ಮೂಲಭೂತ ಹಕ್ಕುಗಳ ರಕ್ಷಿಸುವುದೇ ಪ್ರಜಾಪ್ರಭುತ್ವ : ಟಿ.ಡಿ. ರಾಜೇಗೌಡ

| Published : Sep 16 2024, 01:51 AM IST

ಮೂಲಭೂತ ಹಕ್ಕುಗಳ ರಕ್ಷಿಸುವುದೇ ಪ್ರಜಾಪ್ರಭುತ್ವ : ಟಿ.ಡಿ. ರಾಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ವಿವಿಧತೆಯಲ್ಲಿ ಏಕತೆ ಸಾರುವ ನಮ್ಮ ಹೆಮ್ಮೆಯ ರಾಷ್ಟ್ರದ ವೈವಿಧ್ಯಮಯ ಧ್ವನಿಗಳ ಅಭಿವ್ಯಕ್ತಿಗೆ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಗೆ ಅವಕಾಶ ನೀಡುವ ಆಡಳಿತ ವ್ಯವಸ್ಥೆಯೇ ಪ್ರಜಾಪ್ರಭುತ್ವದ ಜೀವಾಳ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹೇಳಿದ್ದಾರೆ.

- ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ । ಮಾನವ ಬಂಧುತ್ವ ಗಟ್ಟಿಗೆ ಮಾನವ ಸರಪಳಿ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿವಿಧತೆಯಲ್ಲಿ ಏಕತೆ ಸಾರುವ ನಮ್ಮ ಹೆಮ್ಮೆಯ ರಾಷ್ಟ್ರದ ವೈವಿಧ್ಯಮಯ ಧ್ವನಿಗಳ ಅಭಿವ್ಯಕ್ತಿಗೆ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಗೆ ಅವಕಾಶ ನೀಡುವ ಆಡಳಿತ ವ್ಯವಸ್ಥೆಯೇ ಪ್ರಜಾಪ್ರಭುತ್ವದ ಜೀವಾಳ ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹೇಳಿದ್ದಾರೆ.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಭಾನುವಾರ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಮಾನವ ಸರಪಳಿ ಕಾರ್ಯ ಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್‌ ರಾಮ್‌ ಭಾವಚಿತ್ರ ಮತ್ತು ಸಂವಿಧಾನ ಪೀಠಿಕೆಗೆ ಪುಷ್ಪಾ ನಮನ ಸಲ್ಲಿಸಿ ಮಾತನಾಡಿದರು. ಪ್ರಜಾಪ್ರಭುತ್ವ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯಕ್ಕಾಗಿ ನಮ್ಮ ಅತ್ಯುನ್ನತ ಆಕಾಂಕ್ಷೆಗಳನ್ನು ಸಾಕಾರ ಗೊಳಿಸುವ ಶಕ್ತಿಯುತ ಮತ್ತು ಕ್ರಿಯಾತ್ಮಕ ಶಕ್ತಿಯಾಗಿದೆ ಎಂದರು.ಭಾರತ ಅತ್ಯಂತ ಭವ್ಯ ಮತ್ತು ಯಶಸ್ವಿ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ ದೇಶ. ದೇಶದಲ್ಲಿ ಪರಿಣಾಮಕಾರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೂಲ ಡಾ. ಬಿ.ಆರ್. ಅಂಬೇಡ್ಕರ್ ಅವರಿಂದ ರಚಿತವಾದ ಸಂವಿಧಾನ ಎಂದು ಹೇಳಿದರು.ನಮ್ಮ ಸಂವಿಧಾನ ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವಾಗಿದ್ದು, ಪ್ರಜೆಗಳ ಹಿತಾಸಕ್ತಿಗೆ ಅನುಗುಣವಾಗಿ ರೂಪಿತಗೊಂಡ ಸಂವಿಧಾನ ವಾಗಿದೆ. ಬ್ರಿಟೀಷ್ ಆಡಳಿತದಿಂದ ಮುಕ್ತಗೊಂಡ ನಂತರದಲ್ಲಿ ಭಾರತದ ಪ್ರಜೆಯಾದ ನಾವು ನಮ್ಮ ದೇಶವನ್ನು ಸಾರ್ವಭೌಮ ಸಮಾಜವಾದಿ, ಧರ್ಮ ನಿರಪೇಕ್ಷಿತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರೂಪಿಸಲು ವ್ಯವಸ್ಥಿತವಾದ ಸಂವಿಧಾನವನ್ನು ನಮಗೆ ನಾವು ಅರ್ಪಿಸಿ ಕೊಂಡಿದ್ದೇವೆ ಎಂದು ಹೇಳಿದರು.

ನಮ್ಮ ಸಂವಿಧಾನ ಭಾರತದ ಪ್ರತಿ ಪ್ರಜೆಗೂ ಆರ್ಥಿಕ, ಸಾಮಾಜಿಕ, ರಾಜಕೀಯ ನ್ಯಾಯ, ವಿಚಾರ ಅಭಿವ್ಯಕ್ತಿ ನಂಬಿಕೆ, ಧರ್ಮ ಮತ್ತು ಉಪಾಸನೆ ಸ್ವಾತಂತ್ರ್ಯ ದೊರಕಿಸಿದೆ. ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ ನೀಡಿ. ಪ್ರತಿ ವ್ಯಕ್ತಿಯ ಗೌರವ, ದೇಶದ ಏಕತೆ ಮತ್ತು ಸಮಗ್ರತೆ ಉಳಿವಿಗೆ ಭಾರತದಲ್ಲಿ ಪ್ರತಿಯೊಬ್ಬರು ಸಹೋದರ ಭಾವನೆಯಿಂದ ತಮ್ಮ ಜೀವನ ನಿರ್ವಹಿಸುವ ಉದ್ದೇಶದಿಂದ ಸ್ಥಾಪಿತವಾದ ನಮ್ಮ ಸಂವಿಧಾನ ಪ್ರಜಾಪ್ರಭುತ್ವದ ಮಹತ್ವ ಸಾರುತ್ತದೆ ಎಂದರು.ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಭಾರತ ಅನೇಕ ಧರ್ಮ, ಸಂಸ್ಕೃತಿ ಭಾಷೆಗಳ ವಿವಿಧತೆಯಿಂದ ಕೂಡಿದ ದೇಶವಾಗಿದ್ದು, ವಿವಿಧತೆಯಲ್ಲಿ ಏಕತೆ ಸಾರುವ ಸಂವಿಧಾನವನ್ನು ನಾವು ರೂಪಿಸಿಕೊಂಡಿದ್ದೆವೆ. ಸಂವಿಧಾನತ್ಮಕ ಹಕ್ಕುಗಳ ಪಡೆಯುವುದರೊಂದಿಗೆ ಅದರ ಕರ್ತವ್ಯ ಪಾಲನೆ ಬಹುಮುಖ್ಯ. ಜಾತ್ಯಾತೀತತೆಯಿಂದ, ಧರ್ಮ ನಿರಪೇಕ್ಷಿತ ರಾಷ್ಟ್ರ ನಿರ್ಮಾಣ ಮಾಡುವುದು ಸಂವಿಧಾನದ ಆಶಯ ಭಾರತದಲ್ಲಿ ಪ್ರತಿಯೊಬ್ಬರು ಭ್ರಾತೃತ್ವ ಮನೋಭಾವದಿಂದ ಬದುಕಬೇಕು. ಅಂಬೇಡ್ಕರ್‌ ಚಿಂತನೆಗಳನ್ನು ಮೈಗೂಡಿಸಿಕೊಂಡು ಪಾಲಿಸಿದಲ್ಲಿ ಭಾರತ ವಿಶ್ವಗುರು ಸ್ಥಾನ ಪಡೆಯಲು ಸಾಧ್ಯ ಎಂದ ಅವರು ಯುವ ಜನತೆ ಸಂವಿಧಾನವನ್ನು ಅರಿತು ಅದರ ಸಂರಕ್ಷಣೆಗೆ ಮುಂದಾಗಬೇಕು ಎಂದರು.

-- ಬಾಕ್ಸ್-- ಮಾನವ ಸರಪಳಿ:

ರಾಜ್ಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ 2,500 ಕಿ.ಮೀ. ಉದ್ದದ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಮಾಗಡಿ ಗಡಿಯಿಂದ ತರೀಕೆರೆ ತಾಲೂಕಿನ ಎಂ.ಸಿ. ಹಳ್ಳಿ ವರೆಗೆ 92 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಿಸಲಾಗಿತ್ತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಸ್ವಯಂ ಪ್ರೇರಿತವಾಗಿ ಮಾನವ ಸರಪಳಿ ನಿರ್ಮಿಸುವ ಮೂಲಕ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮಹತ್ವ ಸಾರುವ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್. ಹರೀಶ್, ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಉಪಾಧ್ಯಕ್ಷೆ ಅನು ಮಧುಕರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದರ್ ಕುಮಾರ್ ದಹೀಮ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಉಪ ವಿಭಾಗಾಧಿಕಾರಿ ದಲ್ಜೀತ್ ಕುಮಾರ್, ತಹಸೀಲ್ದಾರ್ ಡಾ. ಸುಮಂತ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಯೋಗಿಶ್, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.15 ಕೆಸಿಕೆಎಂ 1ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾನುವಾರ ಚಿಕ್ಕಮಗಳೂರಿನಲ್ಲಿ ಮಾನವ ಸರಪಳಿ ರಚನೆ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದಲಾಯಿತು. ಶಾಸಕ ಟಿ.ಡಿ. ರಾಜೇಗೌಡ, ಎಂಎಲ್‌ಸಿ ಸಿ.ಟಿ. ರವಿ, ಬಿ.ಎಚ್‌. ಹರೀಶ್‌, ಮೀನಾ ನಾಗರಾಜ್‌, ಸುಜಾತ ಶಿವಕುಮಾರ್‌ ಇದ್ದರು.