ಪ್ರೊ.ಸಿದ್ದರಾಮಯ್ಯ ಬರಹ, ಬದುಕಿನಲ್ಲಿ ಸಾಮತ್ಯೆಯಿದೆ: ಹಂಸಲೇಖ

| Published : Dec 09 2024, 01:16 AM IST

ಸಾರಾಂಶ

ಹಣ, ಅಧಿಕಾರದ ಹಿಂದೆ ಹೋಗದೆ ವೈಚಾರಿಕ ಸಾಹಿತ್ಯವನ್ನು ಬರೆದು ಜನಸಾಮಾನ್ಯರನ್ನು ತಲುಪಿರುವ ನೆಲಮೂಲದ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರ ಬರಹ ಮತ್ತು ಬದುಕಿನಲ್ಲಿ ಸಾಮ್ಯತೆಯಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಣ, ಅಧಿಕಾರದ ಹಿಂದೆ ಹೋಗದೆ ವೈಚಾರಿಕ ಸಾಹಿತ್ಯವನ್ನು ಬರೆದು ಜನಸಾಮಾನ್ಯರನ್ನು ತಲುಪಿರುವ ನೆಲಮೂಲದ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರ ಬರಹ ಮತ್ತು ಬದುಕಿನಲ್ಲಿ ಸಾಮ್ಯತೆಯಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.

ಭಾಗವತರು ಸಂಸ್ಕೃತಿ ಸಂಘಟನೆ ನಗರದ ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರೊ. ಎಸ್.ಜಿ. ಸಿದ್ದರಾಮಯ್ಯ-78 ಹಾಗೂ ಅವರ ಬದುಕು ಬರಹ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿ, ಸಿದ್ದರಾಮಯ್ಯ ಅವರು ಯಾವುದೇ ವಿಷಯ, ವಿಚಾರಕ್ಕೆ ರಾಜಿ ಮಾಡಿಕೊಂಡವರಲ್ಲ. ಸಮತ್ವ, ಸಿಂಧುತ್ವದ ಕಡೆಗೆ ಸಾಗುತ್ತಾರೆ. ಎಡವುದು, ಬೀಳುವುದು ಇಂದಿನ ಸಮಾಜದಲ್ಲಿ ಸಹಜ. ನಾವು ಮಾಡುವ ತಪ್ಪುಗಳು ಅರ್ಥವಾಗುವ ಹೊತ್ತಿಗೆ ಅದೆಷ್ಟೋ ಅನರ್ಥಗಳಾಗಿರುತ್ತವೆ. ಅಂತಹ ವೇಳೆ ಎಸ್.ಜಿ.ಸಿದ್ದರಾಮಯ್ಯ ಅವರು ನಮ್ಮನ್ನು ಸಮರ್ಥಿಸಿಕೊಂಡಿದ್ದಾರೆ ಎಂದರು.

ಅವರು ತಮಗೆ ಹೊಳೆದದ್ದನ್ನು ಕವಿತೆಯ ಹೊಳೆಯಾಗಿಸಿ ನಮಗೆ ಕಳುಹಿಸುತ್ತಾರೆ. ಅವರಿಗೆ ಇರುವ ಶಬ್ಧ ಸಂಪತ್ತು, ಸಾಹಿತ್ಯ ಸಂಪತ್ತು ಬೇರೆ ಭಾಷೆಗೆ ಹೊಳೆಯದಷ್ಟು ದೊಡ್ಡದಾಗಿದೆ ಎಂದು ಹಂಸಲೇಖ ಹೇಳಿದರು.

ಕವಿ ಡಾ. ಎಲ್. ಹನುಮಂತಯ್ಯ ಮಾತನಾಡಿ, ಗ್ರಾಮೀಣ ಬದುಕು, ತಳ ಸಮುದಾಯದ ಬವಣೆಗಳು, ರೋಷ, ಆಕ್ರೋಶ, ಬದುಕು ಎಲ್ಲವನ್ನೂ ತಮ್ಮ ಕೃತಿಗಳಲ್ಲಿ ಸಿದ್ದರಾಮಯ್ಯ ಚಿತ್ರಿಸಿದ್ದಾರೆ. ಹೀಗಾಗಿ ಇವರ ಕೃತಿಗಳು ಓದುಗರನ್ನು ಸೆಳೆಯುತ್ತವೆ. ಹೊಸ ತಲೆಮಾರಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ‘ಪ್ರೊ. ಎಸ್.ಜಿ. ಸಿದ್ದರಾಮಯ್ಯ ಸಮಗ್ರ ನಾಟಕಗಳು’, ‘ಅನಾದಿಯ ಗೆಜ್ಜೆಧ್ವನಿ’ ಕವನ ಸಂಕಲನ ಬಿಡುಗಡೆಗೊಂಡವು. ಕಾರ್ಯಕ್ರಮದಲ್ಲಿ ಹಿರಿಯ ಚಿಂತಕ ಅಗ್ರಹಾರ ಕಷ್ಣಮೂರ್ತಿ, ಭಾಗವತರು ಸಾಂಸ್ಕೃತಿ ಸಂಘಟನೆಯ ಅಧ್ಯಕ್ಷ ಕೆ. ರೇವಣ್ಣ ಇದ್ದರು.