ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಉಡುಪಿ ಜಿಲ್ಲೆಯಲ್ಲಿ ಮಾ.25ರಿಂದ ಏ.6ರ ವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ 51 ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯನ್ನು ಶಿಸ್ತು ಹಾಗೂ ಸಮನ್ವಯದೊಂದಿಗೆ ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ, ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡಬೇಕು ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಮಮತಾ ಜಿ.ಎಸ್. ಸೂಚನೆ ನೀಡಿದರು.ಅವರು ರಜತಾದ್ರಿಯ ಜಿ.ಪಂ.ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ 7471 ಹುಡುಗರು ಹಾಗೂ 7860 ಹುಡುಗಿಯರು ಸೇರಿ ಒಟ್ಟು 14331 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅವರಲ್ಲಿ ಹೊಸದಾಗಿ 13,454, ಖಾಸಗಿ 233, ಖಾಸಗಿ ಪುನರಾವರ್ತಿತ 578 ಹಾಗೂ ರೆಗ್ಯೂಲರ್ ಪುನರಾವರ್ತಿತ 65 ವಿದ್ಯಾರ್ಥಿಗಳಾಗಿದ್ದಾರೆ ಎಂದರು.ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಕ್ಯಾಮರಾಗಳನ್ನು ತಪ್ಪದೇ ಅಳವಡಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಮೊಬೈಲ್, ಸ್ಮಾರ್ಟ್ ವಾಚ್‌ಗಳನ್ನು ತರುವುದನ್ನು ನಿರ್ಬಂಧಿಸಲಾಗಿದೆ ಎಂದ ಅವರು, 51 ಪರೀಕ್ಷಾ ಕೇಂದ್ರಗಳಲ್ಲಿ 652 ಕೊಠಡಿ ಮೇಲ್ವಿಚಾರಕರು, 51 ಸ್ಥಾನಿಕ ಜಾಗೃತಿ ದಳದ ಅಧಿಕಾರಿಗಳು ಹಾಗೂ 51 ಮೊಬೈಲ್ ಸ್ವಾಧೀನ ಅಧಿಕಾರಿಗಳನ್ನು ಈಗಾಗಲೇ ನೇಮಿಸಲಾಗಿದೆ ಎಂದರು.
ಗ್ರಾಮೀಣ ಪ್ರದೇಶದಿಂದ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಆಗಮಿಸಲು ಬಸ್‌ಗಳ ಕೊರತೆಯಾಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು. ಪರೀಕ್ಷಾ ಕೇಂದ್ರದ ಸುತ್ತಲೂ 100 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.ಸಭೆಯಲ್ಲಿ ಎಸ್‌ಪಿ ಡಾ. ಸಿದ್ದಲಿಂಗಪ್ಪ, ಎಸ್.ಎಸ್.ಎಲ್.ಸಿ. ನೋಡೆಲ್ ಅಧಿಕಾರಿ ಮಂಗಳೂರು ಸಿ.ಟಿ.ಇ. ಪ್ರಾಂಶುಪಾಲ ಸಿಪ್ರಿಯಾನ್ ಮಂತೆರೋ, ಜಿಲ್ಲಾ ಖಜಾನಾಧಿಕಾರಿ ರಂಗಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಮತ್ತಿತರರು ಉಪಸ್ಥಿತರಿದ್ದರು.