ಇಮಾನ್ ಎಂದರೆ ಅಲ್ಲಾಹನ ಮೇಲೆ ದೃಢವಾದ ವಿಶ್ವಾಸವಿಡುವುದರ ಜತೆಗೆ ಪವಿತ್ರ ಗ್ರಂಥಗಳು, ಪ್ರವಾದಿಗಳು ಹಾಗೂ ಧಾರ್ಮಿಕ ಬೋಧನೆಗಳ ಮೇಲೆ ನಂಬಿಕೆ ಹೊಂದುವುದಾಗಿದೆ.
ಗದಗ: ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ್ ಅವರ ಜೀವನ ಮಾನವಕುಲಕ್ಕೆ ಆದರ್ಶವಾಗಿದೆ. ಅವರ ಸುನ್ನತ್‌ಗಳನ್ನು ಅನುಸರಿಸುವುದರ ಜತೆಗೆ ಪವಿತ್ರ ಕುರಾನ್‌ನ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೌಲಾನಾ ಫಾರೂಖ್ ಸಾಹೇಬ್ ಹೇಳಿದರು.ತಾಲೂಕಿನ ಕೋಟುಮಚಗಿ ಗ್ರಾಮದ ಹಜರತ್ ಜಿಂದಾಶಾವಲಿ ಶಾದಿಮಹಲ್‌ನಲ್ಲಿ ಅಂಜುಮನ್- ಏ- ಇಸ್ಲಾಂ ಕಮಿಟಿ ಹಾಗೂ ನೌಜವಾನ್ ಕಮಿಟಿ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಮಾನ್ ಎಂದರೆ ಅಲ್ಲಾಹನ ಮೇಲೆ ದೃಢವಾದ ವಿಶ್ವಾಸವಿಡುವುದರ ಜತೆಗೆ ಪವಿತ್ರ ಗ್ರಂಥಗಳು, ಪ್ರವಾದಿಗಳು ಹಾಗೂ ಧಾರ್ಮಿಕ ಬೋಧನೆಗಳ ಮೇಲೆ ನಂಬಿಕೆ ಹೊಂದುವುದಾಗಿದೆ. ಇಮಾನ್ ಮತ್ತು ಕಲ್ಮಾದ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಂಡು ಜೀವನದುದ್ದಕ್ಕೂ ಕಾಪಾಡಿಕೊಳ್ಳಬೇಕು ಎಂದರು.ಹಾಜಿ ಅಬ್ದುಲ್ ಖಾದರ್ ಸನ್ನುಭಾಯಿ ಮಾತನಾಡಿ, ಇಸ್ಲಾಂ ಶಾಂತಿ, ಸೌಹಾರ್ದ ಹಾಗೂ ಮಾನವೀಯತೆಯನ್ನು ಸಾರುವ ಧರ್ಮವಾಗಿದೆ. ಅಲ್ಲಾಹನು ಸಕಲ ಜೀವಿಗಳನ್ನು ಸೃಷ್ಟಿಸಿದ್ದು, ಮಾನವಕುಲದ ಒಳಿತಿಗಾಗಿ ಪ್ರೀತಿ, ಸಹೋದರತ್ವ ಹಾಗೂ ಸಹಬಾಳ್ವೆಯ ಸಂದೇಶ ನೀಡಿದ್ದಾನೆ. ಧರ್ಮದ ಹೆಸರಿನಲ್ಲಿ ದ್ವೇಷ ಹಾಗೂ ಅಶಾಂತಿಗೆ ಅವಕಾಶ ನೀಡದೆ ಎಲ್ಲ ಧರ್ಮಗಳ ಜನರು ಪರಸ್ಪರ ಗೌರವದಿಂದ ಬದುಕಬೇಕು ಎಂದರು.
ಮೌಲಾನಾ ಅಬುಬಕ್ಕರ್ ಮಾತನಾಡಿ, ಇಮಾನ್ ಮಾನವನಿಗೆ ದೊರೆತಿರುವ ಅಮೂಲ್ಯ ಸಂಪತ್ತು. ಅದನ್ನು ಅರಿತುಕೊಂಡು ಸತ್ಕಾರ್ಯಗಳಲ್ಲಿ ತೊಡಗಬೇಕು. ಇಂದು ಜೀವಂತವಾಗಿರುವುದೇ ಅಲ್ಲಾಹನ ದೊಡ್ಡ ಅನುಗ್ರಹವಾಗಿದ್ದು, ದೊರೆತ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು. ನಮಾಜ್ ಸೇರಿದಂತೆ ಧಾರ್ಮಿಕ ಕರ್ತವ್ಯಗಳನ್ನು ಶ್ರದ್ಧೆಯಿಂದ ಪಾಲಿಸಬೇಕು ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಜೆ.ಎಚ್. ಮುಲ್ಲಾ, ಕೆ.ಎಫ್. ಮೀರಾನಾಯ್ಕ ಹಾಗೂ ಜೆ.ಜೆ. ಹಿರೇಹಾಳ, ಕನ್ನಡಪ್ರಭದ ಹಿರಿಯ ಉಪಸಂಪಾದಕ ಅಜೀಜ ಅಹ್ಮದ ಬಳಗಾನೂರ ಮತ್ತು ಅಂಜುಮನ್- ಏ- ಇಸ್ಲಾಂ ಕಮಿಟಿ ಅಧ್ಯಕ್ಷ ಜೀವನಸಾಬ ಸರ್ಕಾವಸ್ ಅವರನ್ನು ಸನ್ಮಾನಿಸಲಾಯಿತು.ಮಕ್ಕಳಿಂದ ಖುರಾನ್ ಪಠಣ, ಭಾಷಣ, ಕವ್ವಾಲಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮೌಲಾನಾ ಇಮಾಮಹುಸೇನ ಸಾಹೇಬ್, ಮೌಲಾನಾ ಆರೀಫಸಾಬ ಹಾಳಕೇರಿ, ನೌಜವಾನ್ ಕಮೀಟಿ ಸದಸ್ಯರಾದ ರಶೀದ್ ಅಹ್ಮದ್ ಹಾಳಕೇರಿ, ಜೀವನಸಾಬ ಸರಕಾವಸ್, ಮಹ್ಮದ್ ರಫೀಕ ಕೊಚಲಾಪುರ, ಜೀವನಸಾಬ ಅತ್ತಾರ, ಮುನ್ನಾ ಮುಳಗುಂದ, ಜೀವನಸಾಬ ಬುಕ್ಕಿಟಗಾರ, ಅಶ್ಫಾಕ್ ಮುಲ್ಲಾ, ಜೀವನಸಾಬ ಹಾಳಕೇರಿ, ನಭಿಸಾಬ್ ಮೀರನಾಯ್ಕ, ಶಾಮೀದ ಮೀರನಾಯ್ಕ, ದಾದೇಸಾಬ್ ಮುಜಾವರ್, ರಜಾಕ್ ತಹಶೀಲ್ದಾರ್ ಸೇರಿದಂತೆ ಹಲವರಿದ್ದರು. ಮಹ್ಮದಗೌಸ್ ನಿರೂಪಿಸಿದರು.