ಸಾರಾಂಶ
ಶಿಗ್ಗಾಂವಿ: ಸ್ಮಶಾನದ ಜಾಗೆ ಅತಿಕ್ರಮಣವಾಗಿದೆ ಎಂದು ಶವ ಇಟ್ಟುಕೊಂಡು ಪ್ರತಿಭಟನೆ ಮಾಡಿದ ಘಟನೆ ತಾಲೂಕಿನ ಗಂಗ್ಯಾನೂರ ಗ್ರಾಮದಲ್ಲಿ ಸೋಮವಾರದಂದು ಜರುಗಿದೆ.ಗಂಗ್ಯಾನೂರಿನ ಎಲ್ಲಪ್ಪ ಸಿದ್ದಪ್ಪ ಕಳಸದ್ (75) ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಗ್ರಾಮದ ಹೊರವಲಯದಲ್ಲಿ ಸ್ಮಶಾನಕ್ಕಾಗಿ ಶವವನ್ನು ಇಟ್ಟುಕೊಂಡು ಪ್ರತಿಭಟನೆ ಮಾಡಿದರು.ಗ್ರಾಮವು ಶಿಗ್ಗಾಂವಿಯ ೨೩ನೇ ವಾರ್ಡಿನ ವ್ಯಾಪ್ತಿಗೆ ಸೇರಿದ್ದು, ಸರ್ವೇ ನಂಬರ್ ೮೧೩ (೦೨ ಎಕರೆ ೦೮ ಗುಂಟೆ) ಸ್ಮಶಾನಕ್ಕಾಗಿ ಜಮೀನು ಇದ್ದು, ಆದರೆ ಹನುಮಂತಪ್ಪ ಫಕೀರಪ್ಪ ಬಂಕಾಪುರ ಎಂಬವರು ಸುಮಾರು ವರ್ಷಗಳ ಹಿಂದೆ ಅತಿಕ್ರಮಣ ಮಾಡಿ ಜಮೀನನ್ನು ಉಳುಮೆ ಮಾಡುತ್ತಿದ್ದು, ಸುಮಾರು ಒಂದು ಗುಂಟೆಯಷ್ಟು ಮಾತ್ರ ಸ್ಮಶಾನದ ಜಾಗೆ ಉಳಿದಿದೆ. ಐದಾರು ವರ್ಷಗಳಿಂದ ಉಳಿದ ಒಂದು ಗುಂಟೆ ಜಾಗದಲ್ಲಿ ಸದರ ಗ್ರಾಮಸ್ಥರು ಅಂತ್ಯಕ್ರಿಯೆಯನ್ನು ಮಾಡುತ್ತಾ ಬಂದಿದ್ದಾರೆ. ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಹನುಮಂತಪ್ಪ ನ್ಯಾಯಾಲಯದ ಮೊರೆ ಹೋಗಿದ್ದು, ಧಾರವಾಡ ಹೈಕೋರ್ಟ್ ಪ್ರಕರಣವನ್ನು ಅಕ್ರಮ-ಸಕ್ರಮ ಸಮಿತಿಯಲ್ಲಿ ವಿಚಾರಣೆ ನಡೆಸಿ ನ್ಯಾಯ ಒದಗಿಸಿಕೊಡಬೇಕು ಎಂದು ಶಿಗ್ಗಾಂವಿ ತಹಸೀಲ್ದಾರ್‌ಗೆ ಆದೇಶ ಮಾಡಿದೆ.
ಆದರೆ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಇಲ್ಲದ್ದರಿಂದ ಪ್ರಕರಣ ಹಾಗೆ ಉಳಿದಿದೆ. ಗ್ರಾಮದ ಹೊರವಲಯದಲ್ಲಿ ಸ್ಮಶಾನ ಜಾಗಕ್ಕಾಗಿ ಶವ ಇಟ್ಟು ಪ್ರತಿಭಟನೆಗೆ 70-80 ಜನರು ಮುಂದಾದಾಗ ಶಿಗ್ಗಾಂವಿ ತಹಸೀಲ್ದಾರ್‌ರು ಕಂದಾಯ ನಿರೀಕ್ಷಕರನ್ನು ಕಳುಹಿಸಿ ಪ್ರತಿಭಟನಾಕಾರರಿಗೆ ಪ್ರಕರಣದ ಪೂರ್ಣ ಪ್ರಮಾಣದ ಮಾಹಿತಿ ನೀಡಿದ್ದಾರೆ. ಸದ್ಯದಲ್ಲೇ ಚುನಾವಣೆ ಆದ ಮೇಲೆ ಅಕ್ರಮ ಸಕ್ರಮ ಸಮಿತಿಯಲ್ಲಿ ಪ್ರಕರಣವನ್ನು ವಿಚಾರಣೆ ನಡೆಸಿ ನ್ಯಾಯ ಒದಗಿಸಿಕೊಡಲಾಗುವುದು ಎಂದು ತಿಳಿಸಿದರು. ಇದಕ್ಕೆ ಒಪ್ಪಿರುವ ಪ್ರತಿಭಟನಾಕಾರರು ಮಧ್ಯಾಹ್ನ 2.45ಕ್ಕೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.