ಸಾರಾಂಶ
ಬೇರೆಯವರು ಪರಿಸರವನ್ನು ಹಾಳು ಮಾಡುವಾಗ ನಾವು ಅವರಿಗೆ ಪರಿಸರವನ್ನು ರಕ್ಷಿಸುವ ಬಗ್ಗೆ ಅರಿವು ಮೂಡಿಸಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಪರಿಸರವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಕರೆ ನೀಡಿದರು.ಮೈಸೂರಿನ ಸಂಕಲ್ಪ ಸೌಧ ಸಮುಚ್ಛಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಲ್ಪವೃಕ್ಷ ಗಿಡ ನೆಟ್ಟು ಮಾತನಾಡಿದ ಅವರು, ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬ ಮನುಷ್ಯನು ಮರಗಳನ್ನು ಬೆಳೆಸಿ ಪ್ರಕೃತಿಯನ್ನು ಕಾಪಾಡಬೇಕು. ಪ್ರಕೃತಿಯನ್ನು ಬೆಳೆಸಿ ಪೋಷಿಸಿದಲ್ಲಿ ಮನುಷ್ಯನ ಆರೋಗ್ಯ ಮತ್ತು ಜೀವನವ ಎರಡು ಸಹ ಸುಂದರವಾಗಿರುತ್ತದೆ ಎಂದರು.
ಬೇರೆಯವರು ಪರಿಸರವನ್ನು ಹಾಳು ಮಾಡುವಾಗ ನಾವು ಅವರಿಗೆ ಪರಿಸರವನ್ನು ರಕ್ಷಿಸುವ ಬಗ್ಗೆ ಅರಿವು ಮೂಡಿಸಬೇಕು. ಹೀಗೆ ಮಾಡಿದಾಗ ಮಾತ್ರ ಪರಿಸರ ನಾಶವಾಗುವುದನ್ನು ತಪ್ಪಿಸಬಹುದು. ಮಳೆಯ ಪ್ರಮಾಣಕಡಿಮೆ ಆಗಿ ನೀರಿಗೆ ಹಾಹಾಕಾರ ಬಂದಿದೆ. ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರು ಇಲ್ಲದಂತಾಗಿದೆ. ಬರಡು ಭೂಮಿಯಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದೆ ರೈತರು ಕಂಗಾಲಾಗಿದ್ದಾರೆ. ಹೀಗಾಗಿ, ಹೂಳು ತುಂಬಿದ ಕೆರೆಗಳ ಪುನಶ್ಚೇತನಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.ಜಿಲ್ಲಾ ನಿರ್ದೇಶಕ ವಿ. ವಿಜಯ್ ಕುಮಾರ್ ನಾಗನಾಳ ಮಾತನಾಡಿ, ಮನೆಗೊಂದು ಗಿಡ ನೆಡುವ ಮೂಲಕ ಪರಿಸರ ಕಾಳಜಿಯನ್ನು ನಮ್ಮ ಮಕ್ಕಳಲ್ಲಿ ಮೂಡಿಸಬೇಕು. ಮಾನವ ಜೀವಿಸಬೇಕಾದರೆ ಪರಿಶುದ್ಧವಾದ ಗಾಳಿ ಬೇಕು. ಗಾಳಿ ಪಡೆಯಬೇಕಾದರೆ ಅಚ್ಚ ಹಸುರಿನ ಗಿಡ ಮರ ಬೇಕು ಎಂದರು.
ಯೋಜನಾಧಿಕಾರಿ ಶಕುಂತಲಾ ಸ್ವಾಗತಿಸಿ. ಯೋಜನಾಧಿಕಾರಿ ಲೋಕೇಶ್ ವಂದಿಸಿದರು.