ಬೀದರ್‌ನಲ್ಲಿ ಸಂಭ್ರಮದ ಮಹ್ಮದ ಪೈಗಂಬರ್ ಜನ್ಮದಿನ

| Published : Sep 17 2024, 12:52 AM IST

ಸಾರಾಂಶ

ಬೀದರ್‌ನಲ್ಲಿ ಪ್ರವಾದಿ ಮಹ್ಮದ ಪೈಗಂಬರ್ ಅವರ ಜನ್ಮ ದಿನಾಚರಣೆ ನಿಮಿತ್ತ ಸೋಮವಾರ ನಡೆದ ಭವ್ಯ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ.

ಕನ್ನಡಪ್ರಭ ವಾರ್ತೆ ಬೀದರ್

ಮುಸ್ಲಿಂ ಬಾಂಧವರಿಂದ ಬೀದರ್‌ನಲ್ಲಿ ಪ್ರವಾದಿ ಮಹ್ಮದ ಪೈಗಂಬರ್ ಅವರ ಜನ್ಮ ದಿನಾಚರಣೆ ನಿಮಿತ್ತ ಸೋಮವಾರ ಭವ್ಯ ಮೆರವಣಿಗೆ ನಡೆಸಿದರು.

ನಗರದ ಮಹ್ಮದ್ ಗಾವಾನ್ ವೃತ್ತದಿಂದ ಆರಂಭವಾದ ಭವ್ಯ ಮೆರವಣಿಗೆ ಶಾಹ್ ಗಂಜ್, ಡಾ.ಅಂಬೇಡ್ಕರ್ ವೃತ್ತ, ಬಸವೇಶ್ವರ ವೖತ್ತದ ಮೂಲಕ ಚೌಬಾರಾ ಹತ್ತಿರದ ಜಾಮಾ ಮಸ್ಜಿದಿಗೆ ತೆರಳಿ ಸಮಾರೋಪಗೊಂಡಿತ್ತು. ಹಜ್ ಕಮಿಟಿ ರಾಜ್ಯ ಸದಸ್ಯ ಹಾಗೂ ನಗರ ಸಭೆ ಮಾಜಿ ಸದಸ್ಯ ಮನ್ಸೂರ್ ಅಹ್ಮದ್ ಖಾದ್ರಿ ಸೇರಿದಂತೆ ಇನ್ನಿತರರ ಪ್ರಮುಖರ ಸಮ್ಮುಖದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ , ನಗರ ಸಭೆ ಅಧ್ಯಕ್ಷ ಮಹ್ಮದ ಗೌಸ್, ಸೇರಿದಂತೆ ಬೀದರ್ನ ಮುಸ್ಲಿಂ ನಗರ ಸಭೆ ಸದಸ್ಯರು ಹಾಗೂ ಮುಖಂಡರು ಪಾಲ್ಗೊಂಡು ಶಾಹ್ ಗಂಜ್ ಕಮಾನ ವರೆಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ನೂರಾರು ಸಂಖ್ಯೆಯಲ್ಲಿ ಬೈಕ್ ಸವಾರರು ತಮ್ಮ ಬೈಕ್‌ ಮೇಲೆ ಧ್ವಜ್ ಹಿಡಿದು ನಗರದ ವಿವಿಧ ರಸ್ತೆಗಳ ಮೇಲೆ ಜಯಘೋಷಗಳನ್ನು ಕುಗೂತ್ತ ಸಾಗುವ ದೃಶ್ಯ ಸಾಮಾನ್ಯವಾಗಿತ್ತು. ಈದ್ ಮಿಲಾದ್ ಹಬ್ಬದ ನಿಮಿತ್ತ ಬೀದರ್‌ ಹಳೆಯ ಭಾಗದ ಅನೇಕ ವೖತ್ತಗಳನ್ನು ವಿದ್ಯುತ ದೀಪಗಳಿಂದ ಸಿಂಗಾರಗೊಳಿಸಲಾಗಿತ್ತು. ಗಾವಾನ ವೖತ್ತಕ್ಕೆ ಮಾಡಲಾದ ದೀಪಾಲಂಕಾರ ಮನ ಸೆಳೆಯುವಂತಿತ್ತು.

ನೂರಖಾನ್ ತಾಲೀಮ್, ಫತ್ತೇಹ ದರವಾಜಾ, ಮನಿಯಾರ್ ತಾಲೀಮ್, ಮುಲ್ತಾನಿ ಕಾಲೋನಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಮನ ಸೆಳೆಯುವಂತಹ ವಿದ್ಯುತ ದೀಪಾಲಂಕಾರ ಮಾಡಲಾಗಿತ್ತು ಸೋಮವಾರ ಸಂಜೆ ನಗರದ ವಿವಿಧ ಬಡಾವಣೆಗಳಲ್ಲಿ ಮಹ್ಮದ್ ಪೈಗಂಬರ್ ಅವರ ಕುರಿತು ಧಾರ್ಮಿಕ ಪ್ರಮುಖರಿಂದ ಪ್ರವಚನ ನಡೆದವು.