ಯಲಿವಾಳ, ಖಂಡೇಬಾಗೂರ ಸೇತುವೆ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವನೆ-ಶಾಸಕ ಬಣಕಾರ

| Published : Jul 23 2024, 12:34 AM IST

ಯಲಿವಾಳ, ಖಂಡೇಬಾಗೂರ ಸೇತುವೆ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವನೆ-ಶಾಸಕ ಬಣಕಾರ
Share this Article
  • FB
  • TW
  • Linkdin
  • Email

ಸಾರಾಂಶ

ರಟ್ಟೀಹಳ್ಳಿ ತಾಲೂಕಿನ ಖಂಡೇಬಾಗೂರ ಹಾಗೂ ಯಲಿವಾಳ ಗ್ರಾಮ ಸಂಪರ್ಕಿಸುವ ಸೇತುವೆಗಳು ಚಿಕ್ಕದಾಗಿದ್ದರಿಂದ ಮಳೆಗಾಲ ಸಂದರ್ಭದಲ್ಲಿ ಮುಳುಗಡೆಯಾಗುತ್ತಿದ್ದು, ಹೊಸ ಸೇತುವೆ ನಿರ್ಮಾಣಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಯು.ಬಿ ಬಣಕಾರ ಹೇಳಿದರು.

ರಟ್ಟೀಹಳ್ಳಿ: ತಾಲೂಕಿನ ಖಂಡೇಬಾಗೂರ ಹಾಗೂ ಯಲಿವಾಳ ಗ್ರಾಮ ಸಂಪರ್ಕಿಸುವ ಸೇತುವೆಗಳು ಚಿಕ್ಕದಾಗಿದ್ದರಿಂದ ಮಳೆಗಾಲ ಸಂದರ್ಭದಲ್ಲಿ ಮುಳುಗಡೆಯಾಗುತ್ತಿದ್ದು, ಹೊಸ ಸೇತುವೆ ನಿರ್ಮಾಣಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ನಿರಂತರ ಮಳೆಯಿಂದಾಗಿ ಯಲಿವಾಳ ಹಾಗೂ ಖಂಡೇಬಾಗೂರ ಸೇತುವೆಗಳು ಮುಳುಗಡೆಯಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ನಂತರ ಮಾತನಾಡಿದ ಅವರು, ತಾಲೂಕಿನಾದ್ಯಂತ ನಿರಂತರ ಮಳೆಯಿಂದಾಗಿ ಕೆರೆ, ಕಟ್ಟೆಗಳು, ನದಿಗಳು ತುಂಬಿ ಸಮೃದ್ಧಿಯಾಗಿದ್ದು, ತಾಲೂಕಿನ ಎರಡು ಪ್ರಮುಖ ಹಳ್ಳಿಗಳನ್ನು ಸಂಪರ್ಕಿಸುವ ಸೇತುವೆಗಳು ಪ್ರತಿ ಮಳೆಗಾಲದಲ್ಲಿ ಮುಳುಗಡೆಯಾಗುತ್ತಿರುವುದರಿಂದ ಗ್ರಾಮಸ್ಥರು, ಶಾಲಾ ವಿಧ್ಯಾರ್ಥಿಗಳು, ವೃದ್ಧರು ದೂರದ ಊರುಗಳಿಂದ ಸುತ್ತುವರೆದು ಗ್ರಾಮಕ್ಕೆ ತಲುಪುವಂತಾಗಿದೆ. ಕಾರಣ ಈ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು ಕೂಡಲೇ ಹೊಸ ಸೇತುವೆ ನಿರ್ಮಾಣ ಮಾಡಲು ಡಿಪಿಆರ್ ಸಿದ್ಧಪಡಿಸಿ ಯೋಜನೆ ರೂಪಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಆದಷ್ಟು ಬೇಗ ಕಾರ್ಯ ರೂಪಕ್ಕೆ ತರಲಾಗುವುದು ಎಂದರು.

ರಟ್ಟೀಹಳ್ಳಿ ತಾಲೂಕಿನ 48, ಹಿರೇಕೆರೂರ ತಾಲೂಕಿನ 45 ಮನೆಗಳು ಹಾನಿಯಾಗಿದ್ದು, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್ ಮುಖಾಂತರ ಪರಿಹಾರ ನೀಡುತ್ತಿದ್ದು, ಸರಕಾರದ ನಡೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಹಾನಿಯಾದ ಮನೆ ನಿರ್ಮಾಣಕ್ಕೆ ಸರಕಾರ ಘೋಷಣೆ ಮಾಡಿದ ನಂತರ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ರಟ್ಟೀಹಳ್ಳಿ, ಬುಳ್ಳಾಪುರ, ಪುರದಕೇರಿ ಸೇರಿದಂತೆ ಒಟ್ಟು 6 ಕಡೆ ಶಾಲಾ ಕೊಠಡಿಗಳು ಸಂಪೂರ್ಣ ಬಿದ್ದಿದ್ದು ಅದೃಷ್ಟವಶಾತ್ ಬಳಕೆ ಮಾಡದ ಶಾಲಾ ಕೊಠಡಿಯಾದ್ದರಿಂದ ಯಾವುದೇ ಹಾನಿಯಾಗಿಲ್ಲ. ಪುರದಕೇರಿ ಗ್ರಾಮದ ಶಾಲಾ ಕೊಠಡಿಗಳು ಸಂಪೂರ್ಣ ಸೋರುತ್ತಿರುವ ಬಗ್ಗೆ ಗ್ರಾಮಸ್ಥರು ಗಮನಕ್ಕೆ ತಂದಿದ್ದು ತಕ್ಷಣ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಅನುದಾನದ 4 ಲಕ್ಷ ರುಪಾಯಿಯಲ್ಲಿ ದುರಸ್ತಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಈಗಾಗಲೇ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ತಾಲೂಕಿನಲ್ಲಿ ಹೊಸ ಶಾಲಾ ಕೊಠಡಿ ನಿರ್ಮಾಣದ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿದ್ದು ಆದಷ್ಟು ಬೇಗ ಅನುದಾನ ತರಲು ಪ್ರಯತ್ನಿಸುತ್ತೇನೆ ಎಂದರು.

ತಾಲೂಕಿನಾದ್ಯಂತ ನೀರಿನ ಪ್ರಮಾಣ ಅಪಾಯದ ಮಟ್ಟಕ್ಕೆ ಇರದ ಕಾರಣ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇಲ್ಲ. ಮುಂದೆ ಅಪಾಯ ಮಟ್ಟಕ್ಕೆ ನೀರಿನ ಪ್ರಮಾಣ ಹೆಚ್ಚಾದಲ್ಲಿ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಸಾರ್ವಜನಿರ ಕರೆಗಳಿಗೆ ತಕ್ಷಣ ಸ್ಪಂದನೆ ನೀಡಲು ಸೂಚಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ತಹಸೀಲ್ದಾರ ಕೆ. ಗುರುಬಸವರಾಜ, ಪಿಆರ್‌ಇ ಅಧಿಕಾರಿ ಬಿ. ನಂದೀಶ, ಕಂದಾಯ ಇಲಾಖೆ ಅಧಿಕಾರಿ ಶಂಕರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರು ಇದ್ದರು.