ಸಾರಾಂಶ
ವಿಶೇಷ ವರದಿ ಧಾರವಾಡ
ಕೆಲ ವರ್ಷಗಳ ಹಿಂದಷ್ಟೇ ಪ್ರತಿ ವರ್ಷ ಬೇಸಿಗೆ ಬಂದರೆ ಜಿಲ್ಲೆಯ ಅನೇಕ ಹಳ್ಳಿಗಳು ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸುತ್ತಿದ್ದವು. ಬಹುತೇಕ ಬೆಳವಲು ಪ್ರದೇಶದ (ನವಲಗುಂದ, ಕುಂದಗೋಳ) ಹತ್ತಾರು ಹಳ್ಳಿಗಳಿಗೆ ನೀರು ಪೂರೈಸಲು, ಜನರ ಬಾಯಾರಿಕೆ ನೀಗಿಸಲು ಇಡೀ ಜಿಲ್ಲಾಡಳಿತ ಪರದಾಡಬೇಕಿತ್ತು. ಆದರೆ, ಈ ಬೇಸಿಗೆಯಲ್ಲಿ ನೀರಿನ ಸಮಸ್ಯೆಗೆ ಒಳಗಾಗುವ ಹಲವಾರು ಹಳ್ಳಿಗಳು ನಿರಾಳವಾಗಿ ಉಸಿರಾಡುವಂತಾಗಿದೆ.ತೀವ್ರ ಬಿಸಿಲಿನ ವಾತಾವರಣದಲ್ಲಿ ತತ್ತರಿಸುತ್ತಿರುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಧಾರವಾಡವೂ ಒಂದು. ಇದರಿಂದ ಹೊರ ಬರಲು ಧಾರವಾಡ ಜಿಲ್ಲಾಡಳಿತವು ಕೆರೆಗಳ ಮರುಪೂರಣ ಯೋಜನೆಯನ್ನು ಸಕ್ರಿಯವಾಗಿ ಕೈಗೆತ್ತಿಕೊಂಡಿದ್ದು, ಇದು ಬೇಸಿಗೆಯ ತೀವ್ರ ಅವಧಿಯಲ್ಲಿಯೂ 60ಕ್ಕೂ ಹೆಚ್ಚು ಜಲಮೂಲಗಳು ತುಂಬಿ ತುಳುಕಲು ಅನುವು ಮಾಡಿಕೊಟ್ಟಿದೆ. ಮಾರ್ಚ್‌ನಲ್ಲಿ ಜಿಲ್ಲೆಯು 40 ಡಿಗ್ರಿ ಸೆಲ್ಸಿಯಸ್ ದಾಖಲಿಸುವ ಮೂಲಕ ಬೇಸಿಗೆಯ ಹಿಂದಿನ ಎಲ್ಲ ದಾಖಲೆಗಳನ್ನು ಈ ಬಾರಿ ಮುರಿದಿದೆ. ದಿನಗಳು ಉರುಳಿದಂತೆ ತಾಪಮಾನ ಹೆಚ್ಚುತ್ತಿದ್ದರೂ, ನೀರಿನ ಸಮಸ್ಯೆಯೂ ಹೆಚ್ಚುತ್ತಿದೆ. ಆದರೆ, ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ನೀರಿನ ಕೊರತೆ ಬಹುತೇಕ ನೀಗಿದೆ. 2023ರಲ್ಲಿ ಮುಂಗಾರು, ಹಿಂಗಾರು ಋತುವಿನಲ್ಲಿ ಜಿಲ್ಲೆಯನ್ನು ಬರ ಆವರಿಸಿತ್ತು. ಇದರಿಂದಾಗಿ, ಏಳು ತಾಲೂಕುಗಳ 176ಕ್ಕೂ ಹೆಚ್ಚು ಗ್ರಾಮಗಳು ಮನುಷ್ಯರಿಗೆ ಮತ್ತು ಜಾನುವಾರುಗಳಿಗೆ ತೀವ್ರ ನೀರಿನ ಕೊರತೆ ಎದುರಿಸುತ್ತಿದ್ದವು. 2024ರಲ್ಲಿ ಧಾರವಾಡದಲ್ಲಿ ಎರಡೂ ವರ್ಷಗಳಲ್ಲಿ ಉತ್ತಮ ಮಳೆಯಾಯಿತು. ಇಷ್ಟಾಗಿಯೂ ಬೇಸಿಗೆಯಲ್ಲಿ ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ವಾಸ್ತವವಾಗಿತ್ತು. ಈ ಹಿನ್ನೆಲೆಯಲ್ಲಿ ಮಲಪ್ರಭಾ ಬಲದಂಡೆ ಕಾಲುವೆಯಿಂದ ಸಮಸ್ಯಾತ್ಮಕ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ.
ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೇತೃತ್ವದ ಮಲಪ್ರಭಾ ನೀರಾವರಿ ಸಲಹಾ ಸಮಿತಿಯು 4 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಮಲಪ್ರಭಾ ಬಲದಂಡೆ ಕಾಲುವೆ (ಎಂಆರ್‌ಬಿಸಿ) ಮೂಲಕ ನೀರು ಬಿಡುಗಡೆ ಮಾಡುವ ಆದೇಶವನ್ನು ಹೊರಡಿಸಿತು.ಮಲಪ್ರಭಾದಲ್ಲಿ 15 ಟಿಎಂಸಿ ನೀರು ಲಭ್ಯವಿದೆ ಮತ್ತು ಇದು ಮಳೆಗಾಲದ ವರೆಗೆ ಜಿಲ್ಲೆಗೆ ಕುಡಿಯುವ ನೀರನ್ನು ಪೂರೈಸಲು ಸಾಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸಮಸ್ಯಾತ್ಮಕ ಕೆರೆಗಳಿಗೆ ನೀರು ಪೂರೈಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ದಿವ್ಯಾ ಪ್ರಭು, ಬೇಸಿಗೆಯಲ್ಲಿ ನೀರಿನ ಕೊರತೆಗೆ ಒಳಗಾಗುವ 4 ತಾಲೂಕುಗಳಲ್ಲಿ 60 ಕೆರೆಗಳನ್ನು ಮಲಪ್ರಭಾ ನೀರಿನಿಂದ ತುಂಬಿಸಲಾಗಿದೆ. ಹೀಗಾಗಿ ಬೇಸಿಗೆ ಮುಗಿಯುವ ವರೆಗೂ ನೀರಿನ ಕೊರತೆ ಇಲ್ಲ ಎಂದರು. ನವಲಗುಂದ 37, ಅಣ್ಣಿಗೇರಿ 20, ಹುಬ್ಬಳ್ಳಿ 46 ಮತ್ತು ಕುಂದಗೋಳದಲ್ಲಿ 14 ಗ್ರಾಮಗಳನ್ನು ಗುರುತಿಸಲಾಗಿದ್ದು, ಇವು ನೀರಿನ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು. ಆದ್ದರಿಂದ, ನವಲಗುಂದದಲ್ಲಿ 37 ಕೆರೆ, ಅಣ್ಣಿಗೇರಿಯಲ್ಲಿ 13, ಹುಬ್ಬಳ್ಳಿಯಲ್ಲಿ ಖಾಲಿ ಇರುವ ಏಳು ಕೆರೆಗಳನ್ನು ಮತ್ತು ಕುಂದಗೋಳದಲ್ಲಿ ಮೂರು ಕೆರೆಗಳನ್ನು ಮರುಪೂರಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಮಾಹಿತಿ ನೀಡಿದರು.
ಯಾವುದೇ ಹಳ್ಳಿಗಳಲ್ಲಿ ನೀರಿನ ಬೇಡಿಕೆ ಇದ್ದಲ್ಲಿ, ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡುವ ಜತೆಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲು ಆಡಳಿತವು ಸಜ್ಜಾಗಿದೆ. ಆದರೆ, ಇಲ್ಲಿಯ ವರೆಗೆ ಅಂತಹ ಯಾವುದೇ ದೊಡ್ಡದಾದ ನೀರಿನ ಸಮಸ್ಯೆ ಎದುರಾಗಿಲ್ಲ. ಜತೆಗೆ ಕೆಲ ದಿನಗಳ ಹಿಂದೆ ಮುಂಗಾರು ಪೂರ್ವ ಮಳೆಯಿಂದ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ದೊರೆತಂತಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.ಬೇಡ್ತಿ ಲಿಫ್ಟ್ ನೀರಾವರಿ: ಜಿಲ್ಲೆಯ ಮಟ್ಟಿಗೆ ಮತ್ತೊಂದು ಸಂತಸದ ಸುದ್ದಿಯೆಂದರೆ, ಸರ್ಕಾರ ಬೇಡ್ತಿ ನದಿ ಲಿಫ್ಟ್ ನೀರಾವರಿ ಯೋಜನೆಯ ಎರಡನೇ ಹಂತವನ್ನು ಅನುಮೋದಿಸಿದೆ. ಈ ಯೋಜನೆಗೆ ₹180 ಕೋಟಿಗಳನ್ನು ಮಂಜೂರು ಮಾಡಿದೆ. ಈ ಯೋಜನೆಯು ಕಲಘಟಗಿ ಪ್ರದೇಶದ 60 ಹೆಚ್ಚುವರಿ ಕೆರೆಗಳಿಗೆ ನೀರು ತುಂಬಿಸಲು ಸಹಾಯ ಮಾಡುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಈ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಬೇಡಿಕೆಯನ್ನು ಮುಖ್ಯಮಂತ್ರಿ ಮುಂದೆ ಪ್ರಸ್ತಾಪಿಸಿ, ಯೋಜನೆಗೆ ಅನುಮೋದನೆ ಪಡೆದಿದ್ದಾರೆ.