ಇಂದಿನಿಂದ ಮೂರು ದಿನ ಬಾಳೆ ಮೇಳ

| Published : Nov 22 2024, 01:15 AM IST

ಸಾರಾಂಶ

550 ಬಾಳೆ ತಳಿಗಳನ್ನು ಸಂರಕ್ಷಿಸಿರುವ ಕೇರಳದ ವಿನೋದ್ ನಾಯರ್ 75 ಬಗೆಯ ಬಾಳೆ ತಳಿಗಳನ್ನು ಪ್ರದರ್ಶನಕ್ಕೆ

ಕನ್ನಡಪ್ರಭ ವಾರ್ತೆ ಮೈಸೂರುದೇಸಿ ಬಾಳೆಯ ವೈವಿಧ್ಯ, ಕೃಷಿ ಮತ್ತು ಆಹಾರ ಸಂಸ್ಕೃತಿಯನ್ನು ಜನಪ್ರಿಯಗೊಳಿಸಲು ಸಹಜ ಸಮೃದ್ಧ ಮತ್ತು ಅಕ್ಷಯಕಲ್ಪ ಆರ್ಗಾನಿಕ್ಸ್ ಜೊತೆಗೂಡಿ ನ. 22 ರಿಂದ 24 ರವರೆಗೆ ನಂಜರಾಜ ಬಹದ್ದೂರ್ ಛತ್ರದಲ್ಲಿ ಬಾಳೆ ಮೇಳ ಏರ್ಪಡಿಸಿವೆ.ಬಾಳೆಯ ವೈವಿಧ್ಯಮಯ ತಳಿಗಳು, ಮೌಲ್ಯವರ್ಧಿತ ಉತ್ಪನ್ನಗಳು, ಬಾಳೆನಾರಿನ ಪದಾರ್ಥಗಳು ಮತ್ತು ಬಾಳೆಯ ಅಡುಗೆಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಬರಲಿವೆ.550 ಬಾಳೆ ತಳಿಗಳನ್ನು ಸಂರಕ್ಷಿಸಿರುವ ಕೇರಳದ ವಿನೋದ್ ನಾಯರ್ 75 ಬಗೆಯ ಬಾಳೆ ತಳಿಗಳನ್ನು ಪ್ರದರ್ಶನಕ್ಕೆ ತರಲಿದ್ದಾರೆ. 80 ಬಾಳೆ ತಳಿಗಳನ್ನು ಸಂರಕ್ಷಿಸಿರುವ ಶಿರಸಿಯ ಪ್ರಸಾದ್ ಹೆಗಡೆ ಅಪರೂಪದ ಬಾಳೆ ಮತ್ತು ಕಂದುಗಳನ್ನು ಮೇಳಕ್ಕೆ ತರುತ್ತಿದ್ದಾರೆ. 150ಕ್ಕೂ ಹೆಚ್ಚು ಬಾಳೆ ತಳಿಗಳ ಸಂಗ್ರಹವಿರುವ ತಮಿಳುನಾಡು ಈರೋಡಿನ ಸೇಂದಿಲ್ ಕುಮಾರ್ 40 ಜಾತಿಯ ಬಾಳೆಗಳ ಪ್ರದರ್ಶನಕ್ಕೆ ತರುತ್ತಿದ್ದಾರೆ. 8 ಅಡಿ ಉದ್ದದ ಸಹಸ್ರ ಬಾಳೆ ಪ್ರದರ್ಶನದ ಆಕರ್ಷಣೆಯಾಗಲಿದೆ.ನೀವೆಂದೂ ನೋಡದ ಅಪರೂಪದ ಬಾಳೆ ತಳಿಗಳು, ಬಾಳೆಯ ಮೌಲ್ಯವರ್ಧಿತ ಉತ್ಪನ್ನಗಳು, ಬಾಳೆಯ ಬಗೆ ಬಗೆಯ ಅಡುಗೆಗಳು ಬಾಯಿ ಚಪ್ಪರಿಸಲು ಸಿಗಲಿವೆ. ಸಾವಯವ ಮತ್ತು ಕರಕುಶಲ ವಸ್ತುಗಳು ಮಾರಾಟಕ್ಕೆ ಬರಲಿವೆ. ದೇಸಿ ಬಾಳೆಯ ಕಂದು ಮತ್ತು ಗಿಡಗಳು ಕೊಳ್ಳಲು ಸಿಗಲಿವೆ.ನ. 22ರ ಬೆಳಗ್ಗೆ 11ಕ್ಕೆ ಬಾಳೆಯ ಮೌಲ್ಯವರ್ಧನೆಯ ಅವಕಾಶಗಳ ಬಗ್ಗೆ ತರಬೇತಿ ಏರ್ಪಡಿಸಿದೆ. ಬಾಳೆಯ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಗೆದ್ದಿರುವ ಹುಣಸೂರಿನ ರತ್ಣಗಿರಿಯ ನವೀನ್ ಕುಮಾರ್ ಮತ್ತು ಬಾಳೆಯ ನಾರಿನಿಂದ ಕರಕುಶಲ ವಸ್ತುಗಳ ತಯಾರಿಸಿ, ಪ್ರಧಾನಮಂತ್ರಿಗಳಿಂದ ಪ್ರಶಂಸೆ ಪಡೆದಿರುವ ಚಾಮರಾಜನಗರದ ವರ್ಷಾ, ಬಾಳೆಯ ಮೌಲ್ಯವರ್ಧನೆಯ ತಮ್ಮ ಅನುಭವ ಹಂಚಿಕೊಳ್ಳಿದ್ದಾರೆ.ಇತ್ತೀಚಿನ ದಿನಗಳಲ್ಲಿ ಸಾವಯವದಲ್ಲಿ ಬೆಳೆದ ಬಾಳೆಗೆ ಹೆಚ್ಚಿನ ಬೇಡಿಕೆ ಇದೆ. ವಿಷಮುಕ್ತ ಬಾಳೆ ಕೃಷಿ ಮಾಡುವುದರಿಂದ ನೆಲ ಬರಡಾಗುವುದು ತಪ್ಪುತ್ತದೆ; ರಾಸಾಯನಿಕಗಳಿಗೆ ಸುರಿಯುವ ಹಣ ಉಳಿತಾಯವಾಗುತ್ತದೆ. ನ. 23ರಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವನಾಪುರ ರಮೇಶ್ ಸಾವಯವದಲ್ಲಿ ಬಾಳೆ ಬೆಳೆಯುವ ಬಗ್ಗೆ ರೈತರಿಗೆ ಮಾಹಿತಿ ನೀಡಲಿದ್ದಾರೆ. ಇವರ ಮಾರ್ಗದರ್ಶನದಲ್ಲಿ ನೂರಾರು ರೈತರು ಬಾಳೆ ಬೆಳೆದು ಗೆದ್ದಿದ್ದಾರೆ.-- ಬಾಕ್ಸ್‌--

-- ವಿವಿಧ ಸ್ಪರ್ಧೆಗಳು--

ಸುತ್ತೂರಿನ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ನ. 23 ಬೆಳಗ್ಗೆ 10.30ಕ್ಕೆ ಮಕ್ಕಳ ಚಿತ್ರಕಲಾ ಸ್ಪರ್ಧೆ ಮತ್ತು ಮಧ್ಯಾಹ್ನ 12ಕ್ಕೆ ಬಾಳೆ ಅಡುಗೆ ಸ್ಪರ್ಧೆ ಏರ್ಪಾಡಾಗಿದೆ.5 ರಿಂದ 12 ವರ್ಷದ ಮಕ್ಕಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ಬಾಳೆಯ ಕೃಷಿ, ಅಡುಗೆ ಮತ್ತು ಬಳಕೆಯ ಕುರಿತು ಚಿತ್ರ ಬಿಡಿಸಬೇಕು . ಚಿತ್ರ ಬಿಡಿಸಲು ಅಗತ್ಯವಿರುವ ಬಣ್ಣ ತಾವೇ ತರಬೇಕು. ಡ್ರಾಯಿಂಗ್ ಶೀಟ್ ಕೊಡಲಾಗುವುದು. ವಿಜೇತರಿಗೆ ಸೂಕ್ತ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸುವವರು, ಮನೆಯಲ್ಲಿ ಬಾಳೆಯ ಅಡುಗೆಗಳನ್ನು ತಯಾರಿಸಿ ಮೇಳಕ್ಕೆ ತರಬೇಕು. ತೀರ್ಪುಗಾರರ ಮೆಚ್ಚುಗೆ ಗಳಿಸುವ ಅಡುಗೆಗಳಿಗೆ ನಗದು ಬಹುಮಾನ ಇರುತ್ತದೆ. ಆಸಕ್ತರು ಹೆಸರು ನೊಂದಾಯಿಸಬಹುದು. ವಿವರಗಳಿಗೆ ಮೊ. 9482115495 ಸಂಪರ್ಕಿಸಿ.