ಸಾಹಿತ್ಯವೆಂಬುದು ಕೇವಲ ಪುಸ್ತಕಗಳ ಪುಟಗಳಿಗೆ ಸೀಮಿತವಾದುದಲ್ಲ. ಅದು ಬದುಕಿನ ಅನುಭವ, ಸಮಾಜದ ಒಳನೋಟ ಹಾಗೂ ಮನುಷ್ಯನ ಭಾವನೆಗಳನ್ನು ಪ್ರತಿಬಿಂಬಿಸುವ ಶಕ್ತಿಯುತ ಮಾಧ್ಯಮ

ಹೊನ್ನಾವರ: ಪುಸ್ತಕ ಓದುವ ಅಭಿರುಚಿ, ಸಾಹಿತ್ಯದ ಆಸಕ್ತಿ ಮತ್ತು ಸಾಹಿತಿಗಳ ಸಾಧನೆಯ ಪರಿಚಯವನ್ನು ಹೊಸ ತಲೆಮಾರಿಗೆ ತಲುಪಿಸುವ ಕಾರ್ಯ ಇಂದಿನ ಅಗತ್ಯವಾಗಿದೆ ಎಂದು ಖ್ಯಾತ ಲೇಖಕ ಸುಮುಖಾನಂದ ಜಲವಳ್ಳಿ ಅಭಿಪ್ರಾಯಪಟ್ಟರು.

ಪಟ್ಟಣದ ‘ನಮ್ಮನೆ ಭಟ್ಟರ ಹೊಟೇಲ್’ನಲ್ಲಿ ಸತ್ವಾಧಾರ ಫೌಂಡೇಶನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಾಹಿತಿ-ಮಾಹಿತಿ ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ಹಸ್ತಾಂತರಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಹಿಂದೆ ಮನೆ ಮನೆಗಳಲ್ಲಿ ಓದುವ ಸಂಸ್ಕೃತಿ ಗಟ್ಟಿಯಾಗಿ ಬೇರೂರಿತ್ತು. ದಿನಪತ್ರಿಕೆ, ವಾರಪತ್ರಿಕೆ, ಕಾದಂಬರಿ ಹಾಗೂ ವಿವಿಧ ಸಾಹಿತ್ಯ ಕೃತಿಗಳ ಓದು ಜೀವನದ ಅವಿಭಾಜ್ಯ ಅಂಗವಾಗಿತ್ತು. ಆದರೆ ಆಧುನಿಕ ಜೀವನಶೈಲಿ, ತಂತ್ರಜ್ಞಾನದ ಪ್ರಭಾವ ಹಾಗೂ ಮೊಬೈಲ್ ಬಳಕೆಯ ಹೆಚ್ಚಳದಿಂದ ಓದುವ ಹವ್ಯಾಸ ಕ್ರಮೇಣ ಕ್ಷೀಣಿಸುತ್ತಿದೆ ಎಂದು ಹೇಳಿದರು.

ಸಾಹಿತ್ಯವೆಂಬುದು ಕೇವಲ ಪುಸ್ತಕಗಳ ಪುಟಗಳಿಗೆ ಸೀಮಿತವಾದುದಲ್ಲ. ಅದು ಬದುಕಿನ ಅನುಭವ, ಸಮಾಜದ ಒಳನೋಟ ಹಾಗೂ ಮನುಷ್ಯನ ಭಾವನೆಗಳನ್ನು ಪ್ರತಿಬಿಂಬಿಸುವ ಶಕ್ತಿಯುತ ಮಾಧ್ಯಮವಾಗಿದೆ. ಒಬ್ಬ ಸಾಹಿತಿಯ ಬದುಕು, ಬರವಣಿಗೆ ಮತ್ತು ಅನುಭವಗಳನ್ನು ತಿಳಿದುಕೊಂಡಾಗ ಅವರ ಸಾಹಿತ್ಯವನ್ನು ಓದಬೇಕೆಂಬ ಆಸಕ್ತಿ ಸಹಜವಾಗಿ ಮೂಡುತ್ತದೆ. ಈ ನಿಟ್ಟಿನಲ್ಲಿ ಸಾಹಿತಿಗಳನ್ನು ಜನರಿಗೆ ಪರಿಚಯಿಸುವ ಕಾರ್ಯಕ್ರಮ ಒಂದು ಉತ್ತಮ ಹಾಗೂ ಅರ್ಥಪೂರ್ಣ ಪ್ರಯತ್ನವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಸತ್ವಾಧಾರ ಫೌಂಡೇಶನ್ ಸಮನ್ವಯಾಧಿಕಾರಿ ರವೀಂದ್ರ ಭಟ್ಟ ಸೂರಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆದಾಗ ಸಾಹಿತ್ಯದ ಬಗ್ಗೆ ಜನರಲ್ಲಿ ಆಸಕ್ತಿ ಮತ್ತು ಪ್ರೇರಣೆ ಹೆಚ್ಚಾಗುತ್ತದೆ. ಸಮಾಜಕ್ಕೆ ಹೇಳಬೇಕಾದ ವಿಚಾರಗಳನ್ನು ಕಟುವಾಗಿ, ನೇರವಾಗಿ ಹೇಳುವ ಅವರ ನುಡಿಗಳು ಕೆಲವರನ್ನು ದೂರ ಮಾಡಿರಬಹುದು. ಆದರೆ ನೇರ ನುಡಿ ಮತ್ತು ಸಾಮಾಜಿಕ ಕಳಕಳಿ ಅವರ ವ್ಯಕ್ತಿತ್ವದ ಪ್ರಮುಖ ಗುಣಗಳಾಗಿವೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಪಿ.ಆರ್. ನಾಯ್ಕ ಅವರು ಕೃತಿಕಾರರ ಸಾಹಿತ್ಯಿಕ ಬದುಕು, ಬರವಣಿಗೆಯ ವೈಶಿಷ್ಟ್ಯ ಹಾಗೂ ಸಾಧನೆಗಳನ್ನು ಪರಿಚಯಿಸಿದರು.

ಅಂಕಣಕಾರ ಎನ್.ಆರ್. ಗಜು ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕೆಂಬ ಆಸಕ್ತಿ ಇದ್ದರೂ ಹಲವು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಆದರೆ ಶುದ್ಧ ಮನಸ್ಸಿನ, ಸಾಹಿತ್ಯದ ಬಗ್ಗೆ ಕಾಳಜಿಯುಳ್ಳ ಅನೇಕರು ನನ್ನನ್ನು ಸಾಹಿತ್ಯ ಕ್ಷೇತ್ರದತ್ತ ಕರೆತಂದರು ಎಂದರು.

ಸತ್ವಾಧಾರ ಫೌಂಡೇಶನ್‌ನ ಜಯದೇವ ಬಳಗಂಡಿ ಪ್ರಾರ್ಥಿಸಿದರು. ‘ನಮ್ಮನೆ ಭಟ್ಟರ ಹೊಟೇಲ್’ ಮಾಲೀಕ ತಿಗಣೇಶ ಮಾಗೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತ್ವಾಧಾರ ಫೌಂಡೇಶನ್ ಸಂಸ್ಥಾಪಕ ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಹೊನ್ನಾವರ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದ ಅಧ್ಯಕ್ಷ ಎಚ್.ಎಸ್. ಗೌಡ ವಂದಿಸಿದರು.