ಸಾರಾಂಶ
ಕನ್ನಡಪ್ರಭ ವಾರ್ತೆ ಗುಡಿಬಂಡೆ
ಸುಮಾರು 10 ವರ್ಷಗಳ ಹಿಂದೆ ಗುಡಿಬಂಡೆ ಮುಖ್ಯರಸ್ತೆ ಅಗಲೀಕರಣದ ವೇಳೆ ಆಸ್ತಿ ಕಳೆದುಕೊಂಡವರಿಗೆ ನಿವೇಶನ ನೀಡುವುದು ನನ್ನ ಆದ್ಯ ಕರ್ತವ್ಯ. ಇನ್ನು ಆರು ತಿಂಗಳ ಒಳಗಾಗಿ ಸಂತ್ರಸ್ತರಿಗೆ ಹಾಗೂ ಪಟ್ಟಣದಲ್ಲಿರುವ ನಿವೇಶನ ರಹಿತರರಿಗೆ ನಿವೇಶನ ನೀಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಸುಬ್ಬಾರೆಡ್ಡಿ ಭರವಸೆ ನೀಡಿದರು.ಪಟ್ಟಣದ ಬ್ರಾಹ್ಮಣರಹಳ್ಳಿ ರಸ್ತೆಗೆ ಹೋಗುವ ಮಾರ್ಗದಲ್ಲಿ ಶನಿವಾರ ಗುಡಿಬಂಡೆ ಪ.ಪಂ ವ್ಯಾಪ್ತಿಯ ಮುಖ್ಯರಸ್ತೆ ಅಗಲೀಕರಣದ ವೇಳೆ ಮನೆ/ನಿವೇಶನ ಕಳೆದುಕೊಂಡವರಿಗೆ ಆಶ್ರಯ ಯೋಜನೆಯಡಿ ಉಚಿತ ನಿವೇಶನಗಳ ಹಕ್ಕುಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
40 ಮಂದಿಗೆ ಹಕ್ಕುಪತ್ರಈಗಾಗಲೇ ಪಟ್ಟಣದಲ್ಲಿ ನಿವೇಶನ ಕಳೆದುಕೊಂಡವರಿಗೆ ಮೊದಲ ಹಂತವಾಗಿ 54 ಹಕ್ಕುಪತ್ರಗಳನ್ನು ನೀಡಲು ಕಳೆದ ಆಶ್ರಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ಇದೀಗ 40 ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ. ಆದರೆ ಈ ಪಟ್ಟಿಯಲ್ಲಿ ಲೋಪದೋಷಗಳು ಇದೆ. ಮುಖ್ಯರಸ್ತೆಯಲ್ಲಿ ಅಗಲೀಕರಣದ ವೇಳೆ ನಿವೇಶನ ಕಳೆದುಕೊಳ್ಳದೇ ಇರುವಂತಹವರಿಗೂ ಹಕ್ಕುಪತ್ರ ನೀಡಲಾಗಿದೆ, ಈಗ ತಾತ್ಕಲಿಕವಾಗಿ ಈ ಹಕ್ಕು ಪತ್ರಗಳನ್ನು ನೀಡಲಾಗುತ್ತಿದೆ ಎಂದರು.
ಪಟ್ಟಿ ತಡೆಹಿಡಿಯಲು ಆಗ್ರಹಮುಖ್ಯರಸ್ತೆ ಅಗಲೀಕರಣದ ವೇಳೆ ನಿವೇಶನ ಕಳೆದುಕೊಂಡ ಮಾಲೀಕರು ಈ ಹಕ್ಕು ಪತ್ರ ವಿತರಣಾ ಪಟ್ಟಿಯ ಬಗ್ಗೆ ಆಕ್ರೋಷ ಹೊರಹಾಕಿದರು. ಅಧಿಕಾರಿಗಳು ಸಿದ್ದಪಡಿಸಿರುವಂತಹ ಪಟ್ಟಿ ಸಂಪೂರ್ಣವಾಗಿ ತಪ್ಪಾಗಿದೆ. ಬಹುತೇಕರು ಆಸ್ತಿ ಇರುವಂತಹವರೇ ಆಗಿದ್ದಾರೆ. ಆದರೆ ರಸ್ತೆ ಅಗಲೀಕರಣದ ವೇಳೆ ಸಂಪೂರ್ಣವಾಗಿ ಮನೆ ಕಳೆದುಕೊಂಡವರ ಹೆಸರು ಮಾತ್ರ ಈ ಪಟ್ಟಿಯಲ್ಲಿ ಇಲ್ಲ. ಹಣ ಕೊಟ್ಟವರಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಆದ್ದರಿಂದ ಆಶ್ರಯ ಸಮಿತಿ ಅಧ್ಯಕ್ಷರಾದ ಶಾಸಕರು ಈ ಪಟ್ಟಿಯನ್ನು ತಡೆ ಹಿಡಿಯುವಂತೆ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸುಬ್ಬಾರೆಡ್ಡಿ, ಜನರ ಮನವಿಯನ್ನು ನಾನು ಸ್ವೀಕರಿಸುತ್ತೇನೆ. ಸೋಮವಾರದಿಂದ ಅಧಿಕಾರಿಗಳಿಗೆ ಸರ್ವೆ ಮಾಡಲು ತಿಳಿಸಿದ್ದೇನೆ. ಅನರ್ಹರು ಕಂಡುಬಂದರೇ ಕೂಡಲೇ ಅವರ ಹಕ್ಕು ಪತ್ರಗಳನ್ನು ರದ್ದು ಮಾಡಿ ಅರ್ಹರಿಗೆ ನೀಡುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.ಈ ಸಮಯದಲ್ಲಿ ತಾಲೂಕು ಪಂಚಾಯತಿ ಇ.ಒ ನಾಗಮಣಿ, ಪಪಂ ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ಗಂಗರಾಜು, ಮುಖ್ಯಾಧಿಕಾರಿ ಸಭಾ ಶಿರೀನ್, ಪಪಂ ಸದಸ್ಯರುಗಳು, ನಾಮ ನಿರ್ದೇಶಿತ ಸದಸ್ಯರು, ಆಶ್ರಯ ಸಮಿತಿ ಸದಸ್ಯರು, ಪ.ಪಂ. ಸಿಬ್ಬಂದಿ ವರ್ಗ ಸೇರಿದಂತೆ ಹಲವರು ಇದ್ದರು.