ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ವಿವೇಕಾನಂದ ನಗರದ ಸಮಗ್ರ ಅಭಿವೃದ್ಧಿಗೆ ಸಾಲ ಪಡೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಶಾಸಕ ಪಿ.ರವಿಕುಮಾರ್ ಗಣಿಗ ತಿಳಿಸಿದರು.ನಗರದ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷ ನಯೀಮ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮೊದಲ ಬಜೆಟ್ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಸಾಲಕ್ಕೆ ಅನುಮತಿ ನೀಡಿದರೆ ಬಡಾವಣೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಬಡಾವಣೆಯ 107 ನಿವೇಶನಗಳ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐಗೆ ವಹಿಸಿರುವುದರಿಂದ ಸಿಬಿಐ ಅಧಿಕಾರಿಗಳು ಎಲ್ಲ ಪೈಲ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇನ್ನೂ 524 ನಿವೇಶನ ಮಾರಾಟ ಮಾಡಬೇಕಿದೆ. ಸರ್ಕಾರದಿಂದ 50 ಕೋಟಿ ರು. ಸಾಲ ತೆಗೆದುಕೊಂಡು ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.ನಗರದ ಕಲ್ಲಹಳ್ಳಿ ಬಳಿಯ ಕೋಣನಹಳ್ಳಿ ಕೆರೆಯ ಹೊರಭಾಗದಲ್ಲಿ 1.5 ಕೋಟಿ ರು.ಗಳಲ್ಲಿ ಉದ್ಯಾನ ಹಾಗೂ ವಾಯು ವಿಹಾರಿಗಳಿಗೆ ಅನುಕೂಲವಾಗುವಂತೆ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದರು.
ಮುಡಾ ಅಧ್ಯಕ್ಷ ನಯೀಮ್ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಜಯಂತಿಯಂದು ಮುಡಾ ಮೊದಲ ಸಭೆ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಕಳೆದ ಸಾಲಿನಲ್ಲಿ ಮುಡಾ 35 ಲಕ್ಷ ರು. ಆದಾಯ ಗಳಿಸಿದೆ. ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು ಮಂಡ್ಯ ನಗರದ ಅಭಿವೃದ್ಧಿಗೆ 50 ಕೋಟಿ ರು. ಸಾಲಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.ಸಭೆಯಲ್ಲಿ ಆಯುಕ್ತರಾದ ಐಶ್ವರ್ಯ, ನಿರ್ದೇಶಕರಾದ ಎಂ.ಕೃಷ್ಣ, ದೊಡ್ಡಯ್ಯ, ಕಾವ್ಯಶ್ರೀ ಸೋಮಶೇಖರ್, ಅರುಣ್ ಕುಮಾರ್, ನಗರಸಭೆ ಎಇಇ ರವಿಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ನಾಳೆ ದಲಿತ ಚಳವಳಿ 50ನೇ ಸುವರ್ಣ ಮಹೋತ್ಸವ: ಎಂ.ಶಿವುಮಂಡ್ಯ:ಹಾಸನದ ಅಂಬೇಡ್ಕರ್ ಭವನದಲ್ಲಿ ಜೂನ್ 29ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ ಬಣದಿಂದ ದಲಿತ ಚಳವಳಿ 50ನೇ ಸುವರ್ಣ ಮಹೋತ್ಸವ ಹಾಗೂ 86ನೇ ಪ್ರೊ.ಕೃಷ್ಣಪ್ಪ ಜನ್ಮ ದಿನಾಚರಣೆ ಮತ್ತು ರಾಜ್ಯ ಮಟ್ಟದ ಸ್ವಾಭಿಮಾನಿ ಸಂಘರ್ಷ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಎಂ.ಶಿವು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮವನ್ನು ಸಹಕಾರ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಉದ್ಘಾಟಿಸುವರು. ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ ಎಂದರು .ಹಾಸನ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್ ಪ್ರೊ.ಬಿ.ಕೃಷ್ಣಪ್ಪರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವರು. ಸಂಘಟನೆ ರಾಜ್ಯ ಸಂಚಾಲಕ ಎಂ.ಸೋಮಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಲ್ಬುರ್ಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ್, ಪ್ರಶಸ್ತಿ ಪುರಸ್ಕೃತರಾದ ಇಂದಿರಾ ಕೃಷ್ಣಪ್ಪ ಮುಖ್ಯ ಭಾಷಣ ಮಾಡಲಿದ್ದಾರೆ. ದಸಂಸ ರಾಜ್ಯ ಮುಖಂಡ ಅಂದಾನಿ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸುವರು ಎಂದರು.ಸುದ್ದಿಗೋಷ್ಠಿಯಲ್ಲಿ ಮದ್ದೂರು ತಾಲೂಕು ಸಂಘಟನಾ ಸಂಚಾಲಕ ನಿರಂಜನ್ , ಗಿರೀಶ್ , ಉಮೇಶ್, ರಾಜೇಶ್ ಇದ್ದರು.