ಕಣ್ಣುಗಳನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳಿ: ರಾಜಾ ವೇಣುಗೋಪಾಲ ನಾಯಕ

| Published : Sep 30 2024, 01:24 AM IST

ಸಾರಾಂಶ

ಉಚಿತ ನೇತ್ರ ಶಸ್ತ್ರಚಿಕಿತ್ಸೆ ಬಡವರಿಗೆ ಅನುಕೂಲ ಆದ್ದರಿಂದ ಪ್ರತಿಯೊಬ್ಬರು ಎರಡ್ಮೂರು ತಿಂಗಳಿಗೆ ಒಂದು ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಜನರಿಗೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಹುಣಸಗಿ

ಕಣ್ಣುಗಳು ಮಾನವನ ದೇಹದ ಅತೀ ಸೂಕ್ಷ್ಮವಾದ ಅಂಗ. ಇದನ್ನು ಅತೀ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ಪಟ್ಟಣದ ನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ ಹಾಗೂ ನಾಗಣ್ಣ ಸಾಹುಕಾರ ದಂಡಿನ್ ಇವರ ಆಶ್ರಯದಲ್ಲಿ ನಡೆದ ಉಚಿತ ನೇತ್ರಾ ಶಸ್ತ್ರ ಚಿಕಿತ್ಸಾ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಒತ್ತಡದ ಜೀವನ, ಆಹಾರ ಕ್ರಮದಿಂದ ನಿತ್ಯ ಆರೋಗ್ಯದಲ್ಲಿ ಒಂದಲ್ಲಾ ಒಂದು ವೈಪರೀತ್ಯ ಕಾಣುತ್ತಿದ್ದೇವೆ. ಪ್ರತಿಯೊಬ್ಬರು ಎರಡ್ಮೂರು ತಿಂಗಳಿಗೆ ಒಂದು ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ದೇಹದ ಆರೋಗ್ಯ ರಕ್ಷಣೆಯ ಜೊತೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇಂತಹ ಉಚಿತ ನೇತ್ರಾ ಶಸ್ತ್ರಚಿಕಿತ್ಸೆ ಬಡ ಜನರಿಗೆ ಅನುಕೂಲವಾಗಿವೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ದಂಡಿನ್ ಮಾತನಾಡಿ, ಜನರಿಗೆ ಸದುಪಯೋಗವಾಗಲೆಂದು ಉಚಿತ ನೇತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಂಡಿದೆ. ಪ್ರತಿಯೊಂದು ಹಳ್ಳಿಗಳಲ್ಲಿಯೂ ಈ ಬಗ್ಗೆ ಮಾಹಿತಿ ನೀಡಿತ್ತು. ಆದರೆ, ಸಾಕಷ್ಟು ಜನರು ಶಿಬಿರದಲ್ಲಿ ಪಾಲ್ಗೊಂಡಿದ್ದು, ಈ ಒಂದು ಶಿಬಿರವು ಬಡವರಿಗೆ ವರದಾನ ಅಲ್ಲದೆ ಯಶಸ್ವಿಯಾಗಿದ್ದು, ಅತೀವ ಸಂತಸ ಮೂಡಿಸಿದೆ ಎಂದರು.

ಈ ವೇಳೆ, ಶಿಬಿರದಲ್ಲಿ 920ಕ್ಕೂ ಹೆಚ್ಚು ಜನರಿಗೆ ತಪಾಸಣೆಗೆ ಒಳಗಾದವರ ಪೈಕಿ 450 ಜನ ಶಸ್ತ್ರಚಿಕಿತ್ಸೆ ಬೆಂಗಳೂರು ಶಂಕರ ಕಣ್ಣಿನ ಆಸ್ಪತ್ರೆಗೆ ಬರಲು ತಿಳಿಸಲಾಗಿದೆ. ಮೊದಲ ಹಂತದಲ್ಲಿ 150 ಜನರನ್ನು ಶಸ್ತ್ರಚಿಕಿತ್ಸೆಗೆ ಕಳುಹಿಸಿಕೊಡಲಾಗಿದೆ. ಇನ್ನು ಉಳಿದವರಿಗೆ ಹಂತ ಹಂತವಾಗಿ ಕಳುಹಿಸಿ ಶಸ್ತ್ರಚಿಕಿತ್ಸೆ ಮಾಡಿಸಲಾಗುತ್ತದೆ ಎಂದು ಹೇಳಿದರು.

ಹಿರಿಯರಾದ ನಾಗಣ್ಣ ಸಾಹುಕಾರ ದಂಡಿನ್, ಕೆಪಿಸಿಸಿ ರಾಜ್ಯ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ರಾಜಾ ಸಂತೋಷನಾಯಕ, ಪಟ್ಟಣ ಪಂಚಾಯಿತಿ ಅಧ್ಯಕ್ಷ ತಿಪ್ಪಣ್ಣ ನಾಯ್ಕ, ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಶಾಂತಣ್ಣ ಮಲಗಲದಿನ್ನಿ, ಮಲ್ಲಣ್ಣ ಸಾಹುಕಾರ ಮುಧೋಳ, ಶರಣು ದಂಡಿನ್, ಬಸವರಾಜ ಸಜ್ಜನ್, ಆರ್.ಎಂ. ರೇವಡಿ, ಸಿದ್ದು ಮುದಗಲ್, ಬಾಪುಗೌಡ ಪಾಟೀಲ್, ರವಿ ಮಲಗಲದಿನ್ನಿ, ಸರಕಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಎಸ್.ಬಿ. ಪಾಟೀಲ್ ಸೇರಿದಂತೆ ಇತರರಿದ್ದರು.