ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಸಂವಿಧಾನ ಬದಲಾವಣೆಗಾಗಿ ಬೆಂಬಲಿಸಿ ಎಂದು ಬಿಜೆಪಿಗರು ಕೇಳುತ್ತಿರುವುದು ಈ ದೇಶದ ದುರಂತ. ಆದರೆ ಬಹುತ್ವ ಭಾರತದ ಅಸ್ಮಿತೆಯ ಸಂಕೇತವಾಗಿರುವ ಸಂವಿಧಾನದ ಉಳಿವಿಗಾಗಿ ಕಾಂಗ್ರೆಸ್ ಅನ್ನು ಬೆಂಬಲಿಸಬೇಕಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾ ರಾಮಯ್ಯ ಹೇಳಿದರು.ಇಲ್ಲಿನ ಒಕ್ಕಲಿಗರ ಭವನದಲ್ಲಿ ಮಂಗಳವಾರ ನಡೆದ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಪೂರ್ವಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಸಂವಿಧಾನ ನಮ್ಮ ಹಕ್ಕು ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಮಹಿಳೆಯರು, ಯುವಜನರು ಮತ್ತು ಬಡವರ ವಿರೋಧಿ ಪಕ್ಷವಾಗಿದೆ. ನೋಟು ಅಮಾನ್ಯೀಕರಣ, ರೈತರ ಹಿತ ಬಲಿಕೊಡುವ ಕಾಯ್ದೆಗಳನ್ನು ಜಾರಿಗೆ ತಂದು ದೇಶದ ಸಾಮಾಜಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಅಪಕೀರ್ತಿ ಆ ಪಕ್ಷಕ್ಕೆ ಸಲ್ಲುತ್ತದೆ ಎಂದ ಅವರು, ಕಾಂಗ್ರೆಸ್ ದೇಶ ಕಟ್ಟುವ ಕೆಲಸ ಮಾಡಿದೆ. 10 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಕಾಂಗ್ರೆಸ್‌ನ ದಶಕಗಳ ಪರಿಶ್ರಮದ ಫಲವನ್ನು ತನ್ನ ಸಾಧನೆಯೆಂದು ಬಿಂಬಿಸಿಕೊಳ್ಳುವ ಕೆಲಸವನ್ನಷ್ಟೇ ಮಾಡಿದೆ ಎಂದು ಟೀಕಿಸಿದರು.ಸುಧಾಕರ್ ವಿರುದ್ಧ ಬಿಜೆಪಿಗರಿಂದಲೇ ಆರೋಪ:
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ವಿರುದ್ಧ ಸ್ವಪಕ್ಷೀಯರೇ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅವರು ಸಚಿವರಾಗಿದ್ದ ವೇಳೆ ನಡೆದಿದೆ ಎನ್ನಲಾದ ಹಗರಣಗಳ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಕೋರೋನಾ ಮತ್ತು ಗೋ ಬ್ಯಾಂಕ್‌ಗಳ ಮೂಲಕ ಅಪಾರ ಮೊತ್ತದ ಹಗರಣ ನಡೆದಿದೆ ಎಂಬ ಆರೋಪಗಳಿಗೆ ಅವರು ಸೂಕ್ತ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಶಾಸಕರಿಂದ ಸುಳ್ಳು ಹೇಳಿಕೆ:
ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ದೊಡ್ಡಬಳ್ಳಾಪುರದ ಹಾಲಿ ಶಾಸಕರು ಜಿಲ್ಲಾಸ್ಪತ್ರೆಯ ವಿಚಾರದಲ್ಲಿ ಜನರಿಗೆ ಸುಳ್ಳು ಹೇಳಿದ್ದಾರೆ. ಜಿಲ್ಲಾಸ್ಪತ್ರೆ ದೊಡ್ಡಬಳ್ಳಾಪುರಕ್ಕೆ ಬರಬೇಕಾದರೆ ತಮ್ಮ ಪರಿಶ್ರಮವಿದೆ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರ ಮೂಲಕ ದೊಡ್ಡಬಳ್ಳಾಪುರದಲ್ಲೇ ಸ್ಥಾಪನೆಯಾಗಲು ಶ್ರಮವಹಿಸಲಾಗಿದೆ. ಜಿಲ್ಲಾಡಳಿತ ಭವನ ತಾಲೂಕಿನ ಗಡಿಭಾಗದಲ್ಲಿ ಸ್ಥಾಪನೆಯಾದ ಹಿನ್ನೆಲೆ ಮುಂಬರುವ ಜಿಲ್ಲಾ ಮಟ್ಟದ ಮಹತ್ವದ ಯೋಜನೆಗಳನ್ನು ದೊಡ್ಡಬಳ್ಳಾಪುರದಲ್ಲಿ ಅನುಷ್ಠಾನಕ್ಕೆ ತರಬೇಕು ಎಂಬ ಕುರಿತು ಜಿಪಂಯಲ್ಲಿ ನಿರ್ಧಾರವಾಗಿತ್ತು. ಆದರೆ ಹಲವು ಯೋಜನೆಗಳು ಕ್ಷೇತ್ರದಿಂದ ದೂರವಾಗುತ್ತಿವೆ. ಇದಕ್ಕೆ ಶಾಸಕರ ನಿಷ್ಕ್ರಿಯತೆ ಕಾರಣ. ದೊಡ್ಡಬಳ್ಳಾಪುರ ಅಭಿವೃದ್ಧಿ ವಿಚಾರದಲ್ಲಿ 25 ವರ್ಷ ಹಿಂದಕ್ಕೆ ಸರಿದಿದೆ ಎಂದು ಆರೋಪಿಸಿದರು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ರವಿ , ಜಿಪಂ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ತಾಲೂಕು ಅಧ್ಯಕ್ಷ ಬೈರೇಗೌಡ, ನಗರಾಧ್ಯಕ್ಷ ಕೆ.ಪಿ.ಜಗನ್ನಾಥ್, ಕಸಬಾ ಅಧ್ಯಕ್ಷ ವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ವಿಧಾನ ಪರಿಷತ್ ಸ್ಪರ್ಧಾಕಾಂಕ್ಷಿ ರಾಮೋಜಿಗೌಡ ಸೇರಿದಂತೆ ವಿವಿಧ ಘಟಕಗಳ ಮುಖ್ಯಸ್ಥರು, ಪದಾಧಿಕಾರಿಗಳು ಹಾಜರಿದ್ದರು.
ಯುವ ಸಮುದಾಯಕ್ಕೆ ಕಾಂಗ್ರೆಸ್ ಆದ್ಯತೆ :ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ಯುವಜನತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಈ ಬಾರಿ ರಾಜ್ಯದಲ್ಲಿ 9 ಜನ ಯುವಕ-ಯುವತಿಯರಿಗೆ ಟಿಕೆಟ್ ನೀಡಿದೆ. ಯುವ ನಾಯಕತ್ವ ಬೆಳೆಸುವ ಮಹತ್ವಾಕಾಂಕ್ಷೆ ಸಾಬೀತು ಮಾಡಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ನಾಲ್ಕೂವರೆ ಕೋಟಿಗೂ ಅಧಿಕ ಜನರನ್ನು ತಲುಪುತ್ತಿವೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಯುವ ಉತ್ಸಾಹಿ ಹಾಗೂ ಸೇವಾ ಹಿನ್ನೆಲೆಯ ಅಭ್ಯರ್ಥಿಯನ್ನು ನೀಡಲಾಗಿದ್ದು, ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.