ಕೃಷಿ ಸಾಧಕರನ್ನು ಉತ್ತೇಜಿಸುವ ಕಾರ್ಯ ಶ್ಲಾಘನೀಯ: ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌

| Published : Feb 10 2024, 01:47 AM IST

ಕೃಷಿ ಸಾಧಕರನ್ನು ಉತ್ತೇಜಿಸುವ ಕಾರ್ಯ ಶ್ಲಾಘನೀಯ: ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌
Share this Article
  • FB
  • TW
  • Linkdin
  • Email

ಸಾರಾಂಶ

ಜಾತ್ರಾ ಮಹೋತ್ಸವದಲ್ಲಿ ವಿವಿಧ ಕ್ಷೇತ್ರದ‌ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಬೇರೆ ಬೇರೆ ಕ್ಷೇತ್ರಕ್ಕೆ ಸಿಗುವ ಗೌರವ ಕೃಷಿಕರಿಗೆ ಕಡಿಮೆ ಆಗುತ್ತಿದ್ದು, ಅದನ್ನು ಮನಗಂಡು ಉತ್ತೇಜಿಸುವ ಸಲುವಾಗಿ ವಿವಿಧ ಬೆಳೆಗಳನ್ನು ಬೆಳೆದಿರುವ ಸಾಧಕರನ್ನು ಗುರುತಿಸುವ ಮೂಲಕ ಅವರು ಕೃಷಿಯಲ್ಲಿಯೇ ನೆಲೆ‌ ನಿಲ್ಲುವಂತೆ ಮಾಡಿದ್ದಾರೆ. ಕ್ರಿಕೆಟ್‌ಗೆ ಇರುವ ಮಹತ್ವ ದೇಸಿಯ ಕ್ರೀಡೆಗೂ ಸಿಗಲಿ ಎಂಬ ಉದ್ದೇಶದಿಂದ ವಿಭಿನ್ನವಾದ ಕಾರ್ಯಕ್ರಮವನ್ನು ಸುತ್ತೂರು ಜಾತ್ರೆಯಲ್ಲಿ ಆಯೋಜಿಸಲಾಗಿದೆ.

ಮಹೇಂದ್ರ ದೇವನೂರು

ಕನ್ನಡಪ್ರಭ ವಾರ್ತೆ ಮೈಸೂರು

ಜೆಎಸ್‌ಎಸ್‌ ಸಂಸ್ಥೆಯು ಕೃಷಿ ಕ್ಷೇತ್ರದ ಸಾಧಕರನ್ನು ಗುರುತಿಸಿ ಉತ್ತೇಜಿಸುವ ಮೂಲಕ ರೈತರು ಕೃಷಿ ಕ್ಷೇತ್ರದಲ್ಲಿ ನೆಲೆ ನಿಲ್ಲುವಂತೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಹೇಳಿದರು.

ನಂಜನಗೂಡು ತಾಲೂಕು ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಆದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ಅಯೋಜಿಸಿದ್ದ ಕೃಷಿಯಲ್ಲಿ ನೀರಿನ ಸದ್ಭಳಕೆ ವಿಷಯದ ಕುರಿತ ಕೃಷಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಜಾತ್ರಾ ಮಹೋತ್ಸವದಲ್ಲಿ ವಿವಿಧ ಕ್ಷೇತ್ರದ‌ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಬೇರೆ ಬೇರೆ ಕ್ಷೇತ್ರಕ್ಕೆ ಸಿಗುವ ಗೌರವ ಕೃಷಿಕರಿಗೆ ಕಡಿಮೆ ಆಗುತ್ತಿದ್ದು, ಅದನ್ನು ಮನಗಂಡು ಉತ್ತೇಜಿಸುವ ಸಲುವಾಗಿ ವಿವಿಧ ಬೆಳೆಗಳನ್ನು ಬೆಳೆದಿರುವ ಸಾಧಕರನ್ನು ಗುರುತಿಸುವ ಮೂಲಕ ಅವರು ಕೃಷಿಯಲ್ಲಿಯೇ ನೆಲೆ‌ ನಿಲ್ಲುವಂತೆ ಮಾಡಿದ್ದಾರೆ ಎಂದರು.

ಕ್ರಿಕೆಟ್ ಗೆ ಇರುವ ಮಹತ್ವ ದೇಸಿಯ ಕ್ರೀಡೆಗೂ ಸಿಗಲಿ ಎಂಬ ಉದ್ದೇಶದಿಂದ ವಿಭಿನ್ನವಾದ ಕಾರ್ಯಕ್ರಮವನ್ನು ಸುತ್ತೂರು ಜಾತ್ರೆಯಲ್ಲಿ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಸುತ್ತೂರು ಮಠದ ಶ್ರೀಗಳು ಮನಸ್ಸು ಮಾಡಿದರೆ ಜಗತ್ತನ್ನೇ ಬದಲಾಗುವಂತ ಕೆಲಸ ಮಾಡುತ್ತಾರೆ ಎಂದು ಅವರು ಶ್ಲಾಘಿಸಿದರು.

ಮಾಜಿ ಸಚಿವ ಸಿ.‌ಎಸ್. ಪುಟ್ಟರಾಜು ಮಾತನಾಡಿ, ವಿಭಿನ್ನವಾಗಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ರೈತರ ಕುರಿತಾಗಿ ಅಯೋಜಿಸಿರುವ ವಿಚಾರ ಸಂಕಿರಣ, ಕೃಷಿ ಮೇಳೆ ಉತ್ತಮವಾದದ್ದು, ರೈತನ ಬದುಕು ಕಷ್ವದ ಸನ್ನಿವೇಶದಲ್ಲಿದೆ. ಮುಂದಿನ ದಿನಗಳಲ್ಲಿ ಕೃಷಿಯನ್ನು ಹೇಗೆ ಅನುಸರಿಸಬೇಕು ಎಂಬುದನ್ನು ಇಸ್ರೇಲ್ ಹೋಗಿ ತಿಳಿದುಕೊಂಡು ಬಂದಿದ್ದೇನೆ ಎಂದರು.

ಭತ್ತ ಬೆಳೆಯುವುದರಿಂದ ರೈತರ ಬದುಕು ಹಸನು ಆಗುವುದಿಲ್ಲ. ವಿವಿಧ ಬಗೆಯ ಬೆಳೆ ಬೆಳೆದರೆ ಮಾತ್ರ ರೈತನ ಬದುಕು ಉತ್ತಮವಾಗಿರುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ದೇಸಿ ಕ್ರೀಡೆಗಳು ನಶಿಸಿಹೋಗುತ್ತಿದ್ದು, ಅದನ್ನು ಮರುಕಳಿಸುವಂತೆ ಮಾಡಿ, ಉಳಿಸುತ್ತಿರುವುದು ಜಾತ್ರಾ ಮಹೋತ್ಸವದ ವಿಶೇಷಗಳಲ್ಲಿ ಒಂದು ಎಂದು ಅವರು ಹೇಳಿದರು.

ಇವತ್ತು ನಾವೆಲ್ಲ ಉತ್ಸಾಹ ಕಳೆದುಕೊಳ್ಳುತ್ತಿದ್ದೇವೆ. ಸಾಮಾನ್ಯವಾಗಿ ವಿವಿಧ ಬಗೆಯ ರೋಗಗಳು ನಮ್ಮ ದೇಹದಲ್ಲಿ ಉಲ್ಭಣವಾಗುತ್ತಿದೆ. ನಮ್ಮ ರೈತರು ಕಟ್ಟಿದಂತಹ ದನಗಳ ರಾಸು ಮುಂದಿನ ದಿನದಲ್ಲಿ ಕಣ್ಮರೆಯಾಗಬಹುದೆನೋ ಎಂಬ ಆತಂಕದಲ್ಲಿದ್ದೇವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುವ ಜೊತೆಗೆ, ಅವರು ಉನ್ನತ ಮಟ್ಟಕ್ಕೆ ಹೋಗುವುದಕ್ಕೆ ಸಹಕಾರ ನೀಡುತ್ತಾ, ಅಮೇರಿಕದಲ್ಲಿಯೂ ಉತ್ತಮವಾದ ಜೆ.ಎಸ್.ಎಸ್ ಮಠ ಸ್ಥಾಪಿಸಿರುವುದು ವಿಶೇಷವಾದ ಕಾರ್ಯ ಎಂದು ಅವರು ಅಭಿಪ್ರಾಯಪಟ್ಟರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ವಿ. ಸುರೇಶ್, ಎಲ್. ಸಾಲ್ ಇರಿಗೇಷನ್ ಸಲ್ಯೂಷನ್ ನ ಕಾರ್ಯನಿರ್ವಾಹಕ ಮುಖ್ಯಸ್ಥ ಎ. ರಾಜಶೇಖರ್, ಸ್ಯಾನ್ ಫ್ರಾನ್ಸಿಸ್ಕೋ ಯುಎಸ್ಎನ ಮಮತಾ ಶೇಖರ್, ಸಿದ್ಧಗಿರಿ ಸಾಯಿ ಧರ್ಮಕ್ಷೇತ್ರದ ಮಾತಾ ಶಕ್ತಿ ಮಾಯಿ, ನ್ಯಾಷನಲ್ ಫರ್ಟಿಲೈಜರ್ಸ್ ಅಧ್ಯಕ್ಷ ಯು. ಸರವಣನ್ ಇದ್ದರು.

