ಡಾ. ಕಿಟೆಲ್‌ ಸೇರಿದಂತೆ ಕ್ರಿಶ್ಚಿಯನ್‌ ಮಿಶನರಿಗಳು ಭಾರತದಲ್ಲಿ ಶಿಕ್ಷಣ, ಆರೋಗ್ಯ ಸೇವೆ, ಸಾಮಾಜಿಕವಾಗಿ ನಿಸ್ವಾರ್ಥ ಸೇವೆ ಸಲ್ಲಿಸಿವೆ. ಈಗಲೂ ಸಲ್ಲಿಸುತ್ತಿವೆ. ಯಾವುದೇ ಆಸೆ- ಆಕಾಂಕ್ಷೆ ಇಲ್ಲದೇ ಸೇವೆ ಸಲ್ಲಿಸುತ್ತಿರುವ ಕ್ರೈಸ್ತ ಸನ್ಯಾಸಿಯರ ಮೇಲೆ ಆಧಾರ ರಹಿತವಾಗಿ ಆರೋಪ ಮಾಡಿ ಛತ್ತೀಸಗಢದಲ್ಲಿ ಸಿಸ್ಟರ್ಸ್ ವಂದನಾ ಫ್ರಾನ್ಸಿಸ್ ಮತ್ತು ಸಿಸ್ಟರ್‌ ಪ್ರೀತಿ ಮೇರಿ ಅವರನ್ನು ಬಂಧಿಸಲಾಗಿದೆ.

ಧಾರವಾಡ: ಛತ್ತೀಸ್‌ಗಢದಲ್ಲಿ ಮಾನವ ಕಳ್ಳಸಾಗಣೆ ಮತ್ತು ಬಲವಂತದ ಮತಾಂತರದ ಆಧಾರ ರಹಿತ ಆರೋಪಗಳ ಮೇಲೆ ಇಬ್ಬರು ಕ್ಯಾಥೋಲಿಕ್‌ ಸನ್ಯಾಸಿಯರನ್ನು ಬಂಧಿಸಿರುವುದನ್ನು ಸಾಧನಾ ರಾಷ್ಟ್ರೀಯ ಮಹಿಳಾ ವೇದಿಕೆ ನೇತೃತ್ವದಲ್ಲಿ ನಗರದ ಕ್ರೈಸ್ತ ಸನ್ಯಾಸಿಗಳು ಗುರುವಾರ ಪ್ರತಿಭಟಿಸಿದರು.

ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದ ಕ್ರೈಸ್ತ ಸನ್ಯಾಸಿಗಳು, ಡಾ. ಕಿಟೆಲ್‌ ಸೇರಿದಂತೆ ಕ್ರಿಶ್ಚಿಯನ್‌ ಮಿಶನರಿಗಳು ಭಾರತದಲ್ಲಿ ಶಿಕ್ಷಣ, ಆರೋಗ್ಯ ಸೇವೆ, ಸಾಮಾಜಿಕವಾಗಿ ನಿಸ್ವಾರ್ಥ ಸೇವೆ ಸಲ್ಲಿಸಿವೆ. ಈಗಲೂ ಸಲ್ಲಿಸುತ್ತಿವೆ. ಯಾವುದೇ ಆಸೆ- ಆಕಾಂಕ್ಷೆ ಇಲ್ಲದೇ ಸೇವೆ ಸಲ್ಲಿಸುತ್ತಿರುವ ಕ್ರೈಸ್ತ ಸನ್ಯಾಸಿಯರ ಮೇಲೆ ಆಧಾರ ರಹಿತವಾಗಿ ಆರೋಪ ಮಾಡಿ ಛತ್ತೀಸಗಢದಲ್ಲಿ ಸಿಸ್ಟರ್ಸ್ ವಂದನಾ ಫ್ರಾನ್ಸಿಸ್ ಮತ್ತು ಸಿಸ್ಟರ್‌ ಪ್ರೀತಿ ಮೇರಿ ಅವರನ್ನು ಬಂಧಿಸಲಾಗಿದೆ. ಜತೆಗೆ ಅಲ್ಲಿಯ ಪೊಲೀಸರು ಅಮಾನವೀಯವಾಗಿ ಅವರೊಂದಿಗೆ ನಡೆದುಕೊಂಡಿದ್ದಾರೆ. ಕೂಡಲೇ ಇಬ್ಬರು ಸನ್ಯಾಸಿಯರನ್ನು ಖುಲಾಸೆಗೊಳಿಸಬೇಕು. ಮಾನವ ಹಕ್ಕುಗಳನ್ನು ರಕ್ಷಿಸಬೇಕು ಎಂದು ವೇದಿಕೆ ಅಧ್ಯಕ್ಷ ಇಸಬೆಲ್ಲಾ ಝೇವಿಯರ್‌ ಹೇಳಿದರು. ಜತೆಗೆ ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಗರದ ವಿವಿಧೆಡೆಯ ಶಿಕ್ಷಣ ಹಾಗೂ ಆರೋಗ್ಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕ್ರೈಸ್ತ ಬಂಧುಗಳಿದ್ದರು.