ಸಾರಾಂಶ
ಕೆರೆ, ಹಳ್ಳ, ನದಿ, ಝರಿಗಳು, ತೆರೆದ ಬಾವಿ, ನಾಲಾ, ಸರ್ಕಾರಿ ಕೊಳವೆ ಬಾವಿಗಳಿಂದ ಅನಧಿಕೃತವಾಗಿ ನೀರನ್ನು ಕೃಷಿ ಹಾಗೂ ವಾಣಿಜ್ಯ ಉದ್ದೇಶಕ್ಕೆ ಬಳಸುವುದನ್ನು ನಿಷೇಧಿಸಲಾಗಿದೆ.
- ನೀರು ಬಿಡುವಲ್ಲಿ ತಾರತಮ್ಯ ಮಾಡಿದಲ್ಲಿ ವಾಟರ್ ಮ್ಯಾನ್ ವಿರುದ್ಧ ಕ್ರಮ । ಚಿಕ್ಕಮಗಳೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಜನವಸತಿ ಪ್ರದೇಶಗಳು 50
---- ಟ್ಯಾಂಕರ್ ಮೂಲಕ ನೀರು ಕೊಡ್ತಾ ಇರೋ ಗ್ರಾಮಗಳು- 5- ಬಂಡೆ ಕಾಲೋನಿ, ಸಿರಗಪುರ, ಆಮೆಕಟ್ಟೆ, ಮಾಚಗೊಂಡನಹಳ್ಳಿ, ಭೂತನಕಾಡು.- ಖಾಸಗಿ ಬೋರ್‌ವೆಲ್‌ಗಳಿಂದ ನೀರು ಕೊಡ್ತಾ ಇರೋ ಗ್ರಾಮಗಳು- 9- ವಸ್ತಾರೆ, ತೇಗೂರಿನ ಹೊಸ ಬಡಾವಣೆ, ಜಡಗನಹಳ್ಳಿ, ಕುರುಬಿನಹಳ್ಳಿ, ಎರೆಹಳ್ಳಿ, ಕಣತಿ, ಹಾರಂಬಿ, ದೊಡ್ಡಹಾರ, ಉಜ್ಜನಿ- ಹೊಸಪೇಟೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕೆರೆ, ಹಳ್ಳ, ನದಿ, ಝರಿಗಳು, ತೆರೆದ ಬಾವಿ, ನಾಲಾ, ಸರ್ಕಾರಿ ಕೊಳವೆ ಬಾವಿಗಳಿಂದ ಅನಧಿಕೃತವಾಗಿ ನೀರನ್ನು ಕೃಷಿ ಹಾಗೂ ವಾಣಿಜ್ಯ ಉದ್ದೇಶಕ್ಕೆ ಬಳಸುವುದನ್ನು ನಿಷೇಧಿಸಲಾಗಿದೆ.ಅನಧಿಕೃತವಾಗಿ ನೀರು ಬಳಕೆ ಮಾಡುತ್ತಿರುವುದು ಹಲವೆಡೆ ಕಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಜಲ ಮೂಲಗಳಿಂದ ನೀರು ಬಳಕೆ ಮಾಡುವುದು ಕಂಡು ಬಂದರೆ ಕಾನೂನು ಕ್ರಮ ತೆಗೆದುಕೊಳ್ಳುವ ಜನತೆಗೆ ನೀರನ್ನು ಅನಧಿಕೃತವಾಗಿ ಹೊರ ತೆಗೆಯಲು ಉಪಯೋಗಿಸುವ ಪಂಪು, ಮೋಟರ್, ಪೈಪ್ ಅಥವಾ ಇನ್ನಾವುದೇ ವಾಹನ ಅಥವಾ ಉಪಕರಣಗಳನ್ನು ಜಪ್ತಿ ಮಾಡಲಾಗುವುದು ಎಂದು ಚಿಕ್ಕಮಗಳೂರು ತಹಸೀಲ್ದಾರ್ ಡಾ. ಸುಮಂತ್ ಹಾಗೂ ತಾಪಂ ಕಾರ್ಯನಿರ್ವಹಕ ಅಧಿಕಾರಿ ತಾರಾನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.2023- 24ನೇ ಸಾಲಿನಲ್ಲಿ ಮಳೆ ಕೊರತೆ ಉಂಟಾಗಿದ್ದು, ಚಿಕ್ಕಮಗಳೂರು ತಾಲೂಕಿನಲ್ಲಿ ತೀವ್ರ ಬರ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅಲ್ಲಲ್ಲಿ ತಲೆದೋರುತ್ತಿದೆ. ಮುಂದಿನ ದಿನಗಳಲ್ಲಿ 50 ಜನವಸತಿ ಪ್ರದೇಶ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ಹಲವು ಗ್ರಾಮಗಳಲ್ಲಿ ಸಮಸ್ಯೆ ಎದುರಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರದ ನಿರ್ದೇಶನದ ಮೇರೆಗೆ ಈಗಿನಿಂದಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.ಹಣಕ್ಕೆ ಬೇಡಿಕೆ ಇಟ್ಟರೆ ತಿಳಿಸಿ: ನೀರು ಸರಬರಾಜು ಮಾಡುವ ನೀರುಗಂಟಿ ಮತ್ತು ವಾಟರ್ ಮ್ಯಾನ್‌ಗಳು ನೀರು ಸರಬರಾಜು ಮಾಡಲು ಯಾವುದೇ ಸಾರ್ವಜನಿಕರಿಂದ ಹಣಕ್ಕಾಗಿ ಬೇಡಿಕೆ ಇಟ್ಟಲ್ಲಿ ಅಥವಾ ನೀರು ಬಿಡುಗಡೆಯಲ್ಲಿ ತಾರತಮ್ಯ ಮಾಡಿದಲ್ಲಿ ಸಂಬಂಧಿಸಿದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಥವಾ ನಗರ ಪ್ರದೇಶದಲ್ಲಿ ನಗರಸಭೆ ಪೌರಾಯುಕ್ತರ ಗಮನಕ್ಕೆ ತರಬೇಕೆಂದು ಸೂಚಿಸಿದ್ದಾರೆ.ಕುಡಿಯುವ ನೀರಿನ ಸಮಸ್ಯೆ ಅಥವಾ ದೂರುಗಳು ಇದ್ದಲ್ಲಿ ಸಾರ್ವಜನಿಕರು ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆ ವರೆಗೆ ತಾಲೂಕು ಪಂಚಾಯ್ತಿ ಕಚೇರಿಯಲ್ಲಿ ತೆರೆಯಲಾಗಿರುವ ಸಹಾಯವಾಣಿ ಸಂಖ್ಯೆ 08262- 228181 ಗೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ.ನೋಂದಣಿ ಕಡ್ಡಾಯ: ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಏಜೆನ್ಸಿಗಳು, ಟ್ಯಾಂಕರ್ ಮಾಲೀಕರು ತಮ್ಮ ಟ್ಯಾಂಕರ್‌ಗಳನ್ನು ಕಡ್ಡಾಯವಾಗಿ ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಚೇರಿಯಲ್ಲಿ ಮಾ. 11ರ ಸಂಜೆ 5.30 ರೊಳಗಾಗಿ ನೋಂದಾಯಿಸಲು ತಿಳಿಸಲಾಗಿದೆ. ನಿಗಧಿತ ದಿನದೊಳಗೆ ನೋಂದಾಯಿಸದೆ ಇದ್ದಲ್ಲಿ ಅಂತಹ ಟ್ಯಾಂಕರ್‌ಗಳನ್ನು ಜಪ್ತಿ ಮಾಡಿ ಮಾಲೀಕರ ವಿರುದ್ಧ ನಿಯಾಮಾನುಸಾರ ಕಾನೂನು ಕ್ರಮ ಜರುಗಿಸ ಲಾಗುವುದು ಎಂದು ತಿಳಿಸಿದ್ದಾರೆ.