ಪೂರ್ವಿಕರು ಉಳಿಸಿದ ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ: ಎಚ್.ಡಿ.ತಮ್ಮಯ್ಯ

| Published : Sep 29 2025, 01:02 AM IST

ಪೂರ್ವಿಕರು ಉಳಿಸಿದ ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ: ಎಚ್.ಡಿ.ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ನಮ್ಮ ಪೂರ್ವಿಕರು ಉಳಿಸಿ ಹೋಗಿರುವ ಈ ಸುಂದರ ಪ್ರಕೃತಿ, ಪರಿಸರವನ್ನು ಹಾಳು ಮಾಡಲು ಬಿಡದೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

- ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಚಿಕ್ಕಮಗಳೂರಿನಿಂದ ಮುತ್ತೋಡಿವರೆಗೆ ಬೈಕ್ ರ್‍ಯಾಲಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಮ್ಮ ಪೂರ್ವಿಕರು ಉಳಿಸಿ ಹೋಗಿರುವ ಈ ಸುಂದರ ಪ್ರಕೃತಿ, ಪರಿಸರವನ್ನು ಹಾಳು ಮಾಡಲು ಬಿಡದೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ಜಿಲ್ಲಾ ಪ್ರವಾಸೋದ್ಯಮ ಇಲಾಖೆ, ರೌಂಡ್ ಟೇಬಲ್, ಜಿಲ್ಲಾ ಹೋಂ ಸ್ಟೇ ಮಾಲೀಕರ ಸಂಘ, ಜಿಲ್ಲಾ ರೆಸಾರ್ಟ್ ಮಾಲೀಕರ ಸಂಘ, ಜೀಪ್ ಅಸೋಸಿಯೇಶನ್, ಅಡ್ವೆಂಚರ್ ಕ್ಲಬ್ ಆಶ್ರಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ನಗರದಿಂದ ಮುತ್ತೋಡಿವರೆಗೆ ಆಯೋಜಿಸಲಾಗಿದ್ದ ಬೈಕ್ ರ್‍ಯಾಲಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರೊಂದಿಗೆ ಚಾಲನೆ ನೀಡಿ ಮಾತನಾಡಿದರು.ವಿಶ್ವದಲ್ಲ್ಲೇ ಪ್ರವಾಸೋದ್ಯಮಕ್ಕೆ ಚಿಕ್ಕಮಗಳೂರು ಹೆಸರುವಾಸಿಯಾಗಿದೆ. ಇಂದು ಎಲ್ಲಾ ಪ್ರದೇಶಗಳು ಕಾಂಕ್ರೀಟ್ ನಗರವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಜನರು ಪರಿಸರ ಪ್ರೇಮಿಗಳಾಗಿ ಪಶ್ಚಿಮಘಟ್ಟದಲ್ಲಿರುವ ಈ ಜಿಲ್ಲೆಯ ರಮಣೀಯ ಸ್ಥಳಗಳನ್ನು ವೀಕ್ಷಿಸಲು ಆಗಮಿಸುತ್ತಿದ್ದಾರೆ. ಪ್ರವಾಸಿಗರಿಗೆ ಪರಿಸರ ಉಳಿಸುವ ಕಾಳಜಿ ಬಗ್ಗೆ ತಿಳಿ ಹೇಳಬೇಕು ಎಂದರು. ಈಗಾಗಲೇ ಚಂದ್ರದ್ರೋಣ ಪರ್ವತ ಶ್ರೇಣಿ ಕೆಲವು ಭಾಗಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡಲಾಗಿದೆ. ಮುಂದೆ ನಗರವನ್ನು ಸಹ ಪ್ಲಾಸ್ಟಿಕ್ ಮುಕ್ತ ಮಾಡಲು ತೀರ್ಮಾನಿಸಲಾಗಿದೆ. ಪಂಚ ನದಿಗಳ ಉಗಮಸ್ಥಾನವಾದ ಈ ಜಿಲ್ಲೆ ಪ್ಲಾಸ್ಟಿಕ್ ಹಾವಳಿಯಿಂದ ಈ ನದಿಗಳ ಅಸ್ತಿತ್ವಕ್ಕೆ ಮುಂದೆ ಸಂಚಕಾರ ಬರಬಹುದು. ಹೀಗಾಗಿ ಅವುಗಳನ್ನು ಕಾಪಾಡಿಕೊಳ್ಳುವುದು ಸಹ ನಮ್ಮೆಲ್ಲರ ಜವಾಬ್ದಾರಿ ಎಂದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಪ್ರಪಂಚದ ಭೂಪಟದಲ್ಲಿ ಚಿಕ್ಕಮಗಳೂರನ್ನು ಹುಡುಕುವ ಅಗತ್ಯವಿಲ್ಲ. ಈ ಜಿಲ್ಲೆ ಪ್ರವಾಸೋದ್ಯಮದಲ್ಲಿ ಅಷ್ಟೊಂದು ವಿಶೇಷವಾಗಿ ಗುರುತಿಸಿಕೊಂಡಿದೆ. ಚಿಕ್ಕಮಗಳೂರು ಪರಿಸರ ಉಳಿಸಬೇಕು, ಬೆಳೆಸಬೇಕು. ಪರಿಸರದ ಜೊತೆಗೆ ಪೀಳಿಗೆಯಲ್ಲಿ ಧಾರ್ಮಿಕತೆ, ಸಾಂಸ್ಕೃತಿಕತೆ ಬಗ್ಗೆ ಆಸಕ್ತಿ ಬೆಳೆಸುವ ಕೆಲಸ ಮಾಡಬೇಕಾಗಿದೆ ಎಂದು ಆಶಿಸಿದರು. ಪ್ರವಾಸಿಗರು ಬಂದಾಗ ನಿರ್ಬಂಧ ಇರಬೇಕು. ಆದರೆ ನಿರ್ಬಂಧದ ಹೆಸರಿನಲ್ಲಿ ಸಂಪೂರ್ಣ ನಿಯಂತ್ರಿಸಿದರೆ ಪ್ರವಾಸಿಗರಿಗೆ ತೊಂದರೆಯಾಗುತ್ತದೆ. ಅವರಿಗೆ ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ಗೆ ಅವಕಾಶ ಸಿಗದಿದ್ದರೆ ಸಮಸ್ಯೆಯಾಗಿ ಪ್ರವಾಸೋದ್ಯಮ ಹಾಳಾಗುತ್ತದೆ. ಊರಿನ ಹೆಸರೂ ಹಾಳಾಗುತ್ತದೆ ಎಂದರು. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಂ.ಆರ್.ಲೋಹಿತ್ ಮಾತನಾಡಿ, ಪ್ರತೀ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಹೆಚ್ಚು ಪ್ರಚಲಿತವಿಲ್ಲದ ಪ್ರವಾಸಿ ತಾಣಗಳನ್ನು ಪ್ರಚುರಪಡಿಸುವ ಸಲುವಾಗಿ ಪ್ರತೀ ವರ್ಷ ಬೈಕ್, ಜೀಪ್ ಹಾಗೂ ಸೈಕಲ್ ರ್‍ಯಾಲಿ ಆಯೋಜಿಸುತ್ತಾ ಬರಲಾಗಿದೆ ಎಂದು ತಿಳಿಸಿದರು. ವಿಶ್ವ ಪ್ರವಾಸೋದ್ಯಮದ ಪ್ರಯುಕ್ತ ದತ್ತಪೀಠ, ಕವಿಕಲ್‌ ಗಂಡಿ, ಕೊಳಗಾಮೆ ಮಾರ್ಗವಾಗಿ ಮುತ್ತೋಡಿ ಅರಣ್ಯ, ಮಲ್ಲಂದೂರು ಶೂಟಿಂಗ್ ಪಾಯಿಂಟ್, ಉಕ್ಕುಡ ಫಾಲ್ಸ್, ರಂಗನಬೆಟ್ಟ, ಬಂಡೆಕಲ್ಲು ಬೆಟ್ಟ, ತೋಟ್ಲಪ್ಪನ ಗುಡ್ಡ ಹೀಗೆ ಪರ್ಯಾಯ ತಾಣಗಳತ್ತ ಪ್ರವಾಸಿಗರ ಗಮನ ಸೆಳೆಯುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಟೂರಿಸಂ ವೆಬ್‌ಸೈಟ್ ಕೂಡ ಲಾಂಚ್ ಆಗಿದೆ. ಅಲ್ಲದೆ, ರೀಲ್ಸ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮೂಲಕ ದೇಶಕ್ಕೆ ಮಾತ್ರವಲ್ಲ, ಪ್ರಪಂಚಕ್ಕೆ ಪ್ರಚುರಪಡಿಸುವ ಸಲುವಾಗಿ ಬೈಕ್ ರ್‍ಯಾಲಿಯನ್ನು ಆಯೋಜಿಸಲಾಗಿದೆ ಎಂದರು. ‘ಪ್ರವಾಸೋದ್ಯಮ ಮತ್ತು ಸುಸ್ಥಿರ ಪರಿವರ್ತನೆ’ ಎಂಬುದು ಈ ವರ್ಷದ ಧ್ಯೇಯ ವಾಕ್ಯ. ಈ ಶೀರ್ಷಿಕೆಯಡಿ ಇಂದು ಬೈಕ್ ರ್‍ಯಾಲಿ ಮತ್ತು ಸೆ. 29ಕ್ಕೆ ಕ್ಲೀನಿಂಗ್ ಡ್ರೈವ್ ಅನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ವಕೀಲ ತೇಜಸ್, ರೌಂಡ್ ಟೇಬಲ್ ಅಧ್ಯಕ್ಷ ಅನಿಲ್, ಜೀಪ್ ಅಸೋಸಿಯೇಶನ್‌ನ ಅಧ್ಯಕ್ಷ ಇನಾಯತ್, ರೆಸಾರ್ಟ್ ಅಸೋಸಿಯೇಶನ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸುಮಾರು 35 ಮಂದಿ ಬೈಕ್ ಸವಾರರು ಈ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.

28 ಕೆಸಿಕೆಎಂ 1ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಚಿಕ್ಕಮಗಳೂರಿನಿಂದ ಮುತ್ತೋಡಿವರೆಗೆ ಆಯೋಜಿಸಲಾಗಿದ್ದ ಬೈಕ್ ರ್‍ಯಾಲಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಹಾಗೂ ವಿಪ ಸದಸ್ಯ ಎಸ್‌.ಎಲ್‌. ಭೋಜೇಗೌಡ ಚಾಲನೆ ನೀಡಿದರು.