- ಮಾನವನ ಕಳ್ಳ ಸಾಗಾಣಿಕೆ ತಡೆ ದಿನಾಚರಣೆಯಲ್ಲಿ ಸಿ.ರಂಗೇಗೌಡ ಅಭಿಮತ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಕರ್ನಾಟಕವನ್ನು ಮಾನವ ಕಳ್ಳ ಸಾಗಾಣಿಕೆಯಿಂದ ಮುಕ್ತಗೊಳಿಸಲು ಸಂಕಷ್ಟದಲ್ಲಿರುವ ಜನರನ್ನು ರಕ್ಷಿಸಲು ಹಾಗೂ ಸಾಗಾಣಿಕೆಗೆ ಒಳಪಟ್ಟವರಿಗೆ ಸೂಕ್ತ ನ್ಯಾಯ ಒದಗಿಸಲು ಸಮಾಜದ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ರಂಗೇಗೌಡ ತಿಳಿಸಿದರು.ಇಲ್ಲಿನ ಉಪನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಘಟಕ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಶಾಂತ ಜೀವಜ್ಯೋತಿ, ಬೆಂಗಳೂರು ಹಾಗೂ ಜಿಲ್ಲೆಯ ಎಲ್ಲಾ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟುವಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪಾತ್ರ ಪ್ರಮುಖವಾಗಿದ್ದು, ಮಹಿಳೆಯರಿಗೆ ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸುವಲ್ಲಿ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಸಾಂತ್ವನ ಕೇಂದ್ರ, ಸ್ವಾಧಾರ ಕೇಂದ್ರಗಳು, ಶಿಶುಪಾಲನಾ ಕೇಂದ್ರಗಳು, ಅಕ್ಕಪಡೆ ಕರ್ತವ್ಯ ನಿರ್ವಹಿಸುತ್ತವೆ. ಯಾವುದೇ ಒಂದು ಸ್ಥಳದಲ್ಲಿ ಪ್ರಕರಣ ಪತ್ತೆಯಾದರೆ ಮಕ್ಕಳ ಸಹಾಯವಾಣಿ 1098, ಮಹಿಳಾ ಸಹಾಯವಾಣಿ 181, ಪೊಲೀಸ್ ಸಹಾಯವಾಣಿ 112ಗಳಿಗೆ ಕರೆ ಮಾಡಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.ನಂತರ ಮಾನವ ಕಳ್ಳಸಾಗಾಣಿಕೆ ತಡೆಕುರಿತು ಪ್ರತಿಜ್ಞಾವಿಧಿ ಬೋಧನೆ ಮಾಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಾನಾಯ್ಕ, ಇಲಾಖೆಯ ಅಧಿಕಾರಿ ಪೂರ್ಣಿಮ ಎಂ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿಗಳು, ಎಲ್ಲಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಮೇಲ್ವಿಚಾರಕಿಯರು, ವಿವಿಧ ಇಲಾಖೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
- - -
-31ಕೆಡಿವಿಜಿ32:ದಾವಣಗೆರೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶ ಸಿ.ರಂಗೇಗೌಡ ಉದ್ಘಾಟಿಸಿದರು.