ಸಾರಾಂಶ
ರಾಣಿಬೆನ್ನೂರು: ಜನರ ಸಮಸ್ಯೆಗಳ ವಿಚಾರವಾಗಿ ಬ್ಯಾಡಗಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ರಾಣಿಬೆನ್ನೂರು ತಾಲೂಕಿನ ಗ್ರಾಮಗಳ ಕೆಲಸ ಮಾಡದೆ ಹೋದರೆ ನಿಮ್ಮ ಮನಸ್ಸಿಗೆ ದ್ರೋಹ ಮಾಡಿದಂತಾಗುತ್ತದೆ. ರಾಣಿಬೆನ್ನೂರ ಕ್ಷೇತ್ರದ ಜನರಿಗೆ ಸ್ಪಂದಿಸಿದಂತೆ ಬ್ಯಾಡಗಿ ಕ್ಷೇತ್ರ ವ್ಯಾಪ್ತಿಯ ಜನರಿಗೂ ಸ್ಪಂದಿಸಬೇಕು. ಇಲ್ಲವಾದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅಧಿಕಾರಿಗಳಿಗೆ ತಾಕೀತು ಮಾಡಿದರು. ನಗರದ ತಾಪಂ ಸಭಾಭವನದಲ್ಲಿ ಸೋಮವಾರ ಮಧ್ಯಾಹ್ನ ನೆರೆ ಹಾವಳಿ ವಿಚಾರವಾಗಿ ತಾಲೂಕಿನ ಬ್ಯಾಡಗಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳ ಸಮಸ್ಯೆಗಳ ಕುರಿತು ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕು ಮಟ್ಟದ ಅಧಿಕಾರಿಗಳು ಬ್ಯಾಡಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾಲೂಕಿನ ಗ್ರಾಮಗಳ ಜನರು ಸಮಸ್ಯೆ ಹೇಳಿಕೊಂಡು ಬಂದರೆ ಸ್ಪಂದಿಸುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದಿವೆ. ಈ ರೀತಿ ಮಾಡುವುದು ಸರಿಯೇ ಎಂದು ಪ್ರಶ್ನಿಸಿದ ಅವರು, ಬ್ಯಾಡಗಿ ಕ್ಷೇತ್ರಕ್ಕೆ ಬರುವ ಜನರು ಮತ ಹಾಕಿಲ್ಲವೇ. ಜನರು ಎಂದರೆ ಎಲ್ಲರೂ ಒಂದೇ ಎಂದು ತಿಳಿದುಕೊಳ್ಳಿ. ಇಲ್ಲವಾದರೆ ಕಷ್ಟ ಅನುಭವಿಸಬೇಕಾಗುತ್ತದೆ ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇ-ಸ್ವತ್ತು ನೀಡಲು ಸೂಚನೆ:ಬೆನಕನಗೊಂಡ ಗ್ರಾಮದ ದಲಿತ ಕಾಲನಿಯ ನಿವೇಶನದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಅವರಿಗೆ ರಸ್ತೆ, ವಿದ್ಯುತ್, ನೀರು ಸೇರಿ ಎಲ್ಲ ಸೌಲಭ್ಯ ಒದಗಿಸಲಾಗಿದೆ. ಆದರೆ, ಇ-ಸ್ವತ್ತು ನೀಡುತ್ತಿಲ್ಲ ಎನ್ನುವ ಆರೋಪವಿದೆ. ಸುಮಾರು 50 ವರ್ಷಗಳಿಂದ ಅವರು ಅಲ್ಲಿ ವಾಸವಾಗಿದ್ದಾರೆ. ಅಂಥವರಿಗೆ ನೀವು ಇ-ಸ್ವತ್ತು ಕೊಡಲ್ಲ ಎಂದರೆ ನಾಚಿಗೇಡಿತನ ಸಂಗತಿ ಎಂದು ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಈ ಬಗ್ಗೆ ಇರುವ ಗೊಂದಲ ಸರಿಪಡಿಸಿ ಜನರಿಗೆ ಇ-ಸ್ವತ್ತು ನೀಡಬೇಕು ಎಂದು ಸೂಚಿಸಿದರು.ತಾಲೂಕಿನ ಬೆನಕನಕೊಂಡ, ಸುಣಕ¯್ಲಬಿದರಿ, ಸರವಂದ, ಯರೇಕುಪ್ಪಿ, ತಿರುಮಲದೇವರಕೊಪ್ಪ, ಹೆಡಿಯಾಲ ಗ್ರಾಮಗಳ ಕೆರೆ ತುಂಬುವ ಕೆಲಸ ಆರಂಭವಾಗಿದೆ. ತುಂಗಭದ್ರಾದಿಂದ ಬರುವ ನೀರು ಸರಿಯಾಗಿ ಕೆರೆ ತಲುಪುತ್ತಿದೆಯೆ ಎಂದು ಪರಿಶೀಲಿಸಬೇಕು. ಕೆಲವು ಕಡೆ ನೀರು ಬೇರೆ ಕಡೆ ಹೋಗದಂತೆ ತಡೆಯುತ್ತಿದ್ದಾರೆ ಎನ್ನುವ ದೂರುಗಳಿವೆ. ಈ ಬಗ್ಗೆ ಎಲ್ಲ ಗ್ರಾಪಂ ಪಿಡಿಒಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.ಸ್ವಚ್ಛತೆಗೆ ಒತ್ತು ನೀಡಿ: ಗ್ರಾಮೀಣ ಭಾಗದಲ್ಲಿ ಡೆಂಘೀ ಹಾವಳಿ ಹೆಚ್ಚಳವಾಗಿದೆ. ಆದ್ದರಿಂದ ಎಲ್ಲ ಪಿಡಿಒ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಎಲ್ಲೆಡೆ ಫಾಗಿಂಗ್ ಮಾಡಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.ತಹಸೀಲ್ದಾರ್ ಕೆ. ಗುರುಬಸವರಾಜ, ತಾಪಂ ಇಒ ಸುಮಲತಾ ವೇದಿಕೆಯಲ್ಲಿ ಇದ್ದರು.ಬ್ಯಾಡಗಿ ಹಳ್ಳಿಗಳ ಸಮಸ್ಯೆಗಳ ಕುರಿತು ಚರ್ಚೆ:ಬ್ಯಾಡಗಿ ವಿಧಾನಸಭೆ ಕ್ಷೇತ್ರವ್ಯಾಪ್ತಿಯ ರಾಣಿಬೆನ್ನೂರು ತಾಲೂಕಿನ ಹಳ್ಳಿಗಳ ಸಮಸ್ಯೆಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು. ಆದರೆ ಶಾಸಕ ಬಸವರಾಜ ಶಿವಣ್ಣನವರ ಬ್ಯಾಡಗಿ ತಾಲೂಕಿನ ಹಳ್ಳಿಗಳ ಸಮಸ್ಯೆಗಳ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದು ಅಚ್ಚರಿಗೆ ಕಾರಣವಾಯಿತು.