ಸಾರಾಂಶ
ಹಿಂದೆ ಗುರು ಮುಂದೆ ಗುರಿ ಇದ್ದಾಗ ಪ್ರತಿಯೊಬ್ಬ ಮನುಷ್ಯನ ಜೀವನವೂ ಸಾರ್ಥಕವಾಗುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿಗಳು ಜ್ಞಾನವೆಂಬ ಶಿಖರವನ್ನು ತಲುಪಲು ಶಿಕ್ಷಕರು ಏಣಿಯಿದ್ದಂತೆ ಎಂದು ಮರಿಮಲ್ಲಪ್ಪ ಪದವಿಪೂರ್ವ ಕಾಲೇಜಿನ ವಿಶ್ರಾಂತ ರಸಾಯನಶಾಸ್ತ್ರ ಅಧ್ಯಾಪಕರು, ಶಿಕ್ಷಣತಜ್ಞ ಪ್ರೊ.ಜಿ. ತಿಮ್ಮಪ್ಪ ಹೇಳಿದರು.ವಿಜಯವಿಠಲ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಶ್ರೀ ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಗುರು ಮುಂದೆ ಗುರಿ ಇದ್ದಾಗ ಪ್ರತಿಯೊಬ್ಬ ಮನುಷ್ಯನ ಜೀವನವೂ ಸಾರ್ಥಕವಾಗುತ್ತದೆ. ಶಿಕ್ಷಕರ ಬದುಕು ತೆರೆದ ಪುಸ್ತಕವಿದ್ದಂತೆ. ವಿದ್ಯಾರ್ಥಿಗಳು ಸದಾ ಅವರ ಮಾರ್ಗದರ್ಶನವನ್ನು ಪಡೆಯಬೇಕು. ಶಿಕ್ಷಣದ ಜೊತೆಗೆ ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಗುರಿಯನ್ನು ಸಾಧಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇಂದಿನ ವಿದ್ಯಾರ್ಥಿಗಳು ತಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಸಂಪೂರ್ಣ ಪರಿಶ್ರಮ ಮತ್ತು ಆಸಕ್ತಿಯಿಂದ ಪ್ರಯತ್ನಿಸಿದಲ್ಲಿ ಯಶಸ್ಸು ದೊರಕುವುದು ಎಂದು ಹೇಳಿದರು.ಅಧ್ಯಕ್ಷತೆಯ ವಹಿಸಿದ್ದ ವಿಜಯವಿಠಲ ವಿದ್ಯಾಸಂಸ್ಥೆಗಳ ಟ್ರಸ್ಟಿ ಸಿಎ ವಿಶ್ವನಾಥ ಮಾತನಾಡಿ, ವಿದ್ಯಾರ್ಥಿಗಳು ಸ್ವಪ್ರಯತ್ನದಿಂದ, ಜವಾಬ್ದಾರಿಯಿಂದ ತಮ್ಮ ಶೈಕ್ಷಣಿಕ ಜೀವನವನ್ನು ಸಫಲಗೊಳಿಸಿಕೊಳ್ಳಬೇಕು. ಶಿಕ್ಷಕರು ವಿದ್ಯಾರ್ಥಿಗಳ ಬೌದ್ಧಿಕ ಪೋಷಕರಿದ್ದಂತೆ. ಉತ್ತಮ ಶಿಕ್ಷಕರು ಜ್ಞಾನದೊಂದಿಗೆ ಮೌಲ್ಯಯುತವಾದ ಬದುಕನ್ನು ರೂಪಿಸಲು ಮಾರ್ಗದರ್ಶನ ತೋರುವ ಗುರುಗಳಾಗಿರುತ್ತಾರೆ ಎಂದರು.
ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಅತಿಥಿಗಳನ್ನು ಪರಿಚಯಿಸಿದರು. ಪ್ರೊ. ಜಿ. ತಿಮ್ಮಪ್ಪ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಿತು.ಸಾರಿಕಾ ಜೆ. ಭಾರದ್ವಾಜ್ ಪ್ರಾರ್ಥಿಸಿದರು. ಬಿ. ಸುದೀಪ್ತ ನಿರೂಪಿಸಿದರು, ಖುಷಿ ಆರ್. ಗೌಡ ವಂದಿಸಿದರು. ಸುರಭಿ ಎಸ್. ಭಟ್ ಸ್ವಾಗತಿಸಿದರು.