ಎಡಿಸಿ ಮಂಗಳ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಪ್ರತಿಜ್ಞಾವಿಧಿ ಬೋಧಿಸಿದರು, ಸರ್ಕಾರಿ ಕಾನೂನು ಕಾಲೇಜು ಪ್ರಾಧ್ಯಾಪಕರಾದ ರಂಗನಾಥಯ್ಯ ಮಾನವ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿದರು.
ಕೋಲಾರ: ಭಾರತ ಸಂವಿಧಾನದ ಚೌಕಟ್ಟಿನಲ್ಲಿ ಮಾನವನ ಹಕ್ಕುಗಳು ಉಲ್ಲಂಘನೆಯಾಗದಂತೆ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ನಟೇಶ್ ತಿಳಿಸಿದರು.
ಅವರು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಮನುಷ್ಯ ಭ್ರೂಣಾವಸ್ಥೆಯಲ್ಲಿರುವಾಗಿನಿಂದ ಕೊನೆವರೆಗೆ ತನ್ನದೇ ಆದ ಹಕ್ಕುಗಳನ್ನು ಹೊಂದಿದ್ದಾನೆ, ಆ ಹಕ್ಕುಗಳನ್ನು ಕಸಿದುಕೊಳ್ಳುವುದು ಅಪರಾಧವಾಗುತ್ತದೆ, ಹೀಗಾಗಿ ಹಕ್ಕುಗಳ ರಕ್ಷಣೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕಾಗಿದೆ, ಮಾನವ ಹಕ್ಕುಗಳ ರಕ್ಷಣೆ ದೇಶದ ಸಂವಿಧಾನದ ಆದ್ಯ ಆಶಯವಾಗಿದೆ. ಈ ಹಕ್ಕುಗಳನ್ನು ರಕ್ಷಿಸಲು ದೇಶದಲ್ಲಿ ಮಾನವ ಹಕ್ಕುಗಳ ಆಯೋಗ ರಚಿಸಲಾಗಿದೆ ಎಂದರು.
ಬದುಕುವ ಹಕ್ಕು, ಶಿಕ್ಷಣ, ಸಾಂಸ್ಕೃತಿಕ, ಆರೋಗ್ಯ, ಸ್ತ್ರೀ ಸ್ವಾತಂತ್ರ್ಯ ಸೇರಿದಂತೆ ಮನುಷ್ಯನಿಗಿರುವ ಎಲ್ಲ ರೀತಿಯ ಮೂಲ ಹಕ್ಕುಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗುವ ಅಗತ್ಯವಿದೆಯೆಂದು ಸಲಹೆ ನೀಡಿದರು, ಅಪರ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್ ಮಾತನಾಡಿ, ಕಳೆದ ಶತಮಾನದಲ್ಲಿ ಸಾಕಷ್ಟು ಬದಲಾವಣೆಗಳು ದೇಶದಲ್ಲಿ ಆಗಿವೆ. ಸಾಕಷ್ಟು ರಾಷ್ಟ್ರಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ತೆರೆದುಕೊಂಡಿವೆ, ರಾಜಾಡಳಿತ ಇರುವ ದೇಶಗಳಲ್ಲೂ ಬದಲಾವಣೆ ಕಾಣುತ್ತಿದ್ದೇವೆ. ಮಾನವ ಹಕ್ಕುಗಳು ಉಲ್ಲಂಘನೆಯಾದ ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು, ಸಾರ್ವಜನಿಕರು, ವಿದ್ಯಾರ್ಥಿಗಳು ಮುಕ್ತವಾಗಿ ಪೊಲೀಸರ ಬಳಿ ಬಂದು ದೂರು ನೀಡಬಹುದು, ನಾವು ಅವರ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇವೆ. ಆದರೆ ಮಾನವ ಹಕ್ಕುಗಳನ್ನು ಸಾರ್ವಜನಿಕರು ಉಪಯೋಗ ಪಡಿಸಿಕೊಳ್ಳಬೇಕೇ ಹೊರತು ದುರುಪಯೋಗಪಡಿಸಿಕೊಳ್ಳಬಾರದು ಎಂದು ತಿಳಿಸಿದರು.ಎಡಿಸಿ ಮಂಗಳ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಪ್ರತಿಜ್ಞಾವಿಧಿ ಬೋಧಿಸಿದರು, ಸರ್ಕಾರಿ ಕಾನೂನು ಕಾಲೇಜು ಪ್ರಾಧ್ಯಾಪಕರಾದ ರಂಗನಾಥಯ್ಯ ಮಾನವ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿದರು.
ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ, ವಕೀಲರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಸಮಿತಿ ರಾಜ್ಯಾಧ್ಯಕ್ಷ ಕೆ.ಸಿ.ಸಂತೋಷ್, ಜಿಲ್ಲಾಧ್ಯಕ್ಷ ಟಮಕ ಶ್ರೀನಾಥ್ ಇದ್ದರು.