ಧಾರ್ಮಿಕ ಶ್ರದ್ಧೆಯಿಂದ ದೇಶ ರಕ್ಷಣೆ: ಡಾ. ವೀರೇಂದ್ರ ಹೆಗ್ಗಡೆ

| Published : Apr 29 2024, 01:30 AM IST

ಸಾರಾಂಶ

ರಾಜಸ್ಥಾನದ ಜೈಪುರದಲ್ಲಿ ಸುಮಾರು ೬ ಲಕ್ಷ ರು. ವೆಚ್ಚದಲ್ಲಿ ತಯಾರಾದ ಕ್ಷೀರ ವರ್ಣದ ೫ ಅಡಿಯ ಮಹಾವೀರ ಸ್ವಾಮಿಯ ಜಿನಬಿಂಬದ ಮೆರವಣಿಗೆ, ತೋರಣ ಮುಹೂರ್ತ, ದ್ರವ್ಯಾಭಿಷೇಕ, ಅಷ್ಟವಿಧಾರ್ಚನೆ ಪೂಜೆ, ಮಹಾಮಂಗಳಾರತಿ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಬಂಧನಗಳನ್ನು ಕಳಚಿಕೊಂಡು, ಕರ್ಮಗಳನ್ನು ಶುದ್ಧೀಕರಣ ಮಾಡಿಕೊಳ್ಳಬೇಕು. ಇಂತಹ ಧಾರ್ಮಿಕ ಶ್ರದ್ಧೆ ಇದ್ದಾಗ ಮಾತ್ರ ದೇಶ ಉಳಿಯುತ್ತದೆ. ಜೈನ ಸಮಾಜ ವೈಯಕ್ತಿಕ ಚಿಂತನೆ, ಉತ್ತಮ ಆಚಾರಗಳಿಂದ ಭಿನ್ನವಾಗಿ ಗುರುತಿಸಿಕೊಳ್ಳಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಡಾ. ಡಿ. ವೀರೇಂದ್ರ ಹೆಗ್ಗಡೆ ನುಡಿದರು.

ಅವರು ಶನಿವಾರ ಸಂಜೆ ದ.ಕ. ಜಿಲ್ಲಾ ಜೈನ ಸಮಾಜದ ಸಹಯೋಗದೊಂದಿಗೆ ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾದ ಭಗವಾನ್ ಶ್ರೀ ಮಹಾವೀರ ಸ್ವಾಮಿ ಜನ್ಮಕಲ್ಯಾಣ ಮಹೋತ್ಸವವದಲ್ಲಿ ಧಾರ್ಮಿಕ ಸಂದೇಶ ನೀಡಿದರು.

ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಮೂಡುಬಿದಿರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಸಾತ್ವಿಕ ಆಹಾರ, ಸ್ವಚ್ಛ ಚಿಂತನೆಯಿಂದ ಮಾನವ ಧರ್ಮವು ಸುಂದರಗೊಳ್ಳುತ್ತದೆ. ಸರಳವಾದ ಜೀವನಕ್ರಮ, ಕರ್ಮಗಳ ಬಂಧನಗಳಿಂದ ಮುಕ್ತಿ ಪಡೆದ ಮಹಾವೀರ ಸ್ವಾಮಿಯ ಜೀವನದ ಆದರ್ಶಗಳನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಂಡಾಗ ವೀತರಾಗಿಗಳಾಗಲು ಸಾಧ್ಯ ಎಂದರು.

ಹಿಂಸೆಯನ್ನು ನಿಗ್ರಹಿಸುವ ನಡತೆ ಇದ್ದಾಗ ಪೊಲೀಸ್ ಮಿಲಿಟರಿಗಳ ಅಗತ್ಯವೇ ಇರುವುದಿಲ್ಲ. ಹಾಗಾಗಿ ಜನತೆಯ ಮನ ಹೂವಿನಂತೆ, ಜ್ಞಾನ ದೀಪದಂತೆ ಆಗಲಿ ಎಂದು ಹಾರೈಸಿದರು.

ಸಾಹಿತ್ಯ ಕ್ಷೇತ್ರದ ಸಾಧಕಿ ವೀಣಾ ಬಿ.ಆರ್. ಶೆಟ್ಟಿ, ಸಂಗೀತ ಕಲಾವಿದೆ ಜಯಶ್ರೀ ಡಿ. ಅವರನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವ ಅಭಯಚಂದ್ರ ಜೈನ್, ಚೌಟರ ಅರಮನೆಯ ಕುಲದೀಪ್‌ ಜೈನ್, ಪಟ್ನಶೆಟ್ಟಿ ಸುಧೇಶ್ ಕುಮಾರ್, ಆನಡ್ಕ ದಿನೇಶ್‌ ಕುಮಾರ್, ಚೌಟರ ಅರಮನೆಯ ಆದರ್ಶ ಜೈನ್, ಜೈನ್ ಮಿಲನ್ ರಾಜ್ಯಾಧ್ಯಕ್ಷ ಯುವರಾಜ್ ಭಂಡಾರಿ, ಡಾ.ಎಂ. ಮೋಹನ ಆಳ್ವ ಉಪಸ್ಥಿತರಿದ್ದರು. ಮುನಿರಾಜ ರೆಂಜಾಳ ನಿರೂಪಿಸಿದರು.

ಹೊರನಾಡಿನ ಜಯಶ್ರೀ ಧರಣೇಂದ್ರ ಜೈನ್ ಮತ್ತು ಬಳಗದವರಿಂದ ಜಿನಭಕ್ತಿಗಾಯನ ನಡೆಯಿತು. ರಾಜಸ್ಥಾನದ ಜೈಪುರದಲ್ಲಿ ಸುಮಾರು ೬ ಲಕ್ಷ ರು. ವೆಚ್ಚದಲ್ಲಿ ತಯಾರಾದ ಕ್ಷೀರ ವರ್ಣದ ೫ ಅಡಿಯ ಮಹಾವೀರ ಸ್ವಾಮಿಯ ಜಿನಬಿಂಬದ ಮೆರವಣಿಗೆ, ತೋರಣ ಮುಹೂರ್ತ, ದ್ರವ್ಯಾಭಿಷೇಕ, ಅಷ್ಟವಿಧಾರ್ಚನೆ ಪೂಜೆ, ಮಹಾಮಂಗಳಾರತಿ ಹಮ್ಮಿಕೊಳ್ಳಲಾಯಿತು.