ನಿಷೇಧಾಜ್ಞೆ ಉಲ್ಲಂಘಿಸಿ ಮೆರವಣಿಗೆ: ದಸಂಸ ಕಾರ್ಯಕರ್ತರ ಬಂಧನ

| Published : Oct 21 2023, 12:30 AM IST

ನಿಷೇಧಾಜ್ಞೆ ಉಲ್ಲಂಘಿಸಿ ಮೆರವಣಿಗೆ: ದಸಂಸ ಕಾರ್ಯಕರ್ತರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ನಿಷೇಧಾಜ್ಞೆ ಉಲ್ಲಂಘಿಸಿ ಮೆರವಣಿಗೆ: ದಸಂಸ ಕಾರ್ಯಕರ್ತರ ಬಂಧನ
ಜಿಲ್ಲೆಯಲ್ಲಿ ಆರು ದಿನಗಳ ಕಾಲ ವಿಧಿಸಲಾಗಿರುವ ನಿಷೇಧಾಜ್ಞೆಯನ್ನು ಉಲ್ಲಂಘನೆ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಮಹಿಷ ದಸರಾ ಆಚರಣೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಆರು ದಿನಗಳ ಕಾಲ ವಿಧಿಸಲಾಗಿರುವ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಮೆರವಣಿಗೆ ನಡೆಸಲು ಯತ್ನಿಸಿದ ದಲಿತ ಸಂಘರ್ಷ ಸಮಿತಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಶುಕ್ರವಾರ ಬಂಧಿಸಿ ನಂತರ ಬಿಡುಗಡೆಗೊಳಿಸಿದರು. ಪೂರ್ವ ನಿಗದಿಯಂತೆ ನಗರದ ಹನುಮಂತಪ್ಪ ವೃತ್ತದಿಂದ ಮಧ್ಯಾಹ್ನ ಮೆರವಣಿಗೆ ಹೊರಡುತ್ತಿದ್ದಂತೆ ಪೊಲೀಸರು ತಡೆದರು. ಆಗ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡಿತು. ವಿವಿಧ ದಲಿತ ಸಂಘಟನೆಗಳ ಹಾಗೂ ಪ್ರಗತಿಪರ ಸಂಘಟನೆಗಳ ಸುಮಾರು 56 ಮಂದಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ದಲಿತ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ಚಿಕ್ಕಮಗಳೂರಿನಲ್ಲಿ ಮಹಿಷ ದಸರಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಮಧ್ಯಾಹ್ನ ಮೆರವಣಿಗೆ, ಬಳಿಕ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿತ್ತು. ಇದಕ್ಕೆ ಹಿರಿಯ ಸಾಹಿತಿ ಪ್ರೊ. ಕೆ.ಎಸ್‌. ಭಗವಾನ್‌ ಆಗಮಿಸ ಬೇಕಾಗಿತ್ತು. ಆದರೆ, ಭಗವಾನ್‌ ಅವರು ಮೈಸೂರಿನಲ್ಲಿ ಮಾತನಾಡುವ ವೇಳೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂಬ ಆರೋಪ ಕೇಳಿ ಬಂದಿದ್ದರಿಂದ ಅವರು ಚಿಕ್ಕಮಗಳೂರಿಗೆ ಬರುವುದನ್ನು ಒಕ್ಕಲಿಗರ ಸಮುದಾಯ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಪೊಲೀಸ್‌ ಇಲಾಖೆ ವರದಿ ಆಧಾರದ ಮೇಲೆ ಜಿಲ್ಲಾಡಳಿತ ಅ. 19 ರಿಂದ 24 ರವರೆಗೆ ಮಹಿಷ ದಸರಾ ಆಚರಣೆಗೆ ಸಂಬಂಧಿಸಿದಂತೆ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಈ ನಿಷೇಧಾಜ್ಞೆಯ ನಡುವೆ ದಸಂಸ ಮುಖಂಡರು ಹಾಗೂ ಕಾರ್ಯಕರ್ತರು ಮೆರವಣಿಗೆ ಹನುಮಂತಪ್ಪ ವೃತ್ತದಿಂದ ಮೆರವಣಿಗೆ ಹೊರಡುತ್ತಿದ್ದಂತೆ ಪೊಲೀಸರು ತಡೆದರು. ಇದೇ ದಿನ ಜಿಲ್ಲಾ ಜಾನಪದ ಸಮ್ಮೇಳನ ನಡೆಯುತ್ತಿದ್ದು,ಬೆಳಿಗ್ಗೆ ಅದರ ಮೆರವಣಿಗೆ ನಡೆಯಿತು. ಇದಕ್ಕೆ ಪೊಲೀಸ್‌ ಇಲಾಖೆ ಅವಕಾಶ ನೀಡಿತು. ತಮ್ಮ ಕಾರ್ಯಕ್ರಮಕ್ಕೆ ಉದ್ದೇಶ ಪೂರ್ವಕವಾಗಿ ಅಡ್ಡಿಪಡಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆಯಲ್ಲಿ ಪೊಲೀಸ್‌ ಇಲಾಖೆ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಹಾಕಿದರು. ಬಳಿಕ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. ಪ್ರತಿಭಟನೆಯಲ್ಲಿ ದಂಟರಮಕ್ಕಿ ಶ್ರೀನಿವಾಸ್‌, ಅಂಗಡಿ ಚಂದ್ರು, ಮರ್ಲೆ ಅಣ್ಣಯ್ಯ, ಹರೀಶ್‌ ಮಿತ್ರಾ, ಹಿರೇಮಗಳೂರು ಜಗದೀಶ್‌, ವಕೀಲ ಪರಮೇಶ್‌, ದೇವಿಪ್ರಸಾದ್‌, ಚಿದಾನಂದ, ಲಕ್ಷ್ಮಣ್‌ ಹುಣಸೇಮಕ್ಕಿ, ಹೊನ್ನೇಶ್‌ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. 20 ಕೆಸಿಕೆಎಂ 4 ಮಹಿಷ ದಸರಾ ಆಚರಣೆ ಅಂಗವಾಗಿ ಶುಕ್ರವಾರ ಮೆರವಣಿಗೆ ನಡೆಸಲು ಮುಂದಾದಾಗ ಪೊಲೀಸರು ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ತಡೆದು, ನಿಷೇಧಾಜ್ಞೆ ಉಲ್ಲಂಘನೆ ಹಿನ್ನೆಲೆಯಲ್ಲಿ ಬಂಧಿಸಿದರು.