ರೋಗ ಮುಕ್ತ ಸಮಾಜಕ್ಕಾಗಿ ಪರಿಸರ ಸಂರಕ್ಷಿಸಿ

| Published : Jun 10 2024, 12:32 AM IST

ರೋಗ ಮುಕ್ತ ಸಮಾಜಕ್ಕಾಗಿ ಪರಿಸರ ಸಂರಕ್ಷಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯನ ಅತಿಯಾದ ಆಸೆಯಿಂದ ಅರಣ್ಯ ನಾಶದ ಜತೆಗೆ ಪ್ಲಾಸ್ಟಿಕ್ ಬಳಸಿ ಭೂಮಿಯನ್ನು ಕಲುಷಿತಗೊಳಿಸುತ್ತಿದ್ದಾನೆ, ಮುಂದಿನ ಪೀಳಿಗೆ ಬದುಕಿಗೆ ಇದು ಹಾನಿಕಾರಕವಾಗಿದ್ದು, ಅರಣ್ಯ ಉಳಿಸೋಣ, ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಬೇಕು

ಕನ್ನಡಪ್ರಭ ವಾರ್ತೆ ಕೋಲಾರಸಮೃದ್ಧ, ಸಂಪತ್ಭರಿತ ರೋಗ ಮುಕ್ತ ಸಮಾಜಕ್ಕಾಗಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್. ಹೊಸಮನಿ ಕರೆ ನೀಡಿದರು. ನಗರ ಹೊರವಲಯದ ಜೂಹಳ್ಳಿಯ ಅಲಿ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಗಿಡ ನೆಟ್ಟು ಚಾಲನೆ ನೀಡಿ ಮಾತನಾಡಿದರು.ಪರಿಸರ ಮಾಲಿನ್ಯ ತಡೆಗಟ್ಟಿ

ಪರಿಸರ ಎಂದರೆ ಗಿಡ, ಮರ ಮಾತ್ರವಲ್ಲ, ಭೂಮಿ, ಜೀವಿಗಳು ಎಲ್ಲವೂ ಪರಿಸರದ ಭಾಗವೇ ಎಂದ ಅವರು, ಮುಂದಿನ ಪೀಳಿಗೆಗೆ ಪರಿಸರ, ಭೂಮಿ ಉಳಿಸಲು ಪರಿಸರಮಾಲಿನ್ಯ ಮುಕ್ತ ನವಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಕಿವಿಮಾತು ಹೇಳಿದರು. ವಿಶ್ವಪರಿಸರ ದಿನವನ್ನು ಪ್ರತಿ ವರ್ಷ ಆಚರಿಸಿದರೆ ಸಾಲದು. ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಅದನ್ನು ಪೋಷಿಸುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು, ಏರುತ್ತಿರುವ ವಿಶ್ವ ತಾಪಮಾನ ಕಡಿಮೆಯಾಗಲು ಗಿಡಮರಗಳ ಅಗತ್ಯವಿದೆ ಎಂದರು.ಪ್ಲಾಸ್ಟಿಕ್‌ ಚೀಲ ಬಳಸಬೇಡಿ

ಪ್ಲಾಸ್ಟಿಕ್ ಅತಿಯಾದ ಬಳಕೆಯಿಂದಾಗಿ ಅದು ಭೂಮಿಯಲ್ಲಿ ಕೊಳೆಯದ ಕಾರಣ ಭೂಮಿ ಮಾಲಿನ್ಯವಾಗುತ್ತಿದೆ, ಅದನ್ನು ತಿಂದ ದನಕರು, ಪ್ರಾಣಿಗಳಿಗೂ ಮಾರಕವಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಮನೆಯಿಂದ ಹೊರ ಹೋಗುವಾಗ ಬಟ್ಟೆಯ ಕೈಚೀಲ ಬಳಸುವ ಮೂಲಕ ಪ್ಲಾಸ್ಟಿಕ್‌ಅನ್ನು ಸಾಧ್ಯವಾದಷ್ಟು ಬಳಸದಿರಲು ಪ್ರತಿಜ್ಞೆ ಸ್ವೀಕರಿಸಿ ಎಂದು ಕಿವಿಮಾತು ಹೇಳಿದರು.ಮನುಷ್ಯನ ಅತಿಯಾದ ಆಸೆಯಿಂದ ಅರಣ್ಯ ನಾಶದ ಜತೆಗೆ ಪ್ಲಾಸ್ಟಿಕ್ ಬಳಸಿ ಭೂಮಿಯನ್ನು ಕಲುಷಿತಗೊಳಿಸುತ್ತಿದ್ದಾನೆ, ಮುಂದಿನ ಪೀಳಿಗೆ ಬದುಕಿಗೆ ಇದು ಹಾನಿಕಾರಕವಾಗಿದ್ದು, ಅರಣ್ಯ ಉಳಿಸೋಣ, ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸೋಣ ಎಂದು ಹೇಳಿದರು.ಮನೆಯಿಂದಲೇ ಆರಂಭವಾಗಲಿ

ಗಿಡಮರ ಬೆಳೆಸುವ ಸಂಕಲ್ಪ ಪ್ರತಿಯೊಬ್ಬರದಾಗಲಿ ಎಂದ ಅವರು, ಪ್ರಕೃತಿಯ ಜತೆ ನಾವು ಹೊಂದಿಕೊಂಡು ಹೋಗಬೇಕೆ ಹೊರತೂ ಅದರ ವಿರುದ್ದ ಹೋದರೆ ಅದರಿಂದಾಗುವ ಹಾನಿಯನ್ನು ಎದುರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಚ್ಚರಿಸಿ, ಮಕ್ಕಳು ಪರಿಸರ ಜಾಗೃತಿಯನ್ನು ನಿಮ್ಮ ಮನೆಯಿಂದಲೇ ಆರಂಭಿಸಿ ಎಂದರು.ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕ ಮೌಲಾನ ಮೊಹಮದ್ ಅತೀಕ್ ಉರ್ ರೆಹಮಾನ್ ರಷಿದ್, ದಲಿತ ಮುಖಂಡ ಟಿ. ವಿಜಯಕುಮಾರ್, ರೈತ ಸಂಘದ ಅಧ್ಯಕ್ಷ ಅಬ್ಬಣಿ ಶಿವಪ್ಪ, ಯುವ ರೈತ ಆನಂದ್ ಕುಮಾರ್, ಸ್ವರ್ಣಭೂಮಿ ಫೌಂಡೇಷನ್ ಅಧ್ಯಕ್ಷ ಬಿ. ಶಿವಕುಮರ್, ಕುಡುವನಹಳ್ಳಿ ಗಣೇಶಪ್ಪ ಇದ್ದರು.