ವ್ಯವಸ್ಥಿತವಾಗಿ ಬಸ್ ಕಾರ್ಯಾಚರಣೆಗೆ ಪ್ರಿಯಾಂಗಾ ಎಂ ಸೂಚನೆ

| Published : May 05 2025, 12:53 AM IST

ವ್ಯವಸ್ಥಿತವಾಗಿ ಬಸ್ ಕಾರ್ಯಾಚರಣೆಗೆ ಪ್ರಿಯಾಂಗಾ ಎಂ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿಯ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿದ ವಾಯವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಅವರು, ಸಾರಿಗೆ ಬಸ್‌ಗಳ ವ್ಯವಸ್ಥಿತ ಕಾರ್ಯಾಚರಣೆ ಬಗ್ಗೆ ಪರಿಶೀಲನೆ ನಡೆಸಿದರು.

ಹಾವೇರಿ: ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಸ್‌ಗಳನ್ನು ಸರಿಯಾಗಿ ಕಾರ್ಯಾಚರಣೆ ಮಾಡುವಂತೆ ವಾಯವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಅವರು ಸೂಚನೆ ನೀಡಿದರು. ಇಲ್ಲಿಯ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿದ ಅವರು, ಸಾರಿಗೆ ಬಸ್‌ಗಳ ವ್ಯವಸ್ಥಿತ ಕಾರ್ಯಾಚರಣೆ ಬಗ್ಗೆ ಪರಿಶೀಲನೆ ನಡೆಸಿದ ಅವರು, ವಾಹನಗಳ ದಟ್ಟಣೆ ಹಾಗೂ ಪ್ರಯಾಣಿಕರ ದಟ್ಟಣೆಯನ್ನು ಸುವ್ಯವಸ್ಥಿತವಾಗಿ ನಿಯಂತ್ರಿಸಲು ಅಧ್ಯಯನ ಮಾಡಿ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯ ಸಂಚಾರ ವ್ಯವಸ್ಥಾಪಕರು, ಮುಖ್ಯ ಕಾಮಗಾರಿ ಅಭಿಯಂತರರು ಹಾಗೂ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.ನಂತರ ಬ್ಯಾಡಗಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ, ಬ್ಯಾಡಗಿ ಬಸ್ ನಿಲ್ದಾಣದ ಸ್ವಚ್ಚತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಬಸ್ ನಿಲ್ದಾಣದ ಸ್ವಚ್ಚತೆ ಬಗ್ಗೆ, ಅನುಸೂಚಿಗಳ ಹೆಚ್ಚಳ ಬಗ್ಗೆ ಹಾಗೂ ಕಾರ್ಯಾಚರಣೆ ಸುಧಾರಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಘಟಕದ ಸಿಬ್ಬಂದಿ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಲು ಸಂಬಧಿಸಿದ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.ಕೇಂದ್ರ ಕಚೇರಿಯ ವಿವೇಕಾನಂದ ವಿಶ್ವಜ್ಞ, ಮುಖ್ಯ ಸಂಚಾರ ವ್ಯವಸ್ಥಾಪಕ ದಿವಾಕರ್ ಯರಗುಪ್ಪ, ಮುಖ್ಯ ಕಾಮಗಾರಿ ಅಭಿಯಂತರರು ಹಾಗೂ ಹಾವೇರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ಜಿ., ವಿಭಾಗೀಯ ಸಾರಿಗೆ ಅಧಿಕಾರಿ ಅಶೋಕ ಪಾಟೀಲ್, ವಿಭಾಗೀಯ ತಾಂತ್ರಿಕ ಶಿಲ್ಪಿ ಕೆ.ಆರ್. ನಾಯಕ್ ಮತ್ತು ವಿಭಾಗದ ಇತರೆ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.ಧರ್ಮಜಾಗೃತಿ ಮೂಡಿಸಿದ ಶಂಕರಾಚಾರ್ಯರು

ಬ್ಯಾಡಗಿ: ಅದ್ವೈತ ಸಿದ್ಧಾಂತ ಪ್ರತಿಪಾದಿಸಿ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿ ದೇಶದ ನಾಲ್ಕು ದಿಕ್ಕುಗಳಲ್ಲಿ 4 ಪೀಠಗಳನ್ನು ಸ್ಥಾಪಿಸಿ ಭಾರತದ ಸನಾತನ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು ಎಂದು ಪ್ರಾಚಾರ್ಯ ಡಾ. ಎಸ್.ಜಿ. ವೈದ್ಯ ತಿಳಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತಿ ಕಾರ‍್ಯಕ್ರಮದಲ್ಲಿ ಮಾತನಾಡಿ, ತಮ್ಮ ಏಳನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕಾರ ಮಾಡಿದ ಶಂಕರಾಚಾರ್ಯರು 8ನೇ ಶತಮಾನದಲ್ಲಿಯೇ ಹಿಂದೂ ಧರ್ಮದ ಉಳಿವಿಗಾಗಿ ಶ್ರಮಿಸಿ 4 ಪೀಠಗಳ ಮೂಲಕ ಧರ್ಮ ಜಾಗೃತಿ ಹಾಗೂ ಸಂಸ್ಕಾರ ನೀಡುವ ಮೂಲಕ ಸನಾತನ ಧರ್ಮವನ್ನು ಉಳಿಸಲು ಶ್ರಮಿಸಿದರು ಎಂದರು.ಬ್ರಾಹ್ಮಣ ಸಮಾಜದ ತಾಲೂಕಾಧ್ಯಕ್ಷ ಶಂಕರರಾವ್ ಕುಲಕರ್ಣಿ ಮಾತನಾಡಿ, ತಾವು ಇದ್ದಷ್ಟು ಜೀವಿತಾವಧಿಯಲ್ಲಿ ದೇಶದ ಮೂಲೆ ಮೂಲೆ ಸಂಚರಿಸಿ ಅದ್ವೈತ ಸಿದ್ಧಾಂತ ಪ್ರತಿಪಾದಿಸಿ ಹಲವಾರು ಮತಗಳಿಂದ ದಾಳಿಗೊಳಗಾಗಿದ್ದ ಸನಾತನ ಹಿಂದೂ ಧರ್ಮವನ್ನು ಪುರುತ್ಥಾನಗೊಳಿಸಿದರು ಎಂದರು.

ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ತಹಸೀಲ್ದಾರ್ ಫಿರೋಜ ಷಾ ಸೋಮನಕಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ವಿನಾಯಕ ಹುದ್ದಾರ, ಸಮಾಜದ ಮುಖಂಡರಾದ ಉಮೇಶ ರಟ್ಟಿಹಳ್ಳಿ, ಬಾಬುರಾವ್ ಹುದ್ದಾರ, ಸಂಧ್ಯಾರಾಣಿ ದೇಶಪಾಂಡೆ, ಗೋಪಾಲ ದೇಶಪಾಂಡೆ, ಶ್ರೀನಿವಾಸ ಕುಲಕರ್ಣಿ, ಪವನ್ ಗೋಸಾವಿ, ಸುಪ್ರಭಾ ಗೋಸಾವಿ ಹಾಗೂ ಸಮಾಜದ ಮುಖಂಡರು ಇದ್ದರು.