ಸಾರಾಂಶ
ಶಿವಮೊಗ್ಗ: ಬೀದರ್ ಜಿಲ್ಲೆಯ ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರನ್ನು ಎಳೆದುತಂದು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಯುತ್ತಿದೆ ಎಂದು ಭದ್ರಾವತಿಯ ಪ್ರಿಯಾಂಕ್ ಖರ್ಗೆ ಅಭಿಮಾನಿಗಳ ಬಳಗದ ಅಧ್ಯಕ್ಷ ವಿ.ವಿನೋದ್ ಹೇಳಿದರು.
ಶಿವಮೊಗ್ಗ: ಬೀದರ್ ಜಿಲ್ಲೆಯ ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರನ್ನು ಎಳೆದುತಂದು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಯುತ್ತಿದೆ ಎಂದು ಭದ್ರಾವತಿಯ ಪ್ರಿಯಾಂಕ್ ಖರ್ಗೆ ಅಭಿಮಾನಿಗಳ ಬಳಗದ ಅಧ್ಯಕ್ಷ ವಿ.ವಿನೋದ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುತ್ತಿಗೆದಾರ ಸಚಿನ್ ವೈಯಕ್ತಿಕ ವ್ಯವಹಾರಗಳಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರೇ ಖುದ್ದಾಗಿ ಬಿಜೆಪಿಯವರ ಈ ಸುಳ್ಳು ಆರೋಪಕ್ಕೆ ವಿರೋಧಿಸಿದ್ದಾರೆ. ಅಲ್ಲದೆ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಕೋರಿದ್ದಾರೆ. ಹಾಗಾಗಿ ಸತ್ಯಾಸತ್ಯತೆ ಹೊರಗೆ ಬರುತ್ತದೆ ಎಂದರು.ಬಿಜೆಪಿ ಪ್ರತಿಪಕ್ಷವಾಗಿ ಈ ಘಟನೆಯನ್ನು ರಾಜಕಾರಣಕ್ಕೆ ಬಳಸುತ್ತಿರುವುದು ದುರಾದೃಷ್ಟಕರವಾಗಿದೆ. ಬಿಜೆಪಿಯು ಕುತಂತ್ರದಿಂದ ಕಲಬುರಗಿಯಲ್ಲಿ ಪ್ರತಿಭಟನೆಯ ನೆಪದಲ್ಲಿ ಅಶಾಂತಿ ವಾತಾವರಣ ಉಂಟು ಮಾಡುತ್ತಿದೆ. ಪ್ರಿಯಾಂಕ್ ಖರ್ಗೆ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನವಿದು. ಇದನ್ನು ಕಲಬುರಗಿಯ ಜನ ಒಪ್ಪುವುದಿಲ್ಲ ಎಂದರು.ಈಗಾಗಲೇ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲೀಕರು ಸಹ ಆರೋಪಿಗಳಾಗಿದ್ದಾರೆ. ಟೆಂಡರ್ ಗೆ ಸಂಬಂಧಿಸಿದಂತೆ ಇಎಂಡಿ ಹಣ ಠೇವಣಿಯನ್ನಾಗಿ ಇಡಲು ಸಚಿನ್ ಆರೋಪಿಗಳಿಂದ 65 ಲಕ್ಷ ರು. ಹಣ ಪಡೆದಿದ್ದ ಎಂಬುದನ್ನು ಆರೋಪಿಗಳೇ ಹೇಳಿದ್ದಾರೆ. ಇದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಷ್ಟಕ್ಕೂ ಡೆತ್ ನೋಟ್‌ನಲ್ಲಿ ಪ್ರಿಯಾಂಕ್ ಖರ್ಗೆ ಅವರ ಹೆಸರು ಇಲ್ಲ. ಬಿಜೆಪಿಯವರು ರಾಜಕೀಯ ದ್ವೇಷಕ್ಕಾಗಿ ಈ ಪ್ರಕರಣವನ್ನು ಎಳೆದು ತರುತ್ತಿದ್ದಾರೆ ಎಂದು ದೂರಿದರು.ಮಲ್ಲಿಕಾರ್ಜುನ ಖರ್ಗೆಯವರ ಆಶ್ರಯದಲ್ಲಿ ಬೆಳೆದಿದ್ದ ಚಲವಾದಿ ನಾರಾಯಣಸ್ವಾಮಿ ಈಗ ಆರ್‌ಎಸ್‌ಎಸ್ ನಿಷ್ಠಾವಂತ ಸಂಘ ಪರಿವಾರದ ಕಾರ್ಯಕರ್ತನಂತೆ ವರ್ತಿಸುತ್ತಿದ್ದಾರೆ. ಖರ್ಗೆಯವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಷಡ್ಯಂತ್ರ ರೂಪಿಸುತ್ತಿದ್ದಾನೆ. ಇದರ ಹಿಂದೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ನವರ ಕೈವಾಡವಿದೆ. ಚಲವಾದಿ ನಾರಾಯಣಸ್ವಾಮಿ ಅವರ ವಿರುದ್ಧವೇ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಅಭಿಮಾನಿ ಬಳಗದ ಪ್ರಮುಖರಾದ ಆದರ್ಶ್ ಪಾಟೀಲ್, ಸೆಂದಿಲ್ ಕುಮಾರ್, ಡಿ.ಕರಿಯಪ್ಪ , ಸುನಿಲ್ ಕೋಠಿ ಮೊದಲಾದವರಿದ್ದರು.