ಸವಿತಾ ಸಮಾಜವು ಹಿಂದುಳಿದ ವರ್ಗಕ್ಕೆ ಸೇರಿದ್ದು, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದೆ ಇದ್ದಾರೆ. ಆದ್ದರಿಂದ ಸರ್ಕಾರದ ಸೌಲಭ್ಯ ಬಳಸಿಕೊಂಡು ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಸವಿತಾ ಸಮಾಜವು ಹಿಂದುಳಿದ ವರ್ಗಕ್ಕೆ ಸೇರಿದ್ದು, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದೆ ಇದ್ದಾರೆ. ಆದ್ದರಿಂದ ಸರ್ಕಾರದ ಸೌಲಭ್ಯ ಬಳಸಿಕೊಂಡು ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ಸವಿತ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತೀಯ ವ್ಯವಸ್ಥೆಯಲ್ಲಿ ಸಮ ಸಮಾಜ ನಿರ್ಮಾಣ ಆಗುವವರೆಗೆ ಸರ್ಕಾರದ ಮೀಸಲಾತಿ ಸೌಲಭ್ಯ ಪಡೆದು ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಗತಿ ಸಾಧಿಸಬೇಕು ಎಂದು ಟಿ.ಪಿ.ರಮೇಶ್ ಕರೆ ನೀಡಿದರು.ರಾಷ್ಟ್ರದ ಎಲ್ಲೆಡೆ ಇರುವ ಸವಿತಾ ಸಮಾಜದವರು ವೃತ್ತಿಯ ಜತೆಗೆ ಎಂಜಿನಿಯರಿಂಗ್, ವೈದ್ಯಕೀಯ ಮತ್ತಿತರ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಬೇಕು ಎಂದರು.
ಹಿರಿಯ ಪತ್ರಕತ೯ ಅನಿಲ್ ಎಚ್.ಟಿ. ಮಾತನಾಡಿ, ಸಮಾಜ ಮತ್ತು ಸಮಾಜದ ಜನರು ಸುಂದರವಾಗಿ ಇರುವಲ್ಲಿ ಸವಿತಾ ಸಮಾಜದವರ ಕೊಡುಗೆ ಅಪಾರವಾಗಿದೆ. ನಿಜಾಥ೯ದಲ್ಲಿಯೂ ಸವಿತಾ ಸಮಾಜದವರು ಸಮಾಜದ ಜನತೆಯನ್ನು ಸುಂದರವಾಗಿ ರೂಪಿಸುಲ್ಲಿ ಕಾರಣರಾಗಿದ್ದಾರೆ. ಸವಿತಾ ಸಮಾಜದ ಬಾಂಧವರ ಕಾಯ೯ ಇಲ್ಲದ ಸಮಾಜವನ್ನು ಊಹಿಸಲೇ ಸಾಧ್ಯವಿಲ್ಲ ಎಂದರು.ಸವಿತಾ ಮಹಷಿ೯ಗಳು ಯುಗಪುರುಷರಾಗಿದ್ದಾರೆ ಎಂದು ಬಣ್ಣಿಸಿದ ಅನಿಲ್, ರಥಸಪ್ತಮಿಯಂದೇ ಜನಿಸಿದ ಸವಿತಾ ಮಹಷಿ೯ಗಳು, ದೇವರ ಆಯುಷ್ಕರ್ಮ ಮಾಡುವ ಸೇವಾ ಕೈಂಕಯ೯ದಲ್ಲಿ ತೊಡಗಿಸಿಕೊಂಡಿದ್ದರಲ್ಲದೇ ನಾದಸ್ವರಕ್ಕೂ ಸವಿತಾ ಮಹಷಿ೯ಗಳ ಕೊಡುಗೆ ಅಪಾರ ಎಂದರು.
ಸವಿತಾ ಸಮಾಜದವರ ವೃತ್ತಿಯು ಆಧುನಿಕ ತಂತ್ರಜ್ಞಾನಗಳ ಸುಳಿಯಲ್ಲಿ ಸಿಲುಕಿದೆ. ಹೀಗಿದ್ದರೂ ಯಾವುದೇ ಯಂತ್ರಗಳು ಕೂಡ ವ್ಯಕ್ತಿಯ ವೃತ್ತಿ ಕೌಶಲ್ಯತೆಗೆ ಸರಿಸಾಟಿಯಾಗಲಾರದು ಎಂದು ಅಭಿಪ್ರಾಯಪಟ್ಟ ಅನಿಲ್ ಹೆಚ್.ಟಿ. ಹೀಗಾಗಿ ಸವಿತಾ ಸಮಾಜದವರಿಗೆ ವೃತ್ತಿಯಲ್ಲಿನ ಸವಾಲುಗಳ ಆತಂಕ ಅನಗತ್ಯ ಎಂದರು.ಸಕಾ೯ರಗಳು ಪ್ರತೀ ಸಮುದಾಯ ಮಹನೀಯರ ಸಮಾಜಸೇವಾ ಸಾಧನೆಯನ್ನು ಸ್ಮರಿಸಿ ಗೌರವಿಸುವ ನಿಟ್ಟಿನಲ್ಲಿ ಜಯಂತಿಗಳನ್ನು ಕನ್ನಡ ಮತ್ತು ಸಂಸ್ಕೖತಿ ಇಲಾಖೆ ಮೂಲಕ ಆಯೋಜಿಸುತ್ತಾ ಬಂದಿದೆ. ಇಂಥ ಜಯಂತಿ ಮೂಲಕ ಸಮಾಜದ ವಿವಿಧ ಜಾತಿ, ಧಮ೯ಗಳ ಮಹನೀಯರನ್ನು ಸಮಾಜಭಾಂದವರು ಸ್ಮರಿಸುವಂತಾಗುತ್ತದೆ ಎಂದೂ ಅನಿಲ್ ಹೇಳಿದರು.
ಕೊಡಗು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ದೊರೇಶ್, ತಾಲ್ಲೂಕು ಅಧ್ಯಕ್ಷರಾದ ಮಧು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಮಾತನಾಡಿದರು.