ಸಾರಾಂಶ
ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಬಸವರಾಜ ತಳವಾರ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಜನರು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾದಾಗ ಮಾತ್ರ ದೇಶ ಪ್ರಗತಿ ಸಾಧಿಸಲು ಸಾಧ್ಯ ಎಂದು ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಬಸವರಾಜ ತಳವಾರ ಹೇಳಿದರು. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘದ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ವಾಮಿ ವಿವೇಕಾನಂದರು 39 ವರ್ಷ ಜೀವಿಸಿದರೂ ಅವರ ಸಾಧನೆ ಮಾತ್ರ ಅಪಾರ, ಅವರು ತಮ್ಮ ಜೀವಿತಾವಧಿಯನ್ನು ಯುವ ಜನತೆಗೆ ಮುಡಿಪಾಗಿಟ್ಟಿದ್ದರು. ಯುವಜನತೆ ಮನಸ್ಸು ಮಾಡಿದರೆ ಸಾಧನೆ ಮಾಡಬಹುದು ಎಂದು ಹೇಳಿದರು.ಯಾವುದೇ ಕೆಲಸ ಮಾಡಬೇಕಾದರೆ ಆತ್ಮ ಧೈರ್ಯ ವಿಶ್ವಾಸ, ಇಚ್ಛಾಶಕ್ತಿಯಿಂದ ಮಾಡಿದಾಗ ಮಾತ್ರ ಆ ಕೆಲಸ ಯಶಸ್ವಿಯಾಗಲು ಸಾಧ್ಯ ಎಂಬುದು ಸ್ವಾಮಿ ವಿವೇಕಾನಂದರ ಆಶಯವಾಗಿತ್ತು. ಆದರೆ ಇಂದಿನ ಯುವ ಪೀಳಿಗೆ ಚಲನಚಿತ್ರ ನಟರನ್ನು ತಮ್ಮ ಹೀರೋಗಳಾಗಿ ಅನುಕರಣೆ ಮಾಡುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಯುವ ಜನತೆ ದೇಶದ ಆಸ್ತಿ, ಯುವಕರು ದೇಶ ಕಟ್ಟುವ ಕೆಲಸ ಮಾಡಬೇಕು ಎಂಬುದು ನಮ್ಮ ಹಿಂದಿನ ತಲೆಮಾರಿನವರ ಆಶಯ. ಒಟ್ಟಾರೆ ಯುವಜನರಿಂದ ಪರಿವರ್ತನೆ ಸಾಧ್ಯ. ದೇಶದ ನಾಳಿನ ಸುಭದ್ರ ಭವಿಷ್ಯಕ್ಕೆ ಇಂದಿನ ಯುವಜನರು ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಳ್ಳುವಂತೆ ಹೇಳಿದರು. ಕಾರ್ಯಕ್ರಮದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಜಿ.ಜೆ. ಶಿವಕುಮಾರ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ್ ಸೇರಿದಂತೆ ಹಲವರಿದ್ದರು.