ಸಾರಾಂಶ
ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸುವ ಅವಕಾಶವನ್ನು ಸಂವಿಧಾನ ನೀಡಿದೆ. ನಾವು ತಪ್ಪದೇ ಮತದಾನ ಮಾಡುವ ಮೂಲಕ ನಮ್ಮ ಹಕ್ಕು ಚಲಾಯಿಸಬೇಕು.
ಧಾರವಾಡ:
ಚುನಾವಣಾ ಕಾರ್ಯಗಳ ಜವಾಬ್ದಾರಿ ಹೊತ್ತಿರುವ ಎಲ್ಲ ಅಧಿಕಾರಿ, ಸಿಬ್ಬಂದಿ ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿದರೆ ಮಾತ್ರ ಸಾರ್ವತ್ರಿಕ ಚುನಾವಣೆಗಳು ಯಶಸ್ವಿಯಾಗಿ ಜರುಗುತ್ತವೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.ಭಾರತ ಚುನಾವಣಾ ಆಯೋಗ ಜಿಲ್ಲಾಡಳಿತದ ಸಹಯೋಗದಲ್ಲಿ ಇಲ್ಲಿಯ ಆಲೂರು ವೆಂಕಟರಾವ್ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮತದಾರ ದಿನಾಚರಣೆಯಲ್ಲಿ ಮಾತನಾಡಿದರು.
ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸುವ ಅವಕಾಶವನ್ನು ಸಂವಿಧಾನ ನೀಡಿದೆ. ನಾವು ತಪ್ಪದೇ ಮತದಾನ ಮಾಡುವ ಮೂಲಕ ನಮ್ಮ ಹಕ್ಕು ಚಲಾಯಿಸಬೇಕು ಎಂದ ಅವರು, ಯುವ ಮತದಾರರನ್ನು ಸೆಳೆಯಲು, ಭಾರತ ಚುನಾವಣಾ ಆಯೋಗ ಆ್ಯಪ್ ಬಿಡುಗಡೆ ಮಾಡಿದೆ. ತಮ್ಮ ಆ್ಯಂಡ್ರೈಡ್ ಮೊಬೈಲ್ ಮೂಲಕ ವಿಎಚ್ಐ ಆ್ಯಪ್ ಬಳಸಿ, ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ, ಪಿ.ಎಫ್. ದೊಡ್ಡಮನಿ ಮಾತನಾಡಿ, ರಾಷ್ಟ್ರೀಯ ಮತದಾನ ದಿನಾಚರಣೆಯಲ್ಲಿ ಸಾರ್ವಜನಿಕರ ಜಾಗೃತಿ ಕಾರ್ಯಕ್ರಮಗಳು ಹೆಚ್ಚು ಸಂಘಟಿಸಬೇಕು ಎಂದರು.
ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಕವಿವಿ ಕುಲಸಚಿ ಡಾ. ಚೆನ್ನಪ್ಪ ಮಾತನಾಡಿದರು. ಜಿಲ್ಲಾ ಚುನಾವಣಾ ರಾಯಭಾರಿ, ಅಂತಾರಾಷ್ಟ್ರೀಯ ಪ್ಯಾರಾ ರೈಪಲ್ ಶೂಟರ್ ಜ್ಯೋತಿ ಸಣ್ಣಕ್ಕಿ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ವಿಕಲಚೇತನರಿಗೆ ಸಾಕಷ್ಟು ಅನಕೂಲವಾಗಿದೆ. ಮನೆಯಿಂದ ಮತದಾನ, ವ್ಹಿಲ್‌ಚೇರ್, ರ್‍ಯಾಂಪ್ ಸೌಲಭ್ಯ ಮಾಡಲಾಗಿದೆ. ಪ್ರತಿ ಚುನಾವಣೆಗಳಲ್ಲಿ ಶೇ. 100ರಷ್ಟು ಮತದಾನ ಮಾಡಿ ಎಲ್ಲ ಚುನಾವಣೆಗಳನ್ನು ಯಶಸ್ವಗೊಳಿಸೋಣ ಎಂದು ಕರೆ ನೀಡಿದರು.ಜಿಪಂ ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಚುನಾವಣಾ ರಾಯಭಾರಿ ರಾಕೇಶ ನಿಡಗುಂದಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ಕೆ.ಎಂ. ಶೇಖ ಮತ್ತಿತರರು ಇದ್ದರು.
ಜಿಲ್ಲಾ ಮಟ್ಟದ ಬಿಎಲ್‌ಒ ಮೇಲ್ವಿಚಾರಕರಾಗಿ ಗ್ರಾಮ ಆಡಳಿತ ಅಧಿಕಾರಿ ಕರಿಯಪ್ಪ ಗುಡ್ಡದ ಮತ್ತು ಉತ್ತಮ ಬಿಎಲ್‌ಒ ಆಗಿ ಅಂಗನವಾಡಿ ಕಾರ್ಯಕರ್ತೆ ಸವಿತಾ ಶೀಲವಂತರಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಧಾರವಾಡ 71 ಮತಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಮತಗಟ್ಟೆ ಮೇಲ್ವಿಚಾರಕರಾದ ಆನಂದ ಆನಿಕಿವಿ, ಸಾವಿತ್ರಿ ಡೊಣ್ಣಿ, ಮಂಜುನಾಥ ಬಾಗೇವಾಡಿ ಅವರನ್ನು ಹಾಗೂ ಉತ್ತಮ ಬಿಎಲ್‌ಒಗಳಾದ ಶ್ರುತಿ ಕಡ್ಲಿಮಠ, ವಿಜಯಾ ನದಗಂಟಿ ಮತ್ತು ಗೌರವ್ವ ಚರಂತಿಮಠ ಅವರಿಗೆ ಪ್ರಶಸ್ತಿ ನೀಡಲಾಯಿತು.