ಕೃಷಿ ಕ್ಷೇತ್ರದ ಸಾಧಕರಿಗೆ ಸನ್ಮಾನವಿವಿಧ ಬೆಳೆಗಳಲ್ಲಿ ಹೆಚ್ಚು ಇಳುವರಿ ಪಡೆದ ರೈತರಿಗೆ ಸನ್ಮಾನಿಸಿ ಗೌರವಿಸಿದರು.ಭತ್ತದ ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆದ ನಂಜನಗೂಡು ತಾಲೂಕು ಹರತಲೆಯ ಎಚ್‌.ಬಿ. ಲೋಕೇಶ್‌ (ಪ್ರತಿ ಎಕರೆಗೆ 28 ಕ್ವಿಂಟಲ್‌) ಪ್ರಥಮ, ತಾಯೂರಿನ ಪಿ.ಚಿನ್ನಬುದ್ಧಿ (ಎಕರೆಗೆ 26 ಕ್ವಿಂಟಲ್‌) ದ್ವಿತೀಯ.ಬಾಳೆ ಬೆಳೆಯಲ್ಲಿ ಯಳಂದೂರು ತಾಲೂಕು ಮಲಾರಪಾಳ್ಯದ ಚಿನ್ನಬುದ್ಧಿ 12 ಟನ್‌ ಏಲಕ್ಕಿ, ಕೊಮಾರನಪುರದ ಎಂ. ಪ್ರದೀಪ್‌ ಜಿ-9 ತಳಿ 25 ಟನ್‌ ಬೆಳೆದು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿದ್ದಾರೆ.ಕಬ್ಬು ಬೆಳೆಯಲ್ಲಿ ಮುಡಿಗುಂಡದ ಎಂ. ನಂಜುಂಡಸ್ವಾಮಿ 128 ಟನ್‌ ಬೆಳೆದು ಪ್ರಥಮ ಸ್ಥಾನ, 110 ಟನ್‌ ಬೆಳೆದ ಹೊಸ ಮಾಲಂಗಿಯ ಜಿ. ರಾಚಪ್ಪ ದ್ವಿತೀಯ, ಟೊಮೆಟೋ ಬೆಳೆಯಲ್ಲಿ ಚಾಮರಾಜನಗರ ತಾಲೂಕಿನ ಗೋವಿಂದವಾಡಿಯ ಮಹದೇವಸ್ವಾಮಿ 23 ಟನ್‌, ಎಚ್‌.ಎಸ್‌. ಮಹದೇವಸ್ವಾಮಿ 21 ಟನ್‌ಬೆಳೆದು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ,ಮೆಕ್ಕೆಜೋಳ ಬೆಳೆಯ ಹನೂರು ತಾಲೂಕು ಚಿಂಚಹಳ್ಳಿಯ ಪುಟ್ಟಮಾದಪ್ಪ 27 ಕ್ವಿಂಟಲ್‌ ಬೆಳೆದು ಪ್ರಥಮ, ಬಂಡಳ್ಳಿಯ ವಿ. ಕೃಷ್ಣಶೆಟ್ಟಿ 25 ಕ್ವಿಂಟಲ್‌ ಬೆಳೆದು ದ್ವಿತೀಯ, ಪೋಲ್‌ಬೀನ್ಸ್‌ಗುಂಡ್ಲುಪೇಟೆ ತಾಲೂಕು ಪುತ್ತನಪುರದ ಶೇಖರ 12 ಕ್ವಿಂಟಲ್‌ ಬೆಳೆದು ಪ್ರಥಮ ಸ್ಥಾನ ಪಡೆದರೆ, ಕೆ.ಬಿ.ಕುಮಾರ್‌ 8 ಕ್ವಿಂಟಲ್‌ ಬೆಳೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಪ್ರಗತಿಪರ ರೈತ ಮಹಿಳೆಯರಾದ ಲಲಿತಮ್ಮ, ಚಿನ್ನಮ್ಮ, ಆರ್. ವರ್ಷಾ, ದೇವಿರಮ್ಮ, ಸುಮನಾ ಅವರನ್ನು ಇದೇ ವೇಳೆ ಅಭಿನಂದಿಸಲಾಯಿತು.

ಮುಂದಿನ ದಿನಗಳಲ್ಲಿ ಆಹಾರ ಕೊರತೆ ಉಂಟಾಗಬಹುದು: ಡಾ.ಎಸ್‌.ವಿ. ಸುರೇಶ್‌ಮುಂದಿನ ದಿನಗಳಲ್ಲಿ ಆಹಾರ ಉತ್ಪಾದನೆಯ ಕೊರತೆ ಉಂಟಾಗಬಹುದಾದ ಸಾಧ್ಯತೆ ಇದೆ ಎಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ವಿ. ಸುರೇಶ್ ಕಳವಳ ವ್ಯಕ್ತಪಡಿಸಿದರು.

ಸುತ್ತೂರಿನಲ್ಲಿ ನಡೆಯುತ್ತಿರುವ ಆದಿಜಗದ್ಗುರು ಶ್ರೀಶಿವರಾತ್ರಿ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ಅಯೋಜಿಸಿದ್ದ ಕೃಷಿಯಲ್ಲಿ ನೀರಿನ ಸದ್ಬಳಕೆ ವಿಷಯದ ಕುರಿತ ಕೃಷಿ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.2030ಕ್ಕೆ ಶೇ.30ರಷ್ಟು ಪ್ರದೇಶದಲ್ಲಿ ಮಾತ್ರ ಬೆಳೆ ಬೆಳೆಯುವುದಕ್ಕೆ ಆಗುವುದರಿಂದ ಮುಂದಿನ‌ ದಿನದಲ್ಲಿ ಆಹಾರ ಉತ್ಪಾದನೆ ಕೊರತೆ ಉಂಟಾಗಬಹುದು, ಹಸಿವಿನಿಂದ ಬಳಲುತ್ತಿರುವವರು ನಮ್ಮ ದೇಶದಲ್ಲಿ ಇಂದಿಗೂ ಇದ್ದಾರೆ ಎಂಬುದು ನಿಜಕ್ಕೂ ಅಸಮಾಧಾನಕರ ವಿಷಯ ಎಂದರು.ಕೃಷಿ ಬಗ್ಗೆ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತಾಡುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ರೈತರ ಸಾಂಸ್ಕೃತಿಕ ವೈಭವ ಹೆಚ್ಚಿಸುವ ಉದ್ದೇಶದಿಂದ ಈ ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿರುವುದು ಸರಿ. ಡಾ. ಸ್ವಾಮಿನಾಥನ್ ಅವರಿಂದ ಹಸಿರು ಕ್ರಾಂತಿ ಮೂಡಿಸಿದಾಗ ಹೆಚ್ಚು ಇಳುವರಿ ನೀಡುವ ತಳಿಗಳನ್ನು ಬಿಡುಗಡೆ ಮಾಡಿದ್ದಾಗಿ ಹೇಳಿದರು.ರೈತರನ್ನು ಪ್ರಗತಿಪರ ರೈತನಾಗಿ ಮಾಡಬೇಕು ಎಂಬ ಉದ್ದೇಶದಿಂದ ಕೃಷಿ ಬಗ್ಗೆ ಮಾಹಿತಿ ‌ನೀಡಲು ರೈತ ಪರ ಕಾರ್ಯಕ್ರಮಗಳನ್ನು ಆಯೋಜಿಸುವ ಕೆಲಸ ಮಾಡಲಾಗುತ್ತಿದೆ. ಮೈಸೂರಿನಲ್ಲಿ ರೈತರಿಗೆ ಉಪಯೋಗ ಆಗುವ ಸಂಶೋಧನಾ ಕಾರ್ಯಕ್ರಮಗಳು‌ ಕೂಡ ಆಗುತ್ತಿದೆ ಎಂದರು.ಕೃಷಿ ಕ್ಷೇತ್ರದಲ್ಲಿ ಯುವಕರು ತಮ್ಮನ್ನು ತಾವು ತೊಡಗಿಸಿಕೊಳ್ಳುವಲ್ಲಿ ‌ಹಿಂಜರಿಯುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಬಳಕೆಯಾಗದೆ ದುರುಪಯೋಗ ಆಗುತ್ತಿದೆ. ರಾಸಾಯನಿಕ ಬಳಕೆಯಿಂದ ಭೂಮಿಯ ಮೇಲ್ಪದರ ಗಟ್ಟಿಯಾಗುತ್ತಿದ್ದು, ರಾಸಾಯನಿಕದಿಂದ ಬೆಳೆದ ಬೆಳೆಗಳಿಂದ ರೈತನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದರು.