.ಕೆ. ಪಾಟೀಲ ಉದ್ಘಾಟಕರಾಗಿ, ಸಂಸದ ಬಸವರಾಜ ಬೊಮ್ಮಾಯಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರ್‌ಬಿಐನ ಪ್ರಧಾನ ವ್ಯವಸ್ಥಾಪಕಿ ಮೀನಾಕ್ಷಿ ಗಡ, ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ತೆರಿಗೆ ಇಲಾಖೆಯ ಹೆಚ್ಚುವರಿ ಕಮಿಷನರ್ ಪ್ರಿಯದರ್ಶಿನಿ ಬಸೇಗಣ್ಣಿ, ಜಿಲ್ಲಾಸ್ಪತ್ರೆಯ ದಂತ ಆರೋಗ್ಯಾಕಾರಿ ಡಾ. ಕಲ್ಪನಾ ಎಂ.ಎಸ್., ಡಿಸಿಪಿ ಪ್ರಗ್ಯಾ ಆನಂದ, ಆಹ್ವಾನಿತರಾಗಿ ಸಹಕಾರ ಇಲಾಖೆ ಉಪನಿಬಂಧಕ ಎ.ಯು. ಖಾನ ಪಾಲ್ಗೊಳ್ಳಲಿದ್ದಾರೆ ಎಂದರು.

ಸುಧಾ ಆನೂರಶೆಟ್ರು, ಕಾವ್ಯಾ ಕೋರಿಶೆಟ್ಟರ, ಶೈಲಾ ಬಸೇಗಣ್ಣಿ, ಪಾರ್ವತಿ ಭಾವನೂರ, ಕವಿತಾ ಕಿತ್ತೂರ, ಲೀಲಾ ಗಡಾದ, ಅಂಜನಾ ಕುಂಠೆ, ರತ್ನವ್ವ ಹೇರೂರ, ರತ್ನಾ ಅಂಗಡಿ ಉಪಸ್ಥಿತರಿದ್ದರು.