ಮಕ್ಕಳ ರಕ್ಷಣೆ-ಪೋಷಣೆ ಎಲ್ಲರ ಜವಾಬ್ದಾರಿ: ನಾಗಣ್ಣಗೌಡ

| Published : Sep 01 2025, 01:04 AM IST

ಮಕ್ಕಳ ರಕ್ಷಣೆ-ಪೋಷಣೆ ಎಲ್ಲರ ಜವಾಬ್ದಾರಿ: ನಾಗಣ್ಣಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ಮಕ್ಕಳು ದೇಶದ ಆಸ್ತಿ. ಮಕ್ಕಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ, ಎಲ್ಲಾ ಇಲಾಖೆಗಳ ಸಮನ್ವಯತೆಯಿಂದ ಮಕ್ಕಳ ರಕ್ಷಣೆ ಪೋಷಣೆ ಸಾಧ್ಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಹೇಳಿದರು.

ದೊಡ್ಡಬಳ್ಳಾಪುರ: ಮಕ್ಕಳು ದೇಶದ ಆಸ್ತಿ. ಮಕ್ಕಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ, ಎಲ್ಲಾ ಇಲಾಖೆಗಳ ಸಮನ್ವಯತೆಯಿಂದ ಮಕ್ಕಳ ರಕ್ಷಣೆ ಪೋಷಣೆ ಸಾಧ್ಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಘಟಕಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಆರ್‌ಟಿಇ 2009, ಪೋಕ್ಸೋ 2012 ಹಾಗೂ ಬಾಲನ್ಯಾಯ ಕಾಯ್ದೆ 2015ರ ಅನುಷ್ಠಾನ ಕುರಿತು ವಿವಿಧ ಇಲಾಖೆ ಭಾಗಿದಾರರೊಂದಿಗೆ ಪ್ರಗತಿ ಪರಿಶೀಲನಾ ಸಭೆ ಮತ್ತು ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಮಕ್ಕಳಿಗೆ ಸರ್ಕಾರದಿಂದ ಸಿಗುವಂತಹ ಆಹಾರ, ವಸತಿ, ವಿದ್ಯಾಭ್ಯಾಸ ಇತರ ಸರ್ಕಾರಿ ಸೌಲಭ್ಯಗಳು ಉತ್ತಮ ರೀತಿಯಲ್ಲಿ ದೊರೆಯುವಂತೆ ಮಾಡಬೇಕು. ಶಾಲೆ, ವಸತಿ ನಿಲಯಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ, ವಿದ್ಯಾಭ್ಯಾಸ, ಆರೋಗ್ಯ, ಒಳ್ಳೆಯ ವಾತಾವರಣ ಕಲ್ಪಿಸಬೇಕು. ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಇಲಾಖೆಗಳ ಸಂಪರ್ಕ ಹಾಗೂ ಸಮನ್ವಯತೆ ಮುಖ್ಯ. ಎಲ್ಲಾ ಅಧಿಕಾರಿಗಳು ಮಕ್ಕಳ ರಕ್ಷಣೆ ಪೋಷಣೆಗೆ ಸದಾ ಜಾಗೃತರಾಗಿರಬೇಕು ಎಂದರು.

ಹದಿಹರೆಯದ ಹೆಣ್ಣುಮಕ್ಕಳ ಗರ್ಭಧಾರಣೆಯನ್ನು ಗಂಭೀರವಾಗಿ ಪರಿಗಣಿಸಿ ಮುಂದೆ ಇಂತಹ ಪ್ರಕರಣಗಳು ಆಗದಂತೆ ನೋಡಿಕೊಳ್ಳಬೇಕು. ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯುವಲ್ಲಿ ಅಧಿಕಾರಿಗಳು ಸದಾ ಜಾಗೃತರಾಗಿದ್ದು ಸಾರ್ವಜನಿಕರಿಗೂ ಅರಿವು ಮೂಡಿಸಬೇಕು ಎಂದರು.

ಪ್ರತಿ ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ನಾಮಫಲಕ ಕಾಡ್ಡಾಯವಾಗಿ ಪ್ರದರ್ಶಿಸಬೇಕು. ಜೊತೆಗೆ ದೂರು ಪೆಟ್ಟಿಗೆ ಇರಿಸಬೇಕು ಹಾಗೂ ಮಕ್ಕಳ ರಕ್ಷಣಾ ಸಮಿತಿ ಕಡ್ದಾಯವಾಗಿ ರಚಿಸಬೇಕು. ಶಾಲೆಗೆ ಬರದ ಮಕ್ಕಳು ಕಂಡು ಬಂದಾಗ ಆ ಮಗು ಶಾಲೆಗೆ ಬರದಿರಲು ಕಾರಣ ತಿಳಿದು ಅದನ್ನು ಪರಿಹರಿಸಬೇಕು. ಬಾಲ್ಯ ವಿವಾಹ, ಭಿಕ್ಷಾಟನೆ, ಮಕ್ಕಳ ಮಾರಾಟ, ಲೈಂಗಿಕ ದೌರ್ಜನ್ಯ, ಬಾಲ ಕಾರ್ಮಿಕ ಪದ್ಧತಿ ಕಂಡು ಬಂದಲ್ಲಿ ಸಾರ್ವಜನಿಕರು ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅಥವಾ ಪೊಲೀಸ್ ಸಹಾಯವಾಣಿ ಸಂಖ್ಯೆ 112 ಗೆ ಉಚಿತ ಕರೆ ಮಾಡಿ ದೂರು ನೀಡಬಹುದು. ಕಾಣೆಯಾದ ಅಥವಾ ಬಾಲಕಾರ್ಮಿಕ ಅಡಿಯಲ್ಲಿ ಪತ್ತೆಯಾದ ಮಕ್ಕಳನ್ನು ಕಾನೂನು ಅಡಿಯಲ್ಲಿ ರಕ್ಷಣೆ ಮಾಡಬೇಕು. ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಮಕ್ಕಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಶ್ರೀ ಶೈಲ್ ಬಾಗಾಡಿ ಮಾತನಾಡಿ, ಮಕ್ಕಳ ಹಿತ ರಕ್ಷಣೆ ಕಾಪಾಡುವುದು ನಮ್ಮ ಜವಾಬ್ದಾರಿ. ವಲಸೆ ಕಾರ್ಮಿಕರ ಮಕ್ಕಳು, ನಿರ್ಗತಿಕ ಮಕ್ಕಳನ್ನು ಮೊದಲು ಗುರುತಿಸಿ ಅವರಿಗೆ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮಾಡಿಸಿ ಸರ್ಕಾರಿ ಸೌಲಭ್ಯ ಕಲ್ಪಿಸಬೇಕು. ಕೈಗಾರಿಕಾ, ಕಾರ್ಖಾನೆಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ದೌರ್ಜನ್ಯಕ್ಕೊಳಗಾದ ಮಕ್ಕಳ ಆಂತರಿಕ ಸಮಾಲೋಚನೆ ನಡೆಸಿ ಸಮಸ್ಯೆ ಪರಿಹರಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಬಿ ಬಸವರಾಜು, ಸಿಇಒ ಡಾ.ಕೆ.ಎನ್ ಅನುರಾಧ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರ್ ಗೌಡ, ಶಶಿಧರ್ ಕೋಸಂಬೆ, ಡಾ.ತಿಪ್ಪೇಸ್ವಾಮಿ, ಮಂಜುಳ, ವೆಂಕಟೇಶ್,ಅಪರ್ಣ, ಎಎಸ್ಪಿ ನಾಗರಾಜ್, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

29ಕೆಡಿಬಿಪಿ5-

ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ನಡೆದ ಆರ್‌ಟಿಇ 2009, ಪೋಕ್ಸೋ 2012 ಹಾಗೂ ಬಾಲನ್ಯಾಯ ಕಾಯ್ದೆ 2015 ರ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ಮತ್ತು ತರಬೇತಿ ಕಾರ್ಯಗಾರ ನಡೆಯಿತು.