ಅಮಿತ್ ಶಾ ಹೇಳಿಕೆ ಖಂಡಿಸಿ ರಾಣಿಬೆನ್ನೂರಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ

| Published : Dec 22 2024, 01:35 AM IST

ಅಮಿತ್ ಶಾ ಹೇಳಿಕೆ ಖಂಡಿಸಿ ರಾಣಿಬೆನ್ನೂರಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಕುರಿತು ಅವಮಾನಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಡಾ. ಬಿ.ಆರ್. ಅಂಬೇಡ್ಕರ್ ಸೇವಾ ಸಂಸ್ಥೆ , ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ), ಭೀಮ್ ಆರ್ಮಿ, ಛಲವಾದಿ ಮಹಾಸಭಾ ಸೇರಿದಂತೆ ವಿವಿಧ ದಲಿತಪರ ಹಾಗೂ ಪ್ರಗತಿಪರ ಒಕ್ಕೂಟದಿಂದ ಶನಿವಾರ ತಹಸೀಲ್ದಾರ್‌ ಆರ್.ಎಚ್. ಭಾಗವಾನ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ರಾಣಿಬೆನ್ನೂರು: ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಕುರಿತು ಅವಮಾನಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಡಾ. ಬಿ.ಆರ್. ಅಂಬೇಡ್ಕರ್ ಸೇವಾ ಸಂಸ್ಥೆ , ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ), ಭೀಮ್ ಆರ್ಮಿ, ಛಲವಾದಿ ಮಹಾಸಭಾ ಸೇರಿದಂತೆ ವಿವಿಧ ದಲಿತಪರ ಹಾಗೂ ಪ್ರಗತಿಪರ ಒಕ್ಕೂಟದಿಂದ ಶನಿವಾರ ತಹಸೀಲ್ದಾರ್‌ ಆರ್.ಎಚ್. ಭಾಗವಾನ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಯುವ ಮುಖಂಡ ಬೀರಪ್ಪ ಲಮಾಣಿ ಮಾತನಾಡಿ, ಅಮಿತ್ ಶಾ ಹೇಳಿಕೆ ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಹಾಗೂ ದಲಿತರ ಬಗೆಗಿನ ಅಸಹನೆ ಹೊರಹಾಕಿದಂತಿದೆ. ಭಾರತ ದೇಶಕ್ಕೆ ಇಂದು ಜಗತ್ತಿನಾದ್ಯಂತ ಕೊಂಡಾಡುವಂತಹ ಬೃಹತ್ ಸಂವಿಧಾನ ಹಾಗೂ ಸುಭದ್ರ ಪ್ರಜಾಪ್ರಭುತ್ವ ನೀಡಿದ ಮೇರು ಪ್ರತಿಭೆಗೆ ಇಂತಹ ಅವಮಾನಕರ ಹೇಳಿಕೆ ಖಂಡನೀಯ. ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾದ ದಲಿತ ಶೋಷಿತ ಮಹಿಳೆಯರನ್ನು, ಹಿಂದುಳಿದ ಅಲ್ಪಸಂಖ್ಯಾತ ಸಮುದಾಯಗಳನ್ನು ಗುಲಾಮಗಿರಿಯಿಂದ ಸಂವಿಧಾನದ ಮೂಲಕ ಮುಕ್ತಿ ಮಾಡಿದ್ದು ಡಾ. ಬಾಬಾಸಾಹೇಬ್ ಅಂಬೇಡ್ಕರ್‌ ಅವರೇ ಹೊರತು ಯಾವ ಧರ್ಮ ದೇವರುಗಳಲ್ಲ ಎಂದರು.

ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ನಾವೆಲ್ಲ ಇಂದು ಉತ್ತಮ ಜೀವನ ನಡೆಸುವುದಕ್ಕೆ ಹಾಗೂ ಅಮಿತ್ ಶಾ ಮೋದಿಯಂತಹ ನಾಯಕರು ಇಂದು ಅಧಿಕಾರವನ್ನು ನಡೆಸುತ್ತಿರುವುದು ಅಂಬೇಡ್ಕರ್ ಸಂವಿಧಾನದ ದೆಸೆಯಿಂದ. ಇಲ್ಲದಿದ್ದರೆ ಇನ್ನೂ ಗುಲಾಮಗಿರಿ ಬದುಕು ನಡೆಸಬೇಕಾಗಿತ್ತು. ಆದ ಕಾರಣ ಕೇಂದ್ರ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಬಗ್ಗೆ ನೀಡಿದ ಅವಮಾನಕರ ಹೇಳಿಕೆ ಬಗ್ಗೆ ರಾಷ್ಟ್ರಪತಿ ಸೂಕ್ತ ಕ್ರಮ ತೆಗೆದುಕೊಂಡು ಕೂಡಲೇ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಬಸವರಾಜ ಸಾವಕ್ಕನವರ, ಅಂಬೇಡ್ಕರ್ ಸೇವಾ ಸಂಸ್ಥೆ ಸಂಸ್ಥಾಪಕ ಶ್ರೀಧರ್ ಚಲವಾದಿ ಮಾತನಾಡಿದರು.

ಆಂಜನೇಯ ಚಲವಾದಿ, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಮಲ್ಲೇಶ್ ನಿಂಗಮ್ಮನವರ, ಪರಶುರಾಮ ಕುರುವತ್ತಿ, ಗುಡ್ಡಪ್ಪ ಮಡಿವಾಳರ, ನವೀನ ಲಮಾಣಿ, ಮಹೇಶ, ಮಾಲತೇಶ ಸಾವಕ್ಕನವರ, ಗುಡ್ಡೇಶ ಮದ್ಲೇರ, ಸಚಿನ್, ಸಂತೋಷ್ ಸಾ ಸಾವಕ್ಕನವರ, ಅರುಣ್ ಚಲವಾದಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